ತಿರುಪತಿ: ದೇಶದ ಪ್ರಸಿದ್ಧ ಯಾತ್ರಾ ಸ್ಥಳವಾದ ತಿರುಮಲ ತಿರುಪತಿ ದೇವಸ್ಥಾನದಲ್ಲಿ (Tirupati Temple) ಫೆಬ್ರವರಿ 3ರಿಂದ 5ರ ವರೆಗೆ ಮೂರು ದಿನಗಳ ಸನಾತನ ಧಾರ್ಮಿಕ ಸದಸ್ (Dharmika Sadas) ಆಯೋಜಿಸಲಾಗುವುದು. ದೇಶಾದ್ಯಂತ ಇರುವ ವಿವಿಧ ಪೀಠಾಧಿಪತಿಗಳು ಈ ಧಾರ್ಮಿಕ ಸದನದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಮುಂದಿನ ಪೀಳಿಗೆಗೆ ಸನಾತನ ಧರ್ಮದ ಮೌಲ್ಯಗಳನ್ನು ದಾಟಿಸಲು ಆಧ್ಯಾತ್ಮಿಕ ಆಂದೋಲನವನ್ನು ಕೈಗೊಳ್ಳಲಾಗುತ್ತಿದೆ ಎಂದು ಟಿಟಿಡಿ ಟ್ರಸ್ಟ್ ಬೋರ್ಡ್(TTD Trust Board)ನ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ (Bhumana Karuanakara Reddy) ತಿಳಿಸಿದರು.
ಟಿಟಿಡಿಯ ಆರೋಗ್ಯ ಮತ್ತು ಶಿಕ್ಷಣ ವಿಭಾಗದ ಸದಾ ಭಾರ್ಗವಿ ಮತ್ತು ಇತರ ಅಧಿಕಾರಿಗಳೊಂದಿಗೆ ತಿರುಮಲದ ಆಸ್ತಾನ ಮಂಟಪದಲ್ಲಿ ನಡೆಯುತ್ತಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ʼʼಟಿಟಿಡಿ ತನ್ನ ಹಿಂದೂ ಧರ್ಮ ಪ್ರಚಾರ ಪರಿಷತ್ (HDPP) ಆಶ್ರಯದಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ನಡೆಯುವ ಧಾರ್ಮಿಕ ಮತಾಂತರಗಳನ್ನು ತಡೆಗಟ್ಟುವ ವ್ಯಾಪಕ ಶ್ರೇಣಿಯ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆʼʼ ಎಂದು ತಿಳಿಸಿದರು.
57 ಪೀಠಾಧಿಪತಿಗಳಿಂದ ಒಪ್ಪಿಗೆ
ಹಿಂದೂ ಧರ್ಮದ ಮಹಾನ್ ಮಹಾ ಕಾವ್ಯಗಳು, ಪರಂಪರೆ, ಸಂಸ್ಕೃತಿ ಮತ್ತು ಧಾರ್ಮಿಕ ಗ್ರಂಥಗಳಲ್ಲಿ ಹುದುಗಿರುವ ಮೌಲ್ಯಗಳನ್ನು ಸಾರ್ವಜನಿಕರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ತಲುಪಿಸುವ ಉದಾತ್ತ ಉದ್ದೇಶದಿಂದ ಟಿಟಿಡಿ ಈ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರಲ್ಲಿ ಭಾಗವಹಿಸಲು ಇಲ್ಲಿಯವರೆಗೆ 57 ಪೀಠಾಧಿಪತಿಗಳು ಒಪ್ಪಿಗೆ ನೀಡಿದ್ದಾರೆ. ಸ್ವಾಮೀಜಿಗಳ ಸಲಹೆಗಳನ್ನು ನಾವು ಸ್ವಾಗತಿಸುತ್ತೇವೆ ಮತ್ತು ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅವರ ಸಲಹೆಗಳನ್ನು ನಿರೀಕ್ಷಿಸುತ್ತೇವೆ” ಎಂದು ಅವರು ಹೇಳಿದರು.
ವಿವಿಧ ಯೋಜನೆ ಜಾರಿ
ಅಲ್ಲದೆ ಟಿಟಿಡಿ ಈ ಹಿಂದೆ ದಲಿತ್ ಗೋವಿಂದಮ್, ಕಲ್ಯಾಣಮಸ್ತು, ಕೈಸಿಕಾ ದ್ವಾದಸಿ ಮತ್ತು ಇನ್ನೂ ಅನೇಕ ವಿಶಿಷ್ಟ ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದು ದೂರದ ಪ್ರದೇಶಗಳಲ್ಲಿ ಧಾರ್ಮಿಕ ಮತಾಂತರಗಳನ್ನು ತಡೆಗಟ್ಟಲು ಸಹಾಯ ಮಾಡಿದೆ ಎಂದು ಭೂಮನ ಕರುಣಾಕರ ರೆಡ್ಡಿ ಹೇಳಿದರು. ಅಲ್ಲದೆ ಈ ಧಾರ್ಮಿಕ ಸದಸ್ ಸಾವರ್ಜನಿಕರು ವಿಶೇಷವಾಗಿ ಯುವ ಜನತೆಯಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, “ಕಳೆದ ಹಲವು ದಶಕಗಳಿಂದ ತಿರುಮಲವು ದೇಶದಲ್ಲೇ ಆಧ್ಯಾತ್ಮಿಕ ರಾಜಧಾನಿಯಾಗಿ ಬದಲಾಗಿದೆ. ನಮ್ಮ ಸನಾತನ ಧರ್ಮವನ್ನು ಮತ್ತಷ್ಟು ಬಲಪಡಿಸಲು ಮುಂಬರುವ ಧಾರ್ಮಿಕಾ ಸದನ ನೆರವಾಗಲಿದೆ. ಮಠಾಧೀಶರು ಮತ್ತು ಸಾಧುಗಳ ಅಮೂಲ್ಯ ಸಲಹೆಗಳೊಂದಿಗೆ ದೇಶಾದ್ಯಂತ ಮತ್ತೊಂದು ಆಧ್ಯಾತ್ಮಿಕ ಆಂದೋಲನವನ್ನು ಮುನ್ನಡೆಸಲಿದ್ದೇವೆʼʼ ಎಂದು ಅವರು ವಿವರಿಸಿದರು.
ಇದನ್ನೂ ಓದಿ: Tirupati Balaji: ತಿರುಪತಿಯಲ್ಲಿ ಭಕ್ತರ ಭಾರೀ ರಶ್, 48 ಗಂಟೆ ಕಳೆದರೂ ಸಿಗುತ್ತಿಲ್ಲ ದೇವರ ದರ್ಶನ!
ಪ್ರಮುಖರಾದ ಷಣ್ಮುಖ್ ಕುಮಾರ್, ರಾಣಿ ಸದಾಶಿವಮೂರ್ತಿ, ನಾಗೇಶ್ವರ ರಾವ್, ಡಾ.ಟಿ.ರವಿ, ಜಗದೀಶ್ ರೆಡ್ಡಿ, ಸೋಮಯಾಜುಲು, ರಾಜಗೋಪಾಲ್, ಆನಂದ ತೀರ್ಥಾಚಾರ್ಯುಲು, ಡಾ.ಶ್ರೀದೇವಿ, ಡಾ.ಕುಸುಮಾ ಕುಮಾರಿ, ಶ್ರೀನಿವಾಸುಲು, ನಂದ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