Site icon Vistara News

16 ದೇಗುಲಗಳಲ್ಲಿ ವಸ್ತ್ರಸಂಹಿತೆ; ಹರಿದ ಜೀನ್ಸ್‌, ಶಾರ್ಟ್ಸ್‌ ತೊಟ್ಟು ಹೋದರೆ ಹೆಣ್ಣುಮಕ್ಕಳಿಗಿಲ್ಲ ಪ್ರವೇಶ

Torn Jeans, Shorts Are Prohibited In Temples

Torn Jeans, Shorts Are Prohibited: 16 Temples In Maharashtra Impose Dress Code

ಮುಂಬೈ: ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ ಬರಬೇಕು ಎಂಬ ನಿಯಮವಿದೆ. ಮೇಲು-ಕೀಳು, ಬಡವ-ಶ್ರೀಮಂತ ಎಂಬ ಭೇದ-ಭಾವ ಮಕ್ಕಳ ಮನಸ್ಸಿನಲ್ಲಿ ಮೂಡಬಾರದು ಎಂಬ ಕಾರಣಕ್ಕಾಗಿ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ. ಆದರೆ, ಮಹಾರಾಷ್ಟ್ರದ ದೇವಾಲಯಗಳಲ್ಲೂ ವಸ್ತ್ರಸಂಹಿತೆ ಜಾರಿಗೆ ಬಂದಿದ್ದು, ಹರಿದ ಜೀನ್ಸ್‌, ಶಾರ್ಟ್ಸ್‌ ಸೇರಿ ಮೈ ಕಾಣುವ ಯಾವುದೇ ಬಟ್ಟೆಗಳನ್ನು ಧರಿಸಿ ಬರುವ ಹೆಣ್ಣುಮಕ್ಕಳಿಗೆ ಪ್ರವೇಶ ನಿಷೇಧಿಸಲಾಗಿದೆ.

ಹೌದು, ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿರುವ 16 ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ಬಂದಿದೆ. ದೇವಾಲಯಗಳ ಎದುರು ಈ ಕುರಿತು ಬೋರ್ಡ್‌ಗಳನ್ನು ಹಾಕಲಾಗಿದೆ. “ಮೈ ಕಾಣಿಸುವ, ಪ್ರಚೋದನಾತ್ಮಕವಾಗಿರುವ ಅಥವಾ ಅಸಭ್ಯ ಎನಿಸುವ ಉಡುಪುಗಳನ್ನು ಧರಿಸಿ ಬರುವವರಿಗೆ ದೇವಾಲಯದ ಆವರಣಕ್ಕೆ ಪ್ರವೇಶವಿಲ್ಲ” ಎಂದು ಬೋರ್ಡ್‌ಗಳ ಮೇಲೆ ಮರಾಠಿಯಲ್ಲಿ ಬರೆಯಲಾಗಿದೆ.

ಮಂದಿರ ಮಹಾಸಂಘ ಹಾಗೂ ಹಿಂದು ಜನಜಾಗೃತಿ ಸಂಘಟನೆಗಳು ಹೊಸ ನಿಯಮ ಜಾರಿಗೆ ತಂದಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಮುಂದಿನ ಎರಡು ತಿಂಗಳಲ್ಲಿ ಅಹ್ಮದ್‌ನಗರ ಜಿಲ್ಲೆ ಸೇರಿ ರಾಜ್ಯಾದ್ಯಂತ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಂಘಟನೆಗಳು ತಿಳಿಸಿವೆ. ಇದಲ್ಲದೆ, ಸರ್ಕಾರದ ವ್ಯಾಪ್ತಿಯ ಶಿರಡಿ ಸಾಯಿಬಾಬಾ ಸೇರಿ ಹಲವು ದೇವಾಲಯಗಳಲ್ಲಿ ಸರ್ಕಾರ ಕೂಡ ಇಂತಹ ವಸ್ತ್ರಸಂಹಿತೆಯ ನಿಯಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿವೆ.

ಇದನ್ನೂ ಓದಿ: Indian Army uniform : ಸೇನೆಯಲ್ಲಿ ಆಗಸ್ಟ್‌ 1ರಿಂದ ಎಲ್ಲ ಅಧಿಕಾರಿಗಳಿಗೆ ಸಮಾನ ಸಮವಸ್ತ್ರ, ಕಾರಣವೇನು?

ನಾಗ್ಪುರ ದೇಗುಲಗಳಲ್ಲಿ ಈಗಾಗಲೇ ಜಾರಿ

ನಾಗ್ಪುರದ ನಾಲ್ಕು ದೇವಾಲಯಗಳಲ್ಲಿ ಈಗಾಗಲೇ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಧಂತೋಲಿಯಲ್ಲಿರುವ ಗೋಪಾಲಕೃಷ್ಣ ದೇವಾಲಯ, ಕನೋಲಿಬರದಲ್ಲಿರುವ ಬೃಹಸ್ಪತಿ ದೇವಾಲಯ ಸೇರಿ ನಾಲ್ಕು ದೇವಾಲಯಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಮಹಾರಾಷ್ಟ್ರ ಮಂದಿರ ಮಹಾಸಂಘವು ಈ ತೀರ್ಮಾನ ತೆಗೆದುಕೊಂಡಿದೆ. ಆದಾಗ್ಯೂ, ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಿರುವುದಕ್ಕೆ ಪರ-ವಿರೋಧ ಚರ್ಚೆ ಆರಂಭವಾಗಿವೆ.

Exit mobile version