Site icon Vistara News

ಈ ಸಲ ಶಿವ ಸೇನೆ ಹೋಳಾಗುವುದು ಖಚಿತ? ಹಿಂದೆಯೂ ಮೂರು ಬಾರಿ ಪ್ರಯತ್ನ

shiv sena

ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ಅವರು ತಮ್ಮ ನಿಷ್ಠಾವಂತರೊಂದಿಗೆ ಸೇರಿ ಎಬ್ಬಿಸಿರುವ ಬಂಡಾಯ ಯಾವುದೇ ಅಂತಿಮ ಸಂಧಾನಕ್ಕೆ ಬರದೆ, ಪಕ್ಷವೇ ಹೋಳಾಗುವತ್ತ ಹೆಜ್ಜೆ ಹಾಕುತ್ತಿದೆ.

ಪ್ರಸ್ತುತ ಉದ್ಧವ್ ಠಾಕ್ರೆ ಅವರ ನೇತೃತ್ವದಡಿಯಲ್ಲಿ ಮಹಾರಾಷ್ಟ್ರವನ್ನು ಆಳುತ್ತಿರುವ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಯ ಎಂವಿಪಿ ಕೂಟ 152 ಶಾಸಕರನ್ನು ಹೊಂದಿದೆ. ಶಿವಸೇನೆಯಿಂದ 55, ಎನ್‌ಸಿಪಿಯಿಂದ 53 ಮತ್ತು ಕಾಂಗ್ರೆಸ್‌ನಿಂದ 44 ಶಾಸಕರಿದ್ದಾರೆ. ಮೈತ್ರಿಕೂಟವು ಕೆಲವು ಸಣ್ಣ ಪಕ್ಷಗಳು ಮತ್ತು ಸ್ವತಂತ್ರರ ಬೆಂಬಲವನ್ನು ಸಹ ಹೊಂದಿದೆ.

ನವೆಂಬರ್ 2019ರಿಂದ ಅಧಿಕಾರದಲ್ಲಿರುವ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಈಗ ಬಿಕ್ಕಟ್ಟಾಗಿ ಎದುರಾಗಿರುವುದು ಎಂದರೆ ತನಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದಿರುವ ಶಿಂಧೆ. 40ಕ್ಕಿಂತ ಹೆಚ್ಚಿನ ಸಂಖ್ಯೆಯ ಶಾಸಕರು ಎಂದರೆ 1985ರ ಪಕ್ಷಾಂತರ ವಿರೋಧಿ ಕಾನೂನನ್ನು ಅನ್ವಯಿಸಲು ಕಷ್ಟ. ಶಿವಸೇನೆ ಪ್ರಸ್ತುತ ವಿಧಾನಸಭೆಯಲ್ಲಿ 55 ಸದಸ್ಯರನ್ನು ಹೊಂದಿದೆ. ಕಾನೂನಿನ ಪ್ರಕಾರ, 37 ಶಾಸಕರು ಪಕ್ಷ ತೊರೆಯಲು ನಿರ್ಧರಿಸಿದರೆ ಅದನ್ನು ಮಾನ್ಯ ಮಾಡಬೇಕಾಗುತ್ತದೆ. ಬೇರೆ ಪಕ್ಷ ರಚಿಸುವುದು, ಬಿಜೆಪಿಯಂತಹ ಇನ್ನೊಂದು ಪಕ್ಷದಲ್ಲಿ ವಿಲೀನಗೊಳ್ಳುವುದು ಕಾನೂನುಬದ್ಧವಾಗುತ್ತದೆ.

ಪಕ್ಷಾಂತರ ಕಾಯಿದೆಯ ಅಡಿಯಲ್ಲಿ, ವಿಧಾನಸಭೆಗಳಲ್ಲಿ ಶಾಸಕ ಅಥವಾ ಶಾಸಕರ ಗುಂಪು ಪಕ್ಷದ ವಿಪ್‌ ಉಲ್ಲಂಘಿಸಿದರೆ ಅವರು ಅನರ್ಹರಾಗುತ್ತಾರೆ ಮತ್ತು ತಮ್ಮ ವಿಧಾನಸಭಾ ಸದಸ್ಯತ್ವ ಕಳೆದುಕೊಳ್ಳುತ್ತಾರೆ. ಅವರು ಪಕ್ಷಕ್ಕೆ ವಿರುದ್ಧವಾಗಿ ಮತ ಚಲಾಯಿಸಲು ನಿರ್ಧರಿಸಿದರೆ ಅಥವಾ ಬೇರೆ ಪಕ್ಷಕ್ಕೆ ಸೇರಲು ನಿರ್ಧರಿಸಿದರೆ ಅವರನ್ನು ಅನರ್ಹಗೊಳಿಸಲಾಗುತ್ತದೆ. ಆದರೆ ಪಕ್ಷದ ಮೂರನೇ ಎರಡರಷ್ಟು ಶಾಸಕರು ಪಕ್ಷಾಂತರ ಮಾಡಲು ನಿರ್ಧರಿಸಿದರೆ ಆಗ ಅನರ್ಹತೆಯ ಅಪಾಯ ಇರುವುದಿಲ್ಲ. ಅಂದರೆ 40 ಶಾಸಕರ ಬೆಂಬಲ ಹೊಂದಿದ್ದರೆ ಶಿಂಧೆ ಹೊಸ ಪಕ್ಷ ರಚಿಸಬಹುದು ಅಥವಾ ದೊಡ್ಡ ಗುಂಪಿನೊಂದಿಗೆ ಬಿಜೆಪಿಗೆ ತೆರಳಬಹುದು.

ಶಿವಸೇನೆಯಲ್ಲಿ ಬಂಡಾಯ ಉಂಟಾಗುತ್ತಿರುವುದು ಇದೇ ಮೊದಲಲ್ಲ. ಹಿಂದೆ ಮೂರು ಬಾರಿ ಹೀಗಾಗಿದೆ.

1991ರ ಡಿಸೆಂಬರ್‌ನಲ್ಲಿ, ಬಾಳಾ ಠಾಕ್ರೆಯವರ ನಿಕಟವರ್ತಿಯಾಗಿದ್ದ ಛಗನ್ ಭುಜಬಲ್ 52 ಶಾಸಕರಲ್ಲಿ 17 ಮಂದಿಯನ್ನು ಜತೆಗೆ ಕರೆದುಕೊಂಡು ಪಕ್ಷವನ್ನು ವಿಭಜಿಸುವ ಬೆದರಿಕೆ ಹಾಕಿದ್ದರು. ಪಕ್ಷದಲ್ಲಿ ಮನೋಹರ್ ಜೋಶಿ ಅವರ ಸ್ಥಾನಮಾನ ಹೆಚ್ಚುತ್ತಿರುವ ಬಗ್ಗೆ ಅಸಮಾಧಾನ ಅವರಿಗಿತ್ತು. ಸ್ಪೀಕರ್ ಮಧುಕರರಾವ್ ಚೌಧರಿ ಅವರು ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸುವ ಪತ್ರವನ್ನು ಸ್ವೀಕರಿಸಿ ಅದನ್ನು ಅಂಗೀಕರಿಸಿದರು. ಭುಜಬಲ್ ಅವರನ್ನು ತಕ್ಷಣವೇ ಬಾಳಾ ಠಾಕ್ರೆ ವಜಾ ಮಾಡಿದರು. ನಂತರ ಪಕ್ಷ ತೊರೆದ ಹದಿನಾರು ಶಾಸಕರನ್ನೂ ಹೊರ ಹಾಕಲಾಯಿತು. ಭುಜಬಲ್ ನಂತರ ಕಾಂಗ್ರೆಸ್ ಸೇರಿದರು.

