Site icon Vistara News

G20 Summit | ಯುದ್ಧಕ್ಕೆ ಇದು ಕಾಲವಲ್ಲ, ಪುಟಿನ್‌ಗೆ ಮೋದಿ ಕೊಟ್ಟ ಸಂದೇಶವೇ ಜಿ20 ಶೃಂಗಸಭೆಯ ನಿರ್ಣಯ

Modi At G20 Summit

ಬಾಲಿ: ಉಕ್ರೇನ್‌ ಮೇಲೆ ರಷ್ಯಾ ಮಾಡುತ್ತಿರುವ ಆಕ್ರಮಣ ತಡೆಯುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ನೀಡಿದ “ಯುದ್ಧಕ್ಕೆ ಇದು ಕಾಲವಲ್ಲ” ಎಂಬ ಸಂದೇಶವನ್ನೇ ಜಿ20 ಶೃಂಗಸಭೆಯ (G20 Summit) ನಿರ್ಣಯವನ್ನಾಗಿ ಘೋಷಿಸಲಾಗಿದೆ. ಆ ಮೂಲಕ ಶಾಂತಿಗಾಗಿ ಭಾರತ ವ್ಯಕ್ತಪಡಿಸಿದ ನಿಲುವಿಗೆ ವಿಶ್ವದ ಮನ್ನಣೆ ದೊರೆತಂತಾಗಿದೆ.

ಕೆಲ ತಿಂಗಳುಗಳ ಹಿಂದೆ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಸಭೆಯ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿದ್ದ ನರೇಂದ್ರ ಮೋದಿ, “ಇದು ಯುದ್ಧದ ಕಾಲವಲ್ಲ” ಎಂದು ಹೇಳುವ ಮೂಲಕ ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆ ಮಾಡಿ ಎಂಬ ಸಂದೇಶ ರವಾನಿಸಿದ್ದರು. ಈಗ ಜಿ20 ರಾಷ್ಟ್ರಗಳು ಇದನ್ನೇ ನಿರ್ಣಯವಾಗಿ ಒಕ್ಕೊರಲಿನಿಂದ ಅಂಗೀಕರಿಸಿವೆ.

ಜಿ20 ಶೃಂಗಸಭೆಯ ನಿರ್ಣಯದಲ್ಲೇನಿದೆ?
“ಜಾಗತಿಕ ಶಾಂತಿ ಹಾಗೂ ಸುಸ್ಥಿರತೆ ಕಾಪಾಡುವ ದಿಸೆಯಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನು ಪಾಲಿಸುವುದು ಅತ್ಯವಶ್ಯವಾಗಿದೆ. ಅಂತಾರಾಷ್ಟ್ರೀಯ ಕಾನೂನುಗಳ ಪಾಲನೆ ಕುರಿತು ವಿಶ್ವಸಂಸ್ಥೆಯ ಶಿಷ್ಟಾಚಾರಗಳಿಗೆ ಎಲ್ಲರೂ ಬದ್ಧರಾಗಿರಬೇಕು. ಶಸ್ತ್ರಾಸ್ತ್ರಗಳ ಬಳಕೆ, ನಾಗರಿಕರ ಹಕ್ಕುಗಳ ರಕ್ಷಣೆ, ಮೂಲ ಸೌಕರ್ಯಗಳಿಗೆ ಧಕ್ಕೆ ತರುವ ಯಾವುದೇ ಕೃತ್ಯಗಳಿಗೆ ಯಾರೂ ಎಡೆಮಾಡಿ ಕೊಡಬಾರದು. ಅದರಲ್ಲೂ, ಅಣ್ವಸ್ತ್ರಗಳ ಬಳಕೆಯು ಅಕ್ಷಮ್ಯ ಹಾಗೂ ಮಾನವ ವಿರೋಧಿ ಕೃತ್ಯವಾಗಿದೆ. ಯಾವುದೇ ಬಿಕ್ಕಟ್ಟುಗಳು ಇದ್ದರೂ ಅವುಗಳನ್ನು ರಾಜತಾಂತ್ರಿಕ ಮಾರ್ಗ ಹಾಗೂ ಶಾಂತಿಯುತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಅಷ್ಟಕ್ಕೂ, ಇದು ಯುದ್ಧದ ಕಾಲವಲ್ಲ” ಎಂದು ಜಿ20 ಶೃಂಗಸಭೆ ನಿರ್ಣಯ ತೆಗೆದುಕೊಂಡಿದೆ.

ಇದನ್ನೂ ಓದಿ | Narendra Modi | ಮೋದಿ ನಡೆಯನ್ನೇ ಎಲ್ಲ ರಾಷ್ಟ್ರಗಳೂ ಅನುಸರಿಸಬೇಕು ಎಂದು ಅಮೆರಿಕ ಹೇಳಿದ್ದೇಕೆ?

Exit mobile version