ಬೆಂಗಳೂರು: “ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ಬಗ್ಗೆ ನನಗೆ ಸಂಪೂರ್ಣ ನಿರಾಶೆಯಾಗಿದೆ” ಎಂದು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಎನ್. ಸಂತೋಷ್ ಹೆಗ್ಡೆ (Former Supreme Court Judge N Santosh Hegde) ಹೇಳಿದ್ದಾರೆ. ದಿಲ್ಲಿ ಅಬಕಾರಿ ನೀತಿ (Delhi Excise policy) ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ (Aam Admi Party) ನಾಯಕನ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಕೂಡ ಆಗಿರುವ ಜಸ್ಟಿಸ್ (ನಿ) ಹೆಗ್ಡೆ (N Santosh Hegde), ದಶಕದ ಹಿಂದೆ ಅಣ್ಣಾ ಹಜಾರೆ ಮುನ್ನಡೆಸಿದ ʼಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನದ ರೂವಾರಿಗಳಲ್ಲಿ ಒಬ್ಬರಾಗಿದ್ದವರು. ಆ ಸಂದರ್ಭದಲ್ಲಿ ಕೇಜ್ರಿವಾಲ್ (Arvind Kejriwal) ಇವರ ಒಡನಾಡಿಯಾಗಿದ್ದರು. ಭ್ರಷ್ಟಾಚಾರದ ಸಮಸ್ಯೆಯನ್ನು ತೀಕ್ಷ್ಣವಾಗಿ ಎದುರಿಸಿದ್ದ ಈ ಚಳವಳಿ, ಯುಪಿಎಯನ್ನು ಅಧಿಕಾರದಿಂದ ಕೆಡವಲು ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು.
“ಅಧಿಕಾರದಲ್ಲಿ ದುರಾಶೆ ನಿಮ್ಮನ್ನು ಮೀರಿಸುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಅವರು ಅರವಿಂದ್ ಕೇಜ್ರಿವಾಲ್ ವಿರುದ್ಧದ ಪ್ರಕರಣದ ಕುರಿತು ಹೇಳಿದ್ದಾರೆ. “ನಾನು ಕೇಜ್ರಿವಾಲ್ ಬಗ್ಗೆ ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ. ಎಎಪಿ ಅಧಿಕಾರಕ್ಕೆ ಬಂದ ನಂತರ ಆಡಳಿತಾತ್ಮಕ ನ್ಯಾಯಸಮ್ಮತತೆಯನ್ನು ಎತ್ತಿಹಿಡಿಯುತ್ತದೆ ಎಂದು ನಾನು ಭಾವಿಸಿದೆ. ಆದರೆ ಇದು ʼಅಧಿಕಾರವು ಭ್ರಷ್ಟಗೊಳಿಸುತ್ತದೆ, ಸಂಪೂರ್ಣ ಅಧಿಕಾರವು ಸಂಪೂರ್ಣವಾಗಿ ಭ್ರಷ್ಟಗೊಳಿಸುತ್ತದೆʼ ಎಂಬುದರ ಸೂಚನೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಲೋಕಪಾಲ್ ಚಳವಳಿಯ ಒಂದು ಭಾಗವಾಗಿದ್ದ ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾ. ಹೆಗ್ಡೆ ಅವರು ನಂತರ ಅದರಿಂದ ಹೊರಬಂದಿದ್ದರು. ಕೇಜ್ರಿವಾಲ್ ಅದರ ಜನಪ್ರಿಯತೆಯಿಂದಲೇ ರಾಜಕೀಯ ಪಕ್ಷ ಕಟ್ಟಿ (ಆಪ್) ಗೆದ್ದಿದ್ದರು.
“ನಾನು ಅದರಿಂದ ಹೊರಬರಲು ಕಾರಣವೆಂದರೆ, ಇಂದು ರಾಜಕೀಯವು ಭ್ರಷ್ಟಾಚಾರದ ಬಾವಿಯಾಗಿದೆ. ಯಾವುದೇ ರಾಜಕೀಯ ಪಕ್ಷವೂ ಅದರಿಂದ ಮುಕ್ತವಾಗಿಲ್ಲ. ʼಭ್ರಷ್ಟಾಚಾರದ ವಿರುದ್ಧ ಭಾರತʼ ಆಂದೋಲನವು ಆಡಳಿತದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡಿತ್ತು. ನಾವು ರಾಜಕೀಯದಿಂದ ಹೊರಗುಳಿಯುತ್ತೇವೆ ಮತ್ತು ರಾಜಕೀಯವನ್ನು ಶುದ್ಧೀಕರಿಸಲು ಪ್ರಯತ್ನಿಸುತ್ತೇವೆ ಎಂಬುದು ನಮ್ಮ ತತ್ವವಾಗಿತ್ತು. ಆದರೆ ನಂತರ ಒಂದು ಗುಂಪಿನ ಜನರು ನಾವು ರಾಜಕೀಯಕ್ಕೆ ಪ್ರವೇಶಿಸಿ ರಾಜಕೀಯವನ್ನು ಸ್ವಚ್ಛಗೊಳಿಸಬೇಕು ಎಂದು ನಿರ್ಧರಿಸಿದರು. ಅದನ್ನು ಹಾಗೆ ಯಶಸ್ವಿಯಾಗಿ ಮಾಡಬಹುದು ಎಂದು ನಾನು ಎಂದಿಗೂ ನಂಬಲಿಲ್ಲ. ಇಂದು ಎಎಪಿಯಲ್ಲಿ ನಡೆಯುತ್ತಿರುವುದು, ನಾನು ಅಂದು ಭಾವಿಸಿದ್ದು ಸರಿ ಎಂಬುದಕ್ಕೆ ಉದಾಹರಣೆಯಾಗಿದೆ” ಎಂದು ಹೆಗ್ಡೆ ಹೇಳಿದರು.
“ಪಕ್ಷಕ್ಕೆ ಸೇರುವಂತೆ ಆಹ್ವಾನಿಸಲು ಅರವಿಂದ ಕೇಜ್ರಿವಾಲ್ ಮನೆಗೆ ಬಂದಿದ್ದರು. ಆದರೆ ನಾನು ಒಪ್ಪಲಿಲ್ಲ” ಎಂದು ಅವರು ಹೇಳಿದರು. “ಆಡಳಿತ ಪಕ್ಷವು ವಿರೋಧವನ್ನು ನಾಶಮಾಡಲು ಮಾತ್ರ ಇದನ್ನು ಮಾಡುತ್ತಿದೆ ಎಂಬುದು ವಿರೋಧ ಪಕ್ಷಗಳ ಆರೋಪ. ನಾನು ಅದನ್ನು ನಂಬುವುದಿಲ್ಲ. ಹೌದು, ಆಡಳಿತ ಪಕ್ಷದವರು ಇದನ್ನು ಆಯ್ದುಕೊಂಡು ಮಾಡುತ್ತಿದ್ದಾರೆ. ಆದರೆ ಅದು ಅಪರಾಧವಲ್ಲ. ಏಕೆಂದರೆ ಕ್ರಿಮಿನಲ್ ನ್ಯಾಯಶಾಸ್ತ್ರದಲ್ಲಿ ಸಮಾನತೆಯನ್ನು ಅನ್ವಯಿಸುವ ವಿಧಿ 14 (ಸಂವಿಧಾನದ) ಇಲ್ಲ” ಎಂದರು.
“ಮುಂದೊಂದು ದಿನ ಅವರು ