ನವದೆಹಲಿ: ಸಾಲು ಸಾಲು ಚುನಾವಣೆಗಳಿಗೆ ಕಾಂಗ್ರೆಸ್ ಸಿದ್ಧವಾಗುತ್ತಿದೆ. ಸೆ.೪ರಂದು ಬೆಲೆಯೇರಿಕೆ ವಿರುದ್ಧ “ಮೆಹಂಗಾಯಿ ಪರ್ ಹಲ್ಲಾ ಬೋಲ್” (ಬೆಲೆಯೇರಿಕೆ ವಿರುದ್ಧ ಧ್ವನಿಯೆತ್ತಿ) ಹಾಗೂ ಸೆ.೨೭ರಿಂದ “ಭಾರತ್ ಜೋಡೊ” ಅಭಿಯಾನ ಕೈಗೊಳ್ಳುತ್ತಿದೆ. ಇನ್ನು ಸೆ.೨೧ರಂದು ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ಘೋಷಣೆ ಮಾಡಲಾಗುತ್ತದೆ. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರು ಮೆಡಿಕಲ್ ಚೆಕಪ್‌ಗಾಗಿ ವಿದೇಶಕ್ಕೆ ತೆರಳಲು ಮುಂದಾಗಿದ್ದು, “ನನ್ನ ಅನುಪಸ್ಥಿತಿಯಲ್ಲಿ ನೀವೇ ಪಕ್ಷವನ್ನು ಮುನ್ನಡೆಸಿ” (Lead Congress) ಎಂಬುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸೋನಿಯಾ ಗಾಂಧಿ ಜತೆ ಪುತ್ರ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅವರೂ ವಿದೇಶಕ್ಕೆ ತೆರಳುತ್ತಿರುವ ಕಾರಣ ಅಭಿಯಾನಗಳಿಗೆ ಸಿದ್ಧತೆ, ಪಕ್ಷದ ಉಸ್ತುವಾರಿ, ಉಳಿದ ಮುಖಂಡರಿಗೆ ಸಲಹೆ-ಸೂಚನೆ ನೀಡಲು ಗಾಂಧಿ ಕುಟುಂಬದ ಯಾರೂ ಇರದಂತಾಗುತ್ತದೆ. ಹಾಗಾಗಿ, ಅಶೋಕ್ ಗೆಹ್ಲೋಟ್ ಅವರಿಗೆ ಉಸ್ತುವಾರಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಅಶೋಕ್ ಗೆಹ್ಲೋಟ್ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ ಕುತೂಹಲ ಕೆರಳಿದ್ದು, ರಾಹುಲ್ ಗಾಂಧಿ ಅವರು ಮತ್ತೆ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸುತ್ತಿರುವ ಕಾರಣ ಹಲವು ನಾಯಕರ ಹೆಸರುಗಳು ಕೇಳಿ ಬರುತ್ತಿವೆ. ವಿವಿಧ ನಾಯಕರ ಹೆಸರುಗಳಲ್ಲಿ ಅಶೋಕ್ ಗೆಹ್ಲೋಟ್ ಅವರ ಹೆಸರೂ ಮುನ್ನಲೆಗೆ ಬಂದಿದೆ. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರು ನನ್ನ ಅನುಪಸ್ಥಿತಿಯಲ್ಲಿ ನೀವೇ ಪಕ್ಷವನ್ನು ಮುನ್ನಡೆಸಿ ಎಂದು ಹೇಳಿರುವುದು ಮುಂದೆ ಗೆಹ್ಲೋಟ್ ಅವರೇ ಎಐಸಿಸಿ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತಿಗೆ ಪುಷ್ಟಿ ಬಂದಂತಾಗಿದೆ.
ಇದನ್ನೂ ಓದಿ | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಗಸ್ಟ್ 21ರಿಂದ; ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೌನ