ತಿರುಪತಿ: 2022ರ ಸಾಲಿನಲ್ಲಿ ತಿರುಮಲ ತಿರುಪತಿ ವೆಂಕಟೇಶ್ವರ ಹುಂಡಿಯಿಂದ (Tirumala Tirupati Hundi) ಒಟ್ಟು 1,451.15 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕಾಣಿಕೆಯ ಪ್ರಮಾಣವೂ ಹೆಚ್ಚಳವಾಗಿದೆ. ಕಳೆದ ವರ್ಷ 833.41 ಕೋಟಿ ರೂ. ಕಾಣಿಕೆ ಸಂಗ್ರಹವಾಗಿತ್ತು ಎಂದು ಶೀಕ್ಷೇತ್ರದ ನಿರ್ವಹಣೆಯ ಹೊಣೆಯನ್ನು ಹೊತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್(TTD) ತಿಳಿಸಿದೆ.
ಶ್ರೀ ವೆಂಕಟೇಶ್ವರ ದೇವಸ್ಥಾನದ ಹುಂಡಿಯಲ್ಲಿ ಈ ಬಾರಿ ಭಾರಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. 2022 ಜನವರಿ 1ರಿಂದ ಡಿಸೆಂಬರ್ 30ರವರೆಗಿನ ಅವಧಿಯಲ್ಲಿ ಒಟ್ಟು 1,451.15 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಕಾಣಿಕೆ ಸಂಗ್ರಹದಲ್ಲಿ ಶೇ.74ರಷ್ಟು ಹೆಚ್ಚಳವಾಗಿದೆ ಎಂದು ಟಿಟಿಡಿ ತಿಳಿಸಿದೆ.
2022ರಲ್ಲಿ ಒಟ್ಟು 2,36,88,734 ಕೋಟಿ ಜನರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. 2021ರಲ್ಲಿ ಈ ಸಂಖ್ಯೆ 1.04 ಕೋಟಿಯಷ್ಟಿತ್ತು. ಇದೇ ವೇಳೆ, ಲಡ್ಡು ಪ್ರಸಾದ ಮಾರಾಟದಿಂದ ಒಟ್ಟು 11.42 ಕೋಟಿ ರೂ. ಆದಾಯ ಬಂದಿದೆ. ಹೆಚ್ಚು ಕಡಿಮೆ 3 ಕೋಟಿಗೂ ಅಧಿಕ ಜನರು ಅನ್ನಪ್ರಸಾದ ಸ್ವೀಕರಿಸಿದ್ದಾರೆ ಎಂದು ಟಿಟಿಡಿ ತಿಳಿಸಿದೆ.
ಇದೇ ವೇಳೆ, ಜನವರಿ 2ರಿಂದ 11ರವರೆಗೆ ನಡೆಯಲಿರುವ ವೈಕುಂಠ ದ್ವಾರ ದರ್ಶನಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಟಿಟಿಡಿ ಕೈಗೊಂಡಿದೆ. ಭಕ್ತರ ದರ್ಶನಕ್ಕೆ ಬೇಕಾಗುವ ಎಲ್ಲ ತಯಾರಿಗಳ ಮೇಲ್ವಿಚಾರಣೆಯನ್ನು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಕೈಗೊಂಡರು.
ಇದನ್ನೂ ಓದಿ | ತಿರುಮಲ ತಿರುಪತಿ ದೇವಸ್ಥಾನಕ್ಕೆ 1.02 ಕೋಟಿ ರೂಪಾಯಿ ದೇಣಿಗೆ ನೀಡಿದ ಮುಸ್ಲಿಂ ದಂಪತಿ