ಹೈದರಾಬಾದ್: ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಸಾಮಾನ್ಯ ಜನ ಗಂಟೆಗಟ್ಟಲೆ, ಕೆಲವೊಮ್ಮೆ ಇಡೀ ದಿನ ಕಾಯಬೇಕಾಗುತ್ತದೆ. ಗಣ್ಯರ (ವಿವಿಐಪಿ) ದರ್ಶನ (Tirupati Darshan), ಲಕ್ಷಾಂತರ ಭಕ್ತರ ಆಗಮನ ಸೇರಿ ಹಲವು ಕಾರಣಗಳಿಂದಾಗಿ ಭಕ್ತಾದಿಗಳು ದರ್ಶನಕ್ಕಾಗಿ ಕಾಯುತ್ತಾರೆ. ಆದರೆ, ಹೀಗೆ ಭಕ್ತರು ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸುವ ದಿಸೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನಂ (TTD) ಮಂಡಳಿಯು ಶನಿವಾರ ನಡೆದ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ.
ವಿವಿಐಪಿಗಳ ದರ್ಶನದ ಸಮಯ ಬದಲು
ತಿರುಪತಿಯಲ್ಲಿ ವಿಐಪಿಗಳು ದೇವರ ದರ್ಶನ ಪಡೆಯುವ ಸಮಯವನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ. ಬೆಳಗ್ಗೆ ೫.೩೦ರಿಂದ ದರ್ಶನದ ಸಮಯದ ಬದಲು ವಿಐಪಿಗಳು ಬೆಳಗ್ಗೆ ೧೦ ಗಂಟೆಯಿಂದ ೧೨ ಗಂಟೆ ಅವಧಿಯಲ್ಲಿ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಬೆಳಗ್ಗೆ ೮-೯ ಗಂಟೆ ಅವಧಿಯಲ್ಲಿಯೇ ಧಾರ್ಮಿಕ ವಿಧಿವಿಧಾನ ನೆರವೇರುವುದರಿಂದ ಎಲ್ಲ ವಿಐಪಿಗಳು ಏಕಕಾಲಕ್ಕೆ ದರ್ಶನ ಪಡೆಯಲು ಆಗಮಿಸುತ್ತಿದ್ದ ಕಾರಣ ಸಾಮಾನ್ಯ ಭಕ್ತರು ಗಂಟೆಗಟ್ಟಲೆ ಕಾಯುವಂತಾಗುತ್ತಿತ್ತು. ಇದರಿಂದ ಸಾಮಾನ್ಯ ಭಕ್ತರು ಬೇಗನೆ ದರ್ಶನ ಪಡೆಯಬಹುದಾಗಿದೆ.
ವಸತಿ ಹಂಚಿಕೆ ವ್ಯವಸ್ಥೆಯ ಸ್ಥಳಾಂತರ
ಭಕ್ತರಿಗೆ ವಸತಿ ಸೌಲಭ್ಯ ಹಂಚಿಕೆ ಮಾಡುವ ವ್ಯವಸ್ಥೆಯನ್ನೂ ತಿರುಮಲದಿಂದ ತಿರುಪತಿಗೆ ವರ್ಗಾಯಿಸಲಾಗಿದೆ. ಭಕ್ತರ ವಸತಿಗೆ ೭,೫೦೦ ಕೋಣೆಗಳಿದ್ದು, ಇವುಗಳ ಹಂಚಿಕೆಯು ತಿರುಮಲದಲ್ಲಿ ಮಾತ್ರ ಇದ್ದ ಕಾರಣ ಭಕ್ತರು ಕಾಯುವಂತಾಗುತ್ತಿತ್ತು. ಕೋಣೆಗಳು ಖಾಲಿಯಾಗಿ, ಹಂಚಿಕೆಯಾಗುವವರೆಗೆ ಕಾಯಬೇಕಾಗುತ್ತಿತ್ತು. ಆದರೆ, ಕೇಂದ್ರೀಯ ವ್ಯವಸ್ಥೆಯ ಕಚೇರಿಯನ್ನು ತಿರುಪತಿಗೆ ವರ್ಗಾಯಿಸಲಾಗಿದ್ದು, ಕೋಣೆಗಳನ್ನು ಬುಕ್ ಮಾಡಲು, ಪರ್ಯಾಯ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ. ಇವುಗಳ ಜತೆಗೆ ಶ್ವೇತಪತ್ರ ಹೊರಡಿಸುವುದು, ಟಿಟಿಡಿ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸೇರಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಎಲ್ಲ ನಿರ್ಣಯಗಳನ್ನು ಅಕ್ಟೋಬರ್‌ನಿಂದ ಜಾರಿಗೊಳಿಸಲಾಗುತ್ತದೆ.
ಇದನ್ನೂ ಓದಿ | ತಿರುಮಲ ತಿರುಪತಿ ದೇವಸ್ಥಾನಕ್ಕೆ 1.02 ಕೋಟಿ ರೂಪಾಯಿ ದೇಣಿಗೆ ನೀಡಿದ ಮುಸ್ಲಿಂ ದಂಪತಿ