ಹೈದರಾಬಾದ್: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಸಕಲ ಪಕ್ಷಗಳು ಸಿದ್ಧತೆ ಕೈಗೊಳ್ಳುತ್ತಿವೆ. ಇದರ ಮಧ್ಯೆಯೇ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಭಾರತ್ ರಾಷ್ಟ್ರ ಸಮಿತಿ (BRS Public Meeting)ಯ ಮೊದಲ ಸಾರ್ವಜನಿಕ ಸಭೆ ಆಯೋಜಿಸಿದ್ದು, ಮೂರು ರಾಜ್ಯಗಳ ಮುಖ್ಯಮಂತ್ರಿಗಳು, ಬೇರೆ ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ. ಆ ಮೂಲಕ ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹಾಗಾಗಿ, ಶೀಘ್ರದಲ್ಲಿಯೇ ತೃತೀಯ ರಂಗದ ರಚನೆ ಕುರಿತು ಘೋಷಿಸಲಾಗುತ್ತದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಹೈದರಾಬಾದ್‌ನಿಂದ 200 ಕಿ.ಮೀ ದೂರದ ಖಮ್ಮಮ್‌ನಲ್ಲಿ ಬಿಆರ್‌ಎಸ್ ಮೊದಲ ಸಾರ್ವಜನಿಕ ಸಭೆ ಆಯೋಜಿಸಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿ ಹಲವು ನಾಯಕರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೂ ಮೊದಲು ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ರಾಜಕೀಯ ಬೆಳವಣಿಗೆಗಳ ಕುರಿತು ಎಲ್ಲ ನಾಯಕರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ತೃತೀಯ ರಂಗ ರಚನೆ?
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬುದು ಪ್ರತಿಪಕ್ಷಗಳ ಗುರಿಯಾಗಿದೆ. ಇದರ ದಿಸೆಯಲ್ಲಿ ಪ್ರಾದೇಶಿಕ ಪಕ್ಷಗಳೆಲ್ಲ ಒಗ್ಗೂಡಿ ಬಿಜೆಪಿಯನ್ನು ಮಣಿಸಲು ತೃತೀಯ ರಂಗ ರಚಿಸಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಇದಕ್ಕೂ ಮೊದಲು ಕೂಡ ಕೆಸಿಆರ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಯತ್ನಿಸಿದ್ದಾರೆ.
ಇನ್ನು ಲೋಕಸಭೆ ಚುನಾವಣೆಗೆ ಒಂದೇ ವರ್ಷ ಇರುವ ಕಾರಣ ಎಲ್ಲ ಪಕ್ಷಗಳನ್ನು ಒಗ್ಗೂಡಿಸಲು ಕೆಸಿಆರ್ ಅವರು ಬಿಆರ್‌ಎಸ್ ಸಭೆಗೆ ಬೇರೆ ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದಾರೆ. ಇದಕ್ಕೆ ಪ್ರತಿಪಕ್ಷಗಳೂ ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ. ಕರ್ನಾಟಕದ ಎಚ್.ಡಿ.ಕುಮಾರಸ್ವಾಮಿ ಅವರೂ ಕೆಸಿಆರ್ ಪರ ನಿಂತಿದ್ದು, ಹಲವು ರಾಜ್ಯಗಳ ಬೆಂಬಲ ಇದೆ. ಹಾಗಾಗಿ, ಶೀಘ್ರದಲ್ಲಿಯೇ ತೃತೀಯ ರಂಗದ ರಚನೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ | K Chandrashekar Rao | ದೇಶದಲ್ಲಿ ತಾಲಿಬಾನ್ ಆಡಳಿತ: ಬಿಜೆಪಿ ವಿರುದ್ಧ ಸಿಎಂ ಕೆಸಿಆರ್ ವಾಗ್ದಾಳಿ