ವಾಶಿಮ್: ಆಯುಷ್ಯ ಗಟ್ಟಿಯಿದ್ದರೆ ಎಂತೆಂಥಾ ಅಪಾಯದಿಂದ ಪಾರಾಗಿಬಿಡುತ್ತೇವೆ ಎಂಬುದಕ್ಕೆ ಈ ಕೆಳಗಿನ ವಿಡಿಯೊದಲ್ಲಿ ಇರುವ ದೃಶ್ಯ ಜೀವಂತ ಉದಾಹರಣೆ ನೋಡಿ. ಪುಟ್ಟ ಮಗುವೊಂದು 30 ಅಡಿ ಎತ್ತರದಿಂದ ಬೈಕ್ಮೇಲೆ ಬಿದ್ದು, ನೆಲಕ್ಕೆ ಬಿದ್ದಿದೆ. ಹಾಗೆ ಬಿದ್ದ ಮಗು ಸ್ವಲ್ಪವೂ ಗಾಯಗೊಳ್ಳದೆ, ಅದರ ಪಾಡಿಗೆ ಅದೇ ಎದ್ದು ನಿಂತಿದೆ. ಈ ವಿಡಿಯೊ ವೈರಲ್ (Viral Video)ಆಗುತ್ತಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ. ಮಗು ಬದುಕಿದ್ದು, ಸ್ವಲ್ಪವೂ ಗಾಯಗೊಳ್ಳದೆ ಅದು ಇಷ್ಟು ಆರಾಮಾಗಿ ಎದ್ದುನಿಂತಿದ್ದು ಒಂದು ಪವಾಡವೇ ಸರಿ ಎನ್ನುತ್ತಿದ್ದಾರೆ.
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ರಿಸೋಡೆ ಎಂಬ ಪಟ್ಟಣದಲ್ಲಿರುವ ಮಹಾನಂದ ಕಾಲೋನಿಯಲ್ಲಿ ನಡೆದ ಘಟನೆ ಇದಾಗಿದ್ದು, ಆ ಮನೆಯ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಆ ಹೆಣ್ಣು ಮಗು 30 ಅಡಿ ಎತ್ತರದಿಂದ ನೇರವಾಗಿ ಸಿಮೆಂಟ್ ನೆಲಕ್ಕೇ ಬಿದ್ದಿದ್ದರೆ ಬದುಕುಳಿಯುವುದು ಕಷ್ಟವೇ ಆಗಿತ್ತು. ಅದಿಲ್ಲದೆ ಇದ್ದರೆ ತೀವ್ರ ಸ್ವರೂಪದ ಗಾಯವಂತೂ ಆಗುತ್ತಿತ್ತು. ಆದರೆ ಅದು ಬೈಕ್ನ ಸೀಟ್ ಮೇಲೆ ಬಿದ್ದು, ನಂತರ ನೆಲಕ್ಕೆ ಉರುಳಿದೆ. ಬೈಕ್ ಸೀಟ್ ಸ್ವಲ್ಪ ಮೆತ್ತಗೆ ಇದ್ದ ಪರಿಣಾಮ ಮಗುವಿಗೆ ಏಟಾಗಲಿಲ್ಲ. ಅಲ್ಲಿಂದ ನೆಲ ಕಡಿಮೆ ಅಂತರದಲ್ಲಿ ಇರುವುದರಿಂದ ಅಪಾಯದಿಂದ ಬಾಲಕಿ ಪಾರಾಗಿದ್ದಾಳೆ.
ಬೆಂಗಳೂರಿನ ಕೆಂಗೇರಿಯಲ್ಲಿ ಮಾರ್ಚ್ನಲ್ಲಿ ಇಂಥದ್ದೇ ಒಂದು ದುರ್ಘಟನೆ ನಡೆದಿತ್ತು. ಅಪಾರ್ಟ್ಮೆಂಟ್ನ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಮೂರುವರ್ಷದ ಬಾಲಕ ಮೃತಪಟ್ಟಿದ್ದ. ಆತನ ಹೆಸರು ರಾಹುಲ್. ಅಪಾರ್ಟ್ಮೆಂಟ್ನ ಎರಡನೇ ಮಹಡಿಯಲ್ಲಿ ಮನೆಯಿತ್ತು. ಮಾರ್ಚ್ 10ರಂದು ಇವನ ಅಪ್ಪ ಶಿವಪ್ಪ ಮತ್ತು ಅಮ್ಮ ಅಂಬಿಕಾ ಮನೆಯೊಳಗೆ ಇದ್ದರು. ಹುಡುಗ ಬಾಲ್ಕನಿಯಲ್ಲಿ ಆಟವಾಡುತ್ತಿದ್ದವ ಆಯ ತಪ್ಪಿ ಕೆಳಗೆ ಬಿದ್ದಿದ್ದ. ಗಾಯಗೊಂಡ ಅವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಸದ್ಯ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೂ ಸಣ್ಣದಲ್ಲ. 30 ಅಡಿ ಎತ್ತರವೆಂದರೆ ಕಡಿಮೆಯಲ್ಲ. ಆದರೆ ಈ ಹುಡುಗಿಯನ್ನು ಕಾಪಾಡಿದ್ದು ಅಲ್ಲಿದ್ದ ಬೈಕ್. ಮಹಡಿಗಳ ಮೇಲೆ ಮನೆಯಿರುವವರು ಮಕ್ಕಳ ಬಗ್ಗೆ ಎರಡು ಪಟ್ಟು ಜಾಸ್ತಿ ಕಾಳಜಿ ವಹಿಸುವುದು ಅತ್ಯಂತ ಮುಖ್ಯ ಎಂಬ ಸಂದೇಶವನ್ನು ಇಂಥ ಘಟನೆಗಳು ಸಾರಿಸಾರಿ ಹೇಳುತ್ತವೆ.