ಲಂಡನ್: ದೇಶದ ಅಗ್ರ ವಕೀಲರಲ್ಲಿ ಒಬ್ಬರಾದ, ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ವಾದ ಮಂಡಿಸಿದ ಖ್ಯಾತಿ ಹೊಂದಿರುವ ಹರೀಶ್ ಸಾಳ್ವೆ (Harish Salve) ಅವರು ತಮ್ಮ 68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದಾರೆ. ಲಂಡನ್‌ನಲ್ಲಿ (London) ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಅವರು ತ್ರಿನಾ (Trina) ಅವರನ್ನು ವರಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ, ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಸೇರಿ ಹಲವು ಗಣ್ಯರು ಲಂಡನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡು ಹರೀಶ್ ಸಾಳ್ವೆ ಹಾಗೂ ತ್ರಿನಾ ದಂಪತಿಗೆ ಶುಭ ಕೋರಿದ್ದಾರೆ. ಹರೀಶ್ ಸಾಳ್ವೆ ಹಾಗೂ ತ್ರಿನಾ ಅವರ ಮದುವೆಯ ಫೋಟೊಗಳು ಹಾಗೂ ವಿಡಿಯೊ ವೈರಲ್ ಆಗಿವೆ.
ಹರೀಶ್ ಸಾಳ್ವೆ ಅವರು ಮೊದಲು ಮೀನಾಕ್ಷಿ ಎಂಬುವರನ್ನು ವರಿಸಿದ್ದರು. 38 ವರ್ಷಗಳ ದಾಂಪತ್ಯದ ಬಳಿಕ ಅಂದರೆ 2020ರ ಜೂನ್‌ನಲ್ಲಿ ಹರೀಶ್ ಸಾಳ್ವೆ ಹಾಗೂ ಮೀನಾಕ್ಷಿ ಬೇರೆಯಾದರು. 2020ರಲ್ಲಿ ಕರೊಲಿನ್ ಬ್ರೊಸಾರ್ಡ್ ಅವರನ್ನು ಹರೀಶ್ ಸಾಳ್ವೆ ಮದುವೆಯಾಗಿದ್ದರು. ಈ ಮದುವೆಯೂ ಮುರಿದುಬಿದ್ದಿತ್ತು. ಈಗ ತ್ರಿನಾ ಅವರ ಜತೆ ಹರೀಶ್ ಸಾಳ್ವೆ ಮೂರನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇದನ್ನೂ ಓದಿ: Actor Chiranjeevi | ಟಾಲಿವುಡ್ ಸ್ಟಾರ್ ಚಿರಂಜೀವಿ ಕಿರಿಯ ಮಗಳಿಗೆ ಮೂರನೇ ಮದುವೆ?
ಸುಪ್ರೀಂ ಕೋರ್ಟ್ ವಕೀಲರಾಗಿರುವ ಹರೀಶ್ ಸಾಳ್ವೆ, 1999ರಿಂದ 2002ರವರೆಗೆ ದೇಶದ ಸಾಲಿಸಿಟರ್ ಜನರಲ್ ಆಗಿದ್ದರು. ಪಾಕಿಸ್ತಾನದಿಂದ ಬಂಧಿತರಾಗಿರುವ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ವಿಧಿಸಿರುವ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು ಕೇವಲ ಒಂದು ರೂಪಾಯಿ ಸಂಭಾವನೆ ಪಡೆದಿರುವುದು ವಿಶೇಷವಾಗಿದೆ.
ದೇಶದ ಪ್ರಮುಖ ಪ್ರಕರಣಗಳಲ್ಲಿ ಹರೀಶ್ ಸಾಳ್ವೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪರ, ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್ ಕೇಸ್ ಸೇರಿ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಟಾಟಾ ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪರವಾಗಿಯೂ ಅವರು ವಿವಿಧ ಕೇಸ್‌ಗಳಲ್ಲಿ ವಾದ ಮಂಡಿಸಿದ್ದಾರೆ.