Site icon Vistara News

ಇಂದು ಉಪರಾಷ್ಟ್ರಪತಿ ಚುನಾವಣೆ, ಸಂಖ್ಯಾಬಲ ಧನಕರ್‌ ಕಡೆಗೆ

vp

ನವ ದೆಹಲಿ: ಉಪ ರಾಷ್ಟ್ರಪತಿ ಚುನಾವಣೆಯ ಮತದಾನ ಇಂದು (ಆ.6) ನಡೆಯಲಿದೆ. ಆಳುವ ಎನ್‌ಡಿಎ ಕಡೆಯಿಂದ ಜಗದೀಪ್‌ ಧನಕರ್‌ ಹಾಗೂ ಯುಪಿಎ ಅಭ್ಯರ್ಥಿಗಳಾಗಿ ಮಾರ್ಗರೆಟ್‌ ಆಳ್ವಾ ಅವರು ನಿಂತಿದ್ದಾರೆ.

ಪ್ರಸ್ತುತ ತೋರಿಬರುತ್ತಿರುವಂತೆ ಎನ್‌ಡಿಎ ಅಭ್ಯರ್ಥಿಯ ಕಡೆಗೇ ಹೆಚ್ಚಿನ ಮತಗಳಿವೆ. ಆದರೆ ಯುಪಿಎ ಕೂಡ ಇದನ್ನು ಪ್ರತಿಷ್ಠೆಯ ಸ್ಪರ್ಧೆಯಾಗಿ ಪರಿಗಣಿಸಿದೆ. ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ನಡೆದಂತೆ ಈ ಬಾರಿಯೂ ಅಡ್ಡ ಮತದಾನ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಯಾಕೆಂದರೆ, ಪ್ರತಿಪಕ್ಷದಲ್ಲಿ ಈ ಬಾರಿ ಸಾಕಷ್ಟು ಒಡಕು ಇದೆ. ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿ ಹಾಗೂ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಾರ್ಟಿಗಳು ತಾವು ಧನಕರ್‌ ಅವರಿಗೆ ಮತ ಹಾಕುವುದಾಗಿ ಈಗಾಗಲೇ ಹೇಳಿವೆ. ಲೋಕಸಭೆಯಲ್ಲಿ ಎರಡನೇ ಅತಿ ದೊಡ್ಡ ಪ್ರತಿಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್‌ ಪಕ್ಷ ತಾನು ಮತದಾನದಿಂದ ದೂರ ಉಳಿಯುವುದಾಗಿ ಹೇಳಿದೆ. ತೃಣಮೂಲದ 36 ಸಂಸದರು ಇಲ್ಲಿದ್ದಾರೆ.

ಆಮ್‌ ಆದ್ಮಿ ಪಾರ್ಟಿ, ಟಿಆರ್‌ಎಸ್‌, ಎಐಎಂಐಎಂ, ಜೆಎಂಎಂಗಳು ತಾವು ಆಳ್ವಾ ಅವರ ಪರ ಮತ ಚಲಾಯಿಸುವುದಾಗಿ ತಿಳಿಸಿವೆ. ವಿಶೇಷ ಎಂದರೆ, ಈ ಬಾರಿ ಯುಪಿಎ ಪರ ಮತ ಹಾಕುವುದಾಗಿ ಹೇಳಿರುವ ಜೆಎಂಎಂ, ರಾಷ್ಟ್ರಪತಿ ಚುನಾವಣೆಯಲ್ಲಿ ಜಾರ್ಖಂಡ್‌ ಮೂಲದವರಾದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರ ಮತ ಚಲಾಯಿಸಿತ್ತು. ಜಗನ್‌ ಅವರ ವೈಎಸ್‌ಆರ್‌ಸಿಪಿ ಹಾಗೂ ಬಿಜು ಜನತಾ ದಳಗಳು ತಾವು ಧನಕರ್‌ಗೆ ಮತ ಹಾಕುವುದಾಗಿ ಹೇಳಿವೆ. ಇವೆರಡೂ ಸೇರಿ 52 ಮತಗಳಿವೆ.

ಶನಿವಾರ ಮತದಾನ ನಡೆದು, ಇಂದೇ ಫಲಿತಾಂಶವೂ ಪ್ರಕಟವಾಗಲಿದೆ. ಆಗಸ್ಟ್‌ 11ರಂದು ಉಪರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂದು ವೆಂಕಯ್ಯ ನಾಯ್ಡು ಅವರ ಆಡಳಿತಾವಧಿ ಮುಗಿಯಲಿದೆ.

ಈ ಚುನಾವಣೆಯಲ್ಲಿ ಎರಡೂ ಸದನಗಳ ಸಂಸದರು ಸೇರಿಸಿ ಒಟ್ಟಾರೆ 788 ಮತಗಳಿವೆ. ರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾದ 748 ಮತಗಳಲ್ಲಿ 540 ದ್ರೌಪದಿ ಪಾಲಾಗಿದ್ದವು. ಯಶವಂತ್‌ ಸಿನ್ಹಾ ಕೇವಲ 208 ಮತ ಗಳಿಸಿದ್ದರು. ಉಪರಾಷ್ಟ್ರಪತಿ ಎಲೆಕ್ಟೋರಲ್‌ ಕಾಲೇಜ್‌ನಲ್ಲಿ ಬಿಜೆಪಿಯ ಬಳಿಯೇ 394 ಮತಗಳಿವೆ. ಮಿತ್ರಪಕ್ಷಗಳು ಸೇರಿಸಿ 510 ಮತಗಳಾಗಬಹುದು. ಪ್ರತಿಪಕ್ಷದ ಬಳಿಕ ಕೇವಲ 200 ಮತಗಳಿವೆ.

ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ: ಮತ್ತೆ ಎನ್‌​ಡಿಎ ಒಕ್ಕೂಟದ ಅಭ್ಯರ್ಥಿಗೇ ಮಣೆ ಹಾಕಿದ ಮಾಯಾವತಿ!

Exit mobile version