ಶ್ರೀನಗರ: ಭೂಲೋಕದ ಸ್ವರ್ಗ ಎಂದೇ ಖ್ಯಾತಿಯಾಗಿರುವ ಜಮ್ಮು-ಕಾಶ್ಮೀರದ ಚಹರೆಯು 370ನೇ ವಿಧಿ ರದ್ದುಗೊಳಿಸಿದ ಬಳಿಕ ಬದಲಾಗುತ್ತಿದೆ. ಉದ್ಯಮ, ಪ್ರವಾಸೋದ್ಯಮಕ್ಕೆ ಮತ್ತಷ್ಟು ತೆರೆದುಕೊಳ್ಳುತ್ತಿದೆ. ಕಲ್ಲು ತೂರುವವರು, ಪ್ರತ್ಯೇಕವಾದಿಗಳ ಉಪಟಳ ಕಡಿಮೆಯಾಗಿ, ಅಭಿವೃದ್ಧಿಯತ್ತ ಮುಖ ಮಾಡುತ್ತಿದೆ. ಇನ್ನು, ಕಾಶ್ಮೀರದಲ್ಲಿ ಜಿ-20 ಸಭೆ (G20 Meeting) ಆರಂಭವಾಗಿದ್ದು, ಜಾಗತಿಕ ಗಣ್ಯರು ಪಾಲ್ಗೊಂಡಿದ್ದಾರೆ. ಸಭೆಗೂ ಮೊದಲು ಅರಬ್ ಇನ್‌ಫ್ಲುಯೆನ್ಸರ್ ಒಬ್ಬರು ಜಮ್ಮು-ಕಾಶ್ಮೀರದ ಸೌಂದರ್ಯಕ್ಕೆ ಮರುಳಾಗಿದ್ದಾರೆ. ಅಲ್ಲದೆ, ಕಾಶ್ಮೀರವನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಲಿಕೆ ಮಾಡಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ಅರಬ್ ಇನ್‌ಫ್ಲುಯೆನ್ಸರ್ ಆಗಿರುವ ಅಮ್ಜದ್ ತಾಹ ಅವರು ಕಣಿವೆಯಲ್ಲಿ ತಾವು ಸುತ್ತಾಡಿದ ಸ್ಥಳಗಳು, ಮನಸೂರೆಗೊಳಿಸಿದ ಸೌಂದರ್ಯದ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಹಾಗೆಯೇ, “ಇದು ಸ್ವಿಟ್ಜರ್‌ಲ್ಯಾಂಡ್ ಅಥವಾ ಆಸ್ಟ್ರಿಯಾ ಅಲ್ಲ. ಇದು ಭಾರತ, ಜಿ-20 ಸಭೆ ನಡೆಯುವ ಕಾಶ್ಮೀರದ ಸೌಂದರ್ಯವಾಗಿದೆ. ಇದನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತದೆ. ಇಲ್ಲಿ ಭೂಮಿಯನ್ನು ಸಂರಕ್ಷಿಸಲಾಗಿದೆ, ಪರಿಸರವನ್ನು ಕಾಪಾಡಲಾಗಿದೆ. ಹವಾಮಾನ ಬದಲಾವಣೆಗೆ ಪರಿಹಾರದ ಮೂರ್ತ ರೂಪವಾಗಿ ಕಣ್ಣೆದುರಿಗಿದೆ” ಎಂದು ಒಕ್ಕಣೆ ಬರೆದಿದ್ದಾರೆ.
ಅಜ್ಮದ್ ತಾಹ ಮಾಡಿದ ವಿಡಿಯೊ ನೋಡಿ
“ಕಾಶ್ಮೀರದಲ್ಲಿ ಹಿಂದುಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು ಸೇರಿ ಎಲ್ಲರೂ ಶಾಂತಿಯಿಂದ ಬದುಕುತ್ತಿದ್ದಾರೆ. ಎಲ್ಲರೂ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಹಾಗೆಯೇ, ಜಾಗತಿಕ ನಾವೀನ್ಯತೆ ಹಾಗೂ ಭವಿಷ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ” ಎಂದು ಅಮ್ಜದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಮ್ಮು-ಕಾಶ್ಮೀರದ ಕುರಿತು ಪಾಕಿಸ್ತಾನ, ಚೀನಾ ಜಾಗತಿಕವಾಗಿ ಸುಳ್ಳು ಹರಡಿಸುತ್ತವೆ. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಕೆಲ ಜಾಗತಿಕ ಮಾಧ್ಯಮಗಳು ಸುಳ್ಳು ವರದಿ ಮಾಡುತ್ತವೆ. ಇದಕ್ಕೆ, ಅರಬ್ ಇನ್‌ಫ್ಲುಯೆನ್ಸರ್ ಮಾಡಿದ ವಿಡಿಯೊ ತಕ್ಕ ತಿರುಗೇಟಾಗಿದೆ.
ಇದನ್ನೂ ಓದಿ: G20 Summit : ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ 20 ಶೃಂಗಸಭೆ: ಪ್ರವಾಸೋದ್ಯಮಕ್ಕೆ ಉತ್ತೇಜನ
ಪ್ರವಾಸೋದ್ಯಮದ ಪ್ರಮುಖ ರಾಜ್ಯವಾಗಿರುವ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜಿ 20 ಪ್ರವಾಸೋದ್ಯಮ ಸಭೆಯನ್ನು ಆಯೋಜಿಸುವ ಮೂಲಕ ಭಾರತವು ತನ್ನ ಹಕ್ಕುದಾರಿಕೆಯನ್ನು ಪ್ರತಿಷ್ಠಾಪಿಸಿದೆ. ಚೀನಾ ಸೇರಿ ಕೆಲವು ಇಸ್ಲಾಮಿಕ್ ರಾಷ್ಟ್ರಗಳು ಈ ಸಭೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರೂ, ಅದ್ಧೂರಿಯಾಗಿ ಸಭೆ ಆಯೋಜಿಸಿ ಕಣಿವೆಯಲ್ಲಿ ಶಾಂತಿ ನೆಲೆಸಿದೆ ಎಂಬ ಸಂದೇಶ ರವಾನಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಸಭೆ ಆರಂಭವಾಗಿದ್ದು, ವಿದೇಶಿ ಗಣ್ಯರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಗಿದೆ.