ನವದೆಹಲಿ: ಬ್ರಿಟನ್‌ನಲ್ಲಿ ಅಸ್ಟ್ರಾಜೆನಿನಾ ಕೊರೊನಾ ನಿರೋಧಕ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಸ್ವತಃ ಕಂಪನಿಯೇ ಒಪ್ಪಿಕೊಂಡ ಬಳಿಕ ಭಾರತದಲ್ಲೂ ಕೊರೊನಾ ನಿರೋಧಕ ಲಸಿಕೆಯ ಸುರಕ್ಷತೆಗೆ ಬಗ್ಗೆ ಚರ್ಚೆಯಾಗುತ್ತಿದೆ. ಅದರಲ್ಲೂ, ದೇಶೀಯವಾಗಿ ಭಾರತ್ ಬಯೋಟೆಕ್ (Bharat Biotech) ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಅಡ್ಡಪರಿಣಾಮಗಳ ಕುರಿತು ಬನಾರಸ್ ಹಿಂದು ವಿವಿ (BHU) ವರದಿ ಬಿಡುಗಡೆ ಮಾಡಿದೆ. ಕೊವ್ಯಾಕ್ಸಿನ್ ಪಡೆದ ಮೂವರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಬಿಎಚ್‌ಯು ಪ್ರಕಟಿಸಿದ ವರದಿಗೆ ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಆಕ್ರೋಶ ವ್ಯಕ್ತಪಡಿಸಿದೆ.
ಐಸಿಎಂಆರ್ ಮಹಾ ನಿರ್ದೇಶಕ ರಾಜೀವ್ ಬಾಹ್ಲ್ ಅವರು ಬಿಎಚ್‌ಯು ಅಧ್ಯಯನ ವರದಿಯನ್ನು ನಿರಾಕರಿಸಿದ್ದಾರೆ. “ಬಿಎಚ್‌ಯು ಸಂಶೋಧನೆ ಮಾಡುವ ಮುನ್ನ ಸರಿಯಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಸಂಶೋಧನೆಗೆ ಬಳಸಿರುವ ಜನಸಂಖ್ಯೆ ಪ್ರಮಾಣಕ್ಕೂ, ಸ್ಟಡಿ ವರದಿಗೂ ತುಂಬ ವ್ಯತ್ಯಾಸವಿದೆ. ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಹೇಳಿದವರನ್ನು ವರದಿ ತಯಾರಿಸಲು ಟೆಲಿಫೋನ್ ಮೂಲಕ ಸಂಪರ್ಕಿಸಲಾಗಿದೆಯೇ ಹೊರತು, ಅವರ ಅಭಿಪ್ರಾಯವನ್ನು ನೇರವಾಗಿ ಪಡೆದುಕೊಂಡಿಲ್ಲ. ಸಂಶೋಧನೆಗೆ ಬಳಸಿರುವ ಅಂಕಿ-ಅಂಶಗಳನ್ನು ಸರಿಯಾಗಿ ಅವಲೋಕನ ಮಾಡಿಲ್ಲ” ಎಂಬುದಾಗಿ ರಾಜೀವ್ ಬಾಹ್ಲ್ ಹೇಳಿದ್ದಾರೆ.
"Poor methodology," ICMR dissociates itself from Covaxin safety study, calls for retraction
— ANI Digital (@ani_digital) May 20, 2024
Read @ANI Story | https://t.co/5MWKtL5xvc#ICMR #Covaxin pic.twitter.com/JN0GwK6KGV
“ಲಸಿಕೆಯ ಅಡ್ಡ ಪರಿಣಾಮ, ಲಸಿಕೆಯ ಸುರಕ್ಷತೆ ಬಗ್ಗೆ ಅಧ್ಯಯನ ಮಾಡಲು ತುಂಬ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಬಿಎಚ್‌ಯು ಇಂತಹ ಮಾನದಂಡಗಳನ್ನು ಅನುಸರಿಸುವುದು ಬಿಡಿ, ಅಧ್ಯಯನ ಮಾಡುವ ತಜ್ಞರಿಗೆ ತಾಂತ್ರಿಕ ಹಾಗೂ ಹಣಕಾಸು ನೆರವು ಕೂಡ ಒದಗಿಸಿಲ್ಲ. ಹಾಗಾಗಿ, ಲಸಿಕೆಯ ಸುರಕ್ಷತೆಯ ಬಗ್ಗೆ ಬನಾರಸ್ ಹಿಂದು ವಿವಿ ಮಾಡಿದ ಸಂಶೋಧನಾ ವರದಿಯು ವೈಜ್ಞಾನಿಕತೆಯ ಆಧಾರದ ಮೇಲಿಲ್ಲ” ಎಂದು ಹೇಳಿದ್ದಾರೆ.
ಕೊವ್ಯಾಕ್ಸಿನ್ ಲಸಿಕೆ ಪಡೆದ ಸುಮಾರು 926 ಜನರನ್ನು ಸಂಪರ್ಕಿಸಿ ಲಸಿಕೆಯ ಸುರಕ್ಷತೆ, ಅಡ್ಡ ಪರಿಣಾಮಗಳ ಕುರಿತು ಅಧ್ಯಯನ ವರದಿ ತಯಾರಿಸಿದೆ. ಲಸಿಕೆ ಪಡೆದ ಮೂವರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ ಉಂಟಾಗಿದೆ. ಲಸಿಕೆ ಪಡೆದವರಿಗೆ ಪಾರ್ಶ್ವವಾಯು, ನರಗಳಿಗೆ ಸಂಬಂಧಿಸಿದ ಕಾಯಿಲೆ, ಕೆಮ್ಮು, ಮೂಗು ಸೋರುವಿಕೆ, ಗಂಟಲು ಕೆರೆತ, ಉಸಿರಾಟ ಸಮಸ್ಯೆ ಸೇರಿ ಹಲವು ಅಡ್ಡ ಪರಿಣಾಮಗಳು ಕಾಣಿಸಿಕೊಂಡಿವೆ” ಎಂಬುದಾಗಿ ವರದಿ ತಿಳಿಸಿತ್ತು.
ಭಾರತ್ ಬಯೋಟೆಕ್ ಹೇಳುವುದೇನು?
“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್ ಮಾತ್ರ. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ. ಹಾಗಾಗಿ, ಲಸಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ” ಎಂಬುದಾಗಿ ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.
ಇದನ್ನೂ ಓದಿ: Covaxin: ಕೊವ್ಯಾಕ್ಸಿನ್ ಸುರಕ್ಷಿತ ಲಸಿಕೆ ಎಂದ ಭಾರತ್ ಬಯೋಟೆಕ್; ಸೈಡ್ ಎಫೆಕ್ಟ್ ಆರೋಪದ ಬೆನ್ನಲ್ಲೇ ಸ್ಪಷ್ಟನೆ!