ಇದನ್ನೂ ಓದಿ: ಶಿಂಧೆ ಬಣದಿಂದ ಶಾಸಕ ವಾಪಸ್‌; ನನಗೆ ಬಲವಂತವಾಗಿ ಇಂಜೆಕ್ಷನ್‌ ಕೊಟ್ಟಿದ್ದಾರೆಂದ ನಿತಿನ್‌ ದೇಶ್‌ಮುಖ್‌

ಎರಡನೇ ಘಟನೆ ಜುಲೈ 2005ರಲ್ಲಿ ನಡೆಯಿತು. ನಾರಾಯಣ ರಾಣೆ ಮತ್ತು ಉದ್ಧವ್ ಠಾಕ್ರೆ ನಡುವೆ ನಡೆದ ಕದನವದು. ರಾಣೆ ಅವರು ಉದ್ಧವ್ ಠಾಕ್ರೆ ಅವರನ್ನು ಓವರ್‌ಟೇಕ್‌ ಮಾಡಿ ಮುನ್ನಡೆಯಲು ಮುಂದಾಗಿದ್ದರು. 62 ಶಾಸಕರ ಪೈಕಿ 40 ಶಾಸಕರೊಂದಿಗೆ ಪಕ್ಷವನ್ನು ವಿಭಜಿಸಲು ಬಯಸಿದ್ದರು. ಈ ಪ್ರಯತ್ನವನ್ನು ಶಿವಸೇನೆ ವಿಫಲಗೊಳಿಸಿತು. 12 ಶಾಸಕರು ಪಕ್ಷದ ವಿಪ್ ಧಿಕ್ಕರಿಸಿ ರಾಣೆ ಅವರೊಂದಿಗೆ ಕಾಂಗ್ರೆಸ್ ಸೇರಿದರು. ಪಕ್ಷವು ವ್ಯಾಪಕ ರಾಜಕೀಯ ಅನುಭವ ಹೊಂದಿರುವ ನಾಯಕನೊಬ್ಬನನ್ನು ಕಳೆದುಕೊಂಡಿತು. ವಿಲಾಸ್‌ರಾವ್ ದೇಶಮುಖ್ ನೇತೃತ್ವದ ಎನ್‌ಸಿಪಿ-ಕಾಂಗ್ರೆಸ್ ಸರ್ಕಾರದಲ್ಲಿ ರಾಣೆ ಅವರನ್ನು ಸಚಿವರನ್ನಾಗಿ ಮಾಡಲಾಯಿತು.

ಮೂರನೇ ಘಟನೆಯೂ 2005ರಲ್ಲಿಯೇ ನಡೆಯಿತು. ಈ ಬಾರಿ ಬಾಳಾ ಠಾಕ್ರೆ ಅವರ ಉತ್ತರಾಧಿಕಾರಿತ್ವದ ಪ್ರಶ್ನೆ ಎದ್ದಿತು. ಉದ್ಧವ್ ಠಾಕ್ರೆ ಮತ್ತು ಅವರ ಸೋದರಸಂಬಂಧಿ ರಾಜ್ ಠಾಕ್ರೆ ನಡುವೆ ಕಲಹ ಸೃಷ್ಟಿಯಾಗಿತ್ತು. ರಾಜ್ ಅವರು ಡಿಸೆಂಬರ್ 2005ರಲ್ಲಿ ಶಿವಸೇನೆಯನ್ನು ತೊರೆದರು. ಅನೇಕ ಸಂಸದರು ಮತ್ತು ಶಾಸಕರು ಅವರನ್ನು ಸೇರಲು ಸಿದ್ಧರಿದ್ದರೂ, ಪಕ್ಷವನ್ನು ಒಡೆಯಲು ರಾಜ್‌ ಮುಂದಾಗಲಿಲ್ಲ. ಆದರೆ ಈ ಬಾರಿ ಏಕನಾಥ್‌ ಶಿಂಧೆ ಏನು ಮಾಡುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ.

ಇದನ್ನೂ ಓದಿ: ವಿಸ್ತಾರ Explainer: ಮತ್ತೆ ಮತ್ತೆ ಆಪರೇಷನ್‌ ಪಾಲಿಟಿಕ್ಸ್‌, ರಾಜಕೀಯ ಕೋಲಾಹಲ

Exit mobile version