ದುಬೈ: ಭಾರತ ಮೂಲದ, ಕೇವಲ 7 ವರ್ಷದ ಪ್ರಾಣ್ವಿ ಗುಪ್ತಾ (Praanvi Gupta) ಜಗತ್ತಿನಲ್ಲೇ ಕಿರಿಯ ಯೋಗ ಟೀಚರ್ (ಇನ್‌ಸ್ಟ್ರಕ್ಟರ್) ಎನಿಸಿದ್ದಾಳೆ. ಅಷ್ಟೇ ಅಲ್ಲ, ಗಿನ್ನಿಸ್ ವಿಶ್ವ ದಾಖಲೆಗೂ ಪಾತ್ರಳಾಗಿದ್ದಾಳೆ. ಪ್ರಾಣ್ವಿ ಗುಪ್ತಾ 200 ಗಂಟೆಗಳ ತರಬೇತಿ ಕೋರ್ಸ್ ಮುಗಿಸಿದ್ದು, ಜಗತ್ತಿನ ಕಿರಿಯ ಇನ್‌ಸ್ಟ್ರಕ್ಟರ್ (Female) ಎಂಬ ಖ್ಯಾತಿ ಗಳಿಸಿದ್ದಾಳೆ.
ಯೋಗ ಅಲಯನ್ಸ್ ಆರ್ಗನೈಸೇಷನ್ ಎಂಬ ಸಂಸ್ಥೆಯು ಪ್ರಾಣ್ವಿಗೆ ಜಗತ್ತಿನ ಕಿರಿಯ ಯೋಗ ಇನ್‌ಸ್ಟ್ರಕ್ಟರ್ ಎಂಬ ಪ್ರಮಾಣಪತ್ರ ನೀಡಿದೆ. ಹಾಗೆಯೇ, ಈಕೆಯು ಗಿನ್ನಿಸ್ ವಿಶ್ವದಾಖಲೆಗೂ ಪಾತ್ರಳಾಗಿದ್ದು, ಆ ಪ್ರಮಾಣಪತ್ರವೂ ಲಭಿಸಿದೆ. ಆ ಮೂಲಕ ಪ್ರಾಣ್ವಿ ಇತಿಹಾಸ ಸೃಷ್ಟಿಸಿದ್ದಾಳೆ.
ಪ್ರಾಣ್ವಿ ಯೋಗ ಕ್ಲಾಸ್ ಝಲಕ್
ಪ್ರಾಣ್ವಿ ತಂದೆ-ತಾಯಿ ದುಬೈನಲ್ಲಿ ನೆಲೆಸಿದ್ದು, ಈಕೆಯು ದುಬೈನ ಜೆಮ್ಸ್ ವೆಲ್ಲಿಂಗ್ಟನ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಎರಡನೇ ತರಗತಿ ಓದುತ್ತಿದ್ದಾಳೆ. ಕೇವಲ ಮೂರುವರೆ ವರ್ಷದವಳಾಗಿದ್ದಾಗಲೇ ಪ್ರಾಣ್ವಿ ಯೋಗಾಭ್ಯಾಸ ಆರಂಭಿಸಿದ್ದು, ಈಗ ಟೀಚರ್ ಆಗಿ ಹೊರಹೊಮ್ಮಿದ್ದಾಳೆ.
“ಯೋಗ ತರಬೇತಿ ಕೋರ್ಸ್ ಮುಗಿಸಿ, ಪ್ರಮಾಣಪತ್ರ ಪಡೆದಿರುವುದು ಸಂತಸ ತಂದಿದೆ. ಯೋಗಾಭ್ಯಾಸ ನನ್ನ ಇಷ್ಟದ ಹವ್ಯಾಸವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಜನಕ್ಕೆ ತರಬೇತಿ ನೀಡುತ್ತೇನೆ” ಎಂದು ಪ್ರಾಣ್ವಿ ಸಂತಸ ವ್ಯಕ್ತಪಡಿಸಿದ್ದಾಳೆ. ಭಾರತದ ರೇಯಾಂಶ್ ಸುರಾಣಿಯು 2021ರಲ್ಲಿ 9 ವರ್ಷದ ಬಾಲಕನಾಗಿದ್ದಾಗ ಜಗತ್ತಿನ ಕಿರಿಯ ಯೋಗ ಇನ್‌ಸ್ಟ್ರಕ್ಟರ್ ಎನಿಸಿದ್ದ.
ಇದನ್ನೂ ಓದಿ: Prerane | ಆಧುನಿಕ ಕ್ಷೇತ್ರಗಳಲ್ಲಿ ಯೋಗಸೂತ್ರದ ಪಾಲನೆ