Site icon Vistara News

ಹಮಾಸ್‌ ದಾಳಿ ಮಾಡಿದರೂ ಮನಮೋಹನ್‌ ಸಿಂಗ್‌ರಂತೆ ಇಸ್ರೇಲ್‌ ಸುಮ್ಮನಿರಬೇಕಿತ್ತು ಎಂದ ಅಮೆರಿಕ ಲೇಖಕ!

Manmohan Singh And Thomas Friedman

Thomas Friedman compares Manmohan Singh's 26/11 response, Israel's to Hamas attack

ವಾಷಿಂಗ್ಟನ್:‌ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಕಾಳಗವು (Israel Palestine War) 25ನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ, ಗಾಜಾ ನಗರದಲ್ಲಿರುವ ಹಮಾಸ್‌ ಉಗ್ರರನ್ನು ಸದೆಬಡಿಯುವ ಪಣ ತೊಟ್ಟಿರುವ ಇಸ್ರೇಲ್‌ ದಿನೇದಿನೆ ದಾಳಿಯನ್ನು ತೀವ್ರಗೊಳಿಸುತ್ತಿದೆ. ಇದರ ಬೆನ್ನಲ್ಲೇ, ಅಮೆರಿಕ ಲೇಖಕರೊಬ್ಬರು (Thomas Friedman) ಇಸ್ರೇಲ್‌ ಪ್ರತಿದಾಳಿ ಮಾಡಬಾರದಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ, 2008ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕವೂ ಪ್ರತಿದಾಳಿಗೆ ಆದೇಶಿಸದ ಅಂದಿನ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ಉದಾಹರಣೆಯನ್ನು ಕೊಟ್ಟಿದ್ದಾರೆ.

ಹೌದು, ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಅಮೆರಿಕ ಲೇಖಕ ಥಾಮಸ್‌ ಫ್ರೈಡ್‌ಮ್ಯಾನ್‌ ಅವರು ಮನಮೋಹನ್‌ ಸಿಂಗ್‌ ಅವರ ಹೆಸರು ಪ್ರಸ್ತಾಪಿಸಿ ಇಸ್ರೇಲ್‌ಗೆ ಸಲಹೆ ನೀಡಿದ್ದಾರೆ. “2008ರ ನವೆಂಬರ್‌ನಲ್ಲಿ ಪಾಕಿಸ್ತಾನದ 10 ಉಗ್ರರು ಮುಂಬೈ ಮೇಲೆ ದಾಳಿ ನಡೆಸಿದರು. ದಾಳಿಯಲ್ಲಿ 160ಕ್ಕೂ ಹೆಚ್ಚು ಜನ ಮೃತಪಟ್ಟರು. ಈಗ ಹಮಾಸ್ ಹಾಗೂ ಇಸ್ರೇಲ್‌ ಸಮರ ನೋಡಿದರೆ, ನಾನು ನೋಡಿದ ಜಗತ್ತಿನ ಹಲವು ನಾಯಕರು ನೆನಪಿಗೆ ಬರುತ್ತಾರೆ. 2008ರ ದಾಳಿ ಬಳಿಕ ಯಾವುದೇ ಪ್ರತಿದಾಳಿಗೆ ಆದೇಶಿಸದ ಮನಮೋಹನ್‌ ಸಿಂಗ್‌ ಅವರು ಹೆಚ್ಚು ನೆನಪಾಗುತ್ತಿದ್ದಾರೆ” ಎಂದು ಲೇಖಕ ಹೇಳಿದ್ದಾರೆ. ಆ ಮೂಲಕ ಹಮಾಸ್‌ ಉಗ್ರರು ದಾಳಿ ನಡೆಸಿದ ಬಳಿಕ ಇಸ್ರೇಲ್‌ ಪ್ರತಿದಾಳಿ ಮಾಡಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬೈ ದಾಳಿಯ ಭೀಕರತೆ.

10 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 10 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 8,600ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 2 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡುವ ದಿಸೆಯಲ್ಲಿ ಇಸ್ರೇಲ್‌ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ. ಯುದ್ಧ ಟ್ಯಾಂಕರ್‌ಗಳು, ಬಂಕರ್‌ಗಳು ಗಾಜಾ ನಗರದ ಗಡಿ ಸಮೀಪಿಸಿದ್ದು, ಶೀಘ್ರವೇ ಇಡೀ ನಗರವನ್ನು, ಹಮಾಸ್‌ ಉಗ್ರರನ್ನು ಸರ್ವನಾಶ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಗಾಜಾ ನಗರದ ಗಡಿಯಲ್ಲಿ ಇಸ್ರೇಲ್‌ ಯುದ್ಧ ಟ್ಯಾಂಕರ್.

ಇದನ್ನೂ ಓದಿ: Israel Palestine War: ಹಮಾಸ್‌ ಲೀಡರ್‌ನನ್ನು ಕೊಂದು ನಿರಾಶ್ರಿತರ ಶಿಬಿರ ಧ್ವಂಸಗೊಳಿಸಿದ ಇಸ್ರೇಲ್‌

ಗಾಜಾ ಗಡಿಯ ಬಳಿ ಇಸ್ರೇಲ್‌ ಟ್ಯಾಂಕರ್‌ಗಳ ನಿಯೋಜನೆಯು ಜನರನ್ನು ಆತಂಕಕ್ಕೀಡು ಮಾಡಿದೆ. ಗಾಜಾದ ಜಾಯ್‌ಟುನ್‌ ಜಿಲ್ಲೆಯ ಗಡಿ ಬಳಿ ಇಸ್ರೇಲ್‌ ಟ್ಯಾಂಕರ್‌ ಇರುವುದು, ಅಲ್ಲಿ ದಾಳಿ ನಡೆಸಿರುವುದರ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಬೆನನ್ಲ್ಲೇ, “ಕಳೆದ 24 ಗಂಟೆಯಲ್ಲಿ ನಾವು 600 ಗುರಿಗಳನ್ನು ಹೊಡೆದುರುಳಿಸಿದ್ದೇವೆ. ದಿನೇದಿನೆ ದಾಳಿ ಜಾಸ್ತಿಯಾಗುತ್ತಿದೆ” ಎಂದು ಇಸ್ರೇಲ್‌ ಸೇನೆ ತಿಳಿಸಿದ್ದು, ದಾಳಿಯ ತೀವ್ರತೆಯನ್ನು ಅಂದಾಜಿಸಬಹುದಾಗಿದೆ. ಗಡಿಯ ಬಳಿ ಸೋಮವಾರ ಇಸ್ರೇಲ್‌ ಸೈನಿಕರು ಹಾಗೂ ಉಗ್ರರ ಮಧ್ಯೆ ಸಂಘರ್ಷ ಉಂಟಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version