ನವ ದೆಹಲಿ: ಫೆಬ್ರವರಿ 1ರಂದು ಮಂಡನೆಯಾಗಲಿರುವ 2022-23 ರ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಗೃಹ ಸಾಲಗಾರರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವುಗಳ ಬಗ್ಗೆ ನೋಡೋಣ.
2022ರಲ್ಲಿ ಗೃಹ ವಲಯ ಚೆನ್ನಾಗಿ ಬೆಳವಣಿಗೆ ಹೊಂದಿತ್ತು. ಅನಾರೋಕ್ ಸಂಸ್ಥೆಯ ಅಧ್ಯಯನದ ಪ್ರಕಾರ, 2021ಕ್ಕೆ ಹೋಲಿಸಿದರೆ 2022ರಲ್ಲಿ ಪ್ರಾಪರ್ಟಿಗಳ ಮಾರಾಟದಲ್ಲಿ 50% ಹೆಚ್ಚಳವಾಗಿತ್ತು. ಹೀಗಿದ್ದರೂ 2023ರಲ್ಲಿ ಹಾದಿ ಅಷ್ಟೊಂದು ಸುಗಮವಾಗಿಲ್ಲ ಎಂಬ ನಿರೀಕ್ಷೆ ಇದೆ. ಹೀಗಾಗಿ ಕೇಂದ್ರ ಬಜೆಟ್ ಮೇಲೆ ನಿರೀಕ್ಷೆಯ ಒತ್ತಡವೂ ಹೆಚ್ಚಿದೆ.
ಭಾರತದ ಆರ್ಥಿಕತೆಯಲ್ಲಿ ರಿಯಲ್ ಎಸ್ಟೇಟ್ ನಿರ್ಣಾಯಕವಾಗಿದೆ. ಆದರೆ ಇತ್ತೀಚಿನ ಬಡ್ಡಿ ದರ ಏರಿಕೆಗಳಿಂದ ಸವಾಲಿನ ಸಂದರ್ಭ ಸೃಷ್ಟಿಯಾಗಿದೆ. ಬ್ಯಾಂಕ್‌ಗಳು ಸ್ಪರ್ಧಾತ್ಮಕ ದರದಲ್ಲಿ ಸಾಲ ನೀಡುವುದು ರಿಯಾಲ್ಟಿ ವಲಯಕ್ಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಬೇಸಿಕ್ ಹೋಮ್‌ಲೋನ್ ಸಂಸ್ಥೆಯ ಸಿಇಒ ಅತುಲ್ ಮೋಂಗಾ.
ಗೃಹ ಸಾಲ ನಿಯಮಾವಳಿಗಳಲ್ಲಿ ಸುಧಾರಣೆ
ಗೃಹ ಸಾಲದ ಬಡ್ಡಿ ದರ ಇಳಿಕೆ ಅನಿವಾರ್ಯ. ಇದು ಆರ್‌ಬಿಐನ ನೀತಿಯನ್ನು ಆಧರಿಸಿದೆ. ಹೀಗಾಗಿ ಬಜೆಟ್ ಮೂಲಕ ಗೃಹ ಖರೀದಾರಿಗೆ ರಿಲೀಫ್ ನೀಡಬೇಕು. ಗೃಹ ಸಾಲ ಕುರಿತ ನಿಯಮಗಳನ್ನು ಸಡಿಲಗೊಳಿಸಿ ಸಹಕರಿಸಬೇಕು ಎನ್ನುತ್ತಾರೆ ಐಎಂಜಿಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜು ಶರ್ಮಾ.
ಗೃಹ ಸಾಲ ಖರೀದಿಯಲ್ಲಿ ಅಗತ್ಯವಿರುವ ಡೌನ್‌ಪೇಮೆಂಟ್ ಮೊತ್ತವನ್ನು ಇಳಿಸುವುದರಿಂದ ಗೃಹಸಾಲಗಾರರಿಗೆ ಸಹಕರಿಸಬಹುದು ಎನ್ನುತ್ತಾರೆ ಶರ್ಮಾ.
ಹೆಚ್ಚುತ್ತಿರುವ ಬಡ್ಡಿ ದರದ ನಡುವೆ ತೆರಿಗೆ ರಿಬೇಟ್:
ಗೃಹ ಸಾಲಗಳ ಬಡ್ಡಿ ದರಗಳು ಹೆಚ್ಚುತ್ತಿರುವುದರಿಂದ ಗೃಹ ಸಾಲದ ಬಡ್ಡಿಯ ಮೇಲೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 24(b) ಅಡಿಯಲ್ಲಿ ತೆರಿಗೆ ರಿಬೇಟ್ ಅನ್ನು 5 ಲಕ್ಷ ರೂ. ತನಕದ ಬಡ್ಡಿಗೆ ವಿಸ್ತರಿಸಬೇಕು. ಮೊದಲ ಸಲ ಮನೆ ಖರೀದಿಸುವವರಿಗೆ ತೆರಿಗೆ ವಿನಾಯಿತಿ ನೀಡಬೇಕು ಎನ್ನುತ್ತಾರೆ ತಜ್ಞರು.
ಅಫರ್ಡಬಲ್ ಹೌಸಿಂಗ್ ಮಿತಿಯನ್ನು ಬದಲಿಸಬೇಕು:
ಪ್ರಸ್ತುತ 45 ಲಕ್ಷ ರೂ. ತನಕ ಮೌಲ್ಯದ ಮನೆಗೆ ಅಥವಾ ಫ್ಲ್ಯಾಟ್‌ಗೆ ಅಫರ್ಡಬಲ್ ಹೌಸಿಂಗ್ ಎನ್ನುತ್ತಾರೆ. ಈ ಮಿತಿಯನ್ನು 75 ಲಕ್ಷ ರೂ.ಗೆ ವಿಸ್ತರಿಸಬೇಕು.
ಜಿಎಸ್‌ಟಿ ರಿಲೀಫ್
ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಜಿಎಸ್‌ಟಿ ಇರುವುದರಿಂದ ಡೆವಲಪರ್‌ಗಳಿಗೆ ಹೆಚ್ಚುವರಿ ತೆರಿಗೆ ಹೊರೆಯಾಗಿ ಪರಿಣಮಿಸಿದೆ. ಇದರ ಪರಿಣಾಮ ಖರೀದಿದಾರರಿಗೆ ತಗಲುವ ವೆಚ್ಚ ಹೆಚ್ಚುತ್ತದೆ. ಉಕ್ಕು ಮತ್ತು ಸಿಮೆಂಟ್ ಮೇಲೆ ಅನುಕ್ರಮವಾಗಿ 18% ಮತ್ತು 28% ಜಿಎಸ್‌ಟಿ ಇದೆ. ಆದ್ದರಿಂದ ಈ ಕಚ್ಚಾ ವಸ್ತುಗಳಿಗೆ ಸಂಬಂಧಿಸಿ ಡೆವಲಪರ್‌ಗಳಿಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಸಿಗದ ಕಾರಣ (ITC) ಬಜೆಟ್‌ನಲ್ಲಿ ಒದಗಿಸಿಕೊಡಬೇಕು ಎಂಬ ಬೇಡಿಕೆ ಇದೆ.
ನಿರ್ಮಾಣ ಹಂತದಲ್ಲಿರುವ ಪ್ರಾಜೆಕ್ಟ್‌ಗಳಿಗೆ ಜಿಎಸ್‌ಟಿಗೆ 1%ರ ಮಿತಿ ಹಾಕಬೇಕು ಎಂದೂ ಡೆವಲಪರ್‌ಗಳು ಒತ್ತಾಯಿಸಿದ್ದಾರೆ.
ಬಾಡಿಗೆ ವಸತಿ:
ಭಾರತದಲ್ಲಿ ಬಾಡಿಗೆ ವಸತಿ ವಲಯ ಮಾರುಕಟ್ಟೆ ಅಷ್ಟಾಗಿ ಅಭಿವೃದ್ಧಿಯಾಗಿಲ್ಲ. ರೆಂಟಲ್ ಹೌಸಿಂಗ್ ಪ್ರಾಜೆಕ್ಟ್‌ಗಳಿಗೆ ತೆರಿಗೆ ಅನುಕೂಲ ಕಲ್ಪಿಸುವ ಮೂಲಕ ಉತ್ತೇಜನ ನೀಡಬೇಕು ಎನ್ನುತ್ತಾರೆ ತಜ್ಞರು.