ಹೊಸದಿಲ್ಲಿ: ರಾಜ್ಯಸಭೆಯಲ್ಲಿ (Rajya Sabha) ತೋರಿದ ʼಅಗೌರವಪೂರಿತ ದುರ್ನಡತೆʼಗಾಗಿ ತೃಣಮೂಲ ಕಾಂಗ್ರೆಸ್ (Trinamool Congress party) ಪಕ್ಷದ ಸಂಸದ (TMC MP) ಡೆರೆಕ್ ಓಬ್ರಿಯಾನ್ (Derek O’Brien) ಅವರನ್ನು ಚಳಿಗಾಲದ ಅಧಿವೇಶನದ (Winter Session) ಉಳಿದ ಅವಧಿಯಿಂದ ಅಮಾನತುಗೊಳಿಸಲಾಗಿದೆ.
ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್ ಗುರುವಾರ ರಾಜ್ಯಸಭೆಯಲ್ಲಿ ತೋರಿದ “ಅಗೌರವಪೂರಿತ ದುರ್ನಡತೆ”ಗಾಗಿ ಅಮಾನತುಗೊಂಡಿದ್ದಾರೆ. ಅಮಾನತುಗೊಳಿಸುವ ಪ್ರಸ್ತಾಪವನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ (Jagdeep Dhankhar) ಅಂಗೀಕರಿಸಿದರು.
ನಿನ್ನೆ ನಡೆದ ಲೋಕಸಭೆ ಭದ್ರತಾ ಲೋಪ ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ಬಂದು ಹೇಳಿಕೆ ನೀಡುವಂತೆ ಒತ್ತಾಯಿಸಿ ಟಿಎಂಸಿ ಸಂಸದರು ವಿರೋಧ ಪಕ್ಷದ ಇತರ ಸದಸ್ಯರೊಂದಿಗೆ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಓಬ್ರಿಯಾನ್ ಅವರು ರಾಜ್ಯಸಭೆ ಸದನದ ಬಾವಿಗೆ ಪ್ರವೇಶಿಸಿ, ಅಧ್ಯಕ್ಷರತ್ತ ಸನ್ನೆ ಮಾಡುತ್ತಾ ನಿರಂತರವಾಗಿ ಘೋಷಣೆಗಳನ್ನು ಕೂಗಿದರು. ಹಾಗೆ ಮಾಡುವ ಮೂಲಕ ಸದನದ ಕಲಾಪಕ್ಕೆ ಅಡ್ಡಿಪಡಿಸಿದರು.
ಕಳೆದ ವಾರ ಟಿಎಂಸಿಯ ಇನ್ನೊಬ್ಬ ಸಂಸತ್ ಸದಸ್ಯೆಯಾದ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಲಾಗಿತ್ತು. ಪ್ರಶ್ನೆ ಕೇಳುವುದಕ್ಕೆ ಲಂಚ ಪಡೆದ ಆರೋಪದಲ್ಲಿ ಸದನ ನೈತಿಕ ಸಮಿತಿಯಿಂದ ತನಿಖೆಗೆ ಒಳಗಾಗಿದ್ದ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ. ಇದೀಗ ಟಿಎಂಸಿಯ ಇನ್ನೊಬ್ಬ ಸದಸ್ಯ ಅಮಾನತಾಗಿದ್ದಾರೆ. ಡೆರೆಕ್ ಓಬ್ರಿಯಾನ್ ಹೀಗೆ ಪದೇ ಪದೆ ಸಂಸತ್ತಿನಲ್ಲಿ ಗಲಾಟೆ ಸೃಷ್ಟಿಸಿ ಸುದ್ದಿಯಾಗುತ್ತಾರೆ. ಇದಕ್ಕೂ ಮುನ್ನ ಹಲವು ಬಾರಿ ಅವರನ್ನು ಕಲಾಪದಿಂದ ಹೊರಗೆ ಹಾಕಲಾಗಿತ್ತು.
ಇದನ್ನೂ ಓದಿ: Mahua Moitra: ಲೋಕಸಭೆಯಿಂದ ಅಮಾನತು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕದ ತಟ್ಟಿದ ಮಹುವಾ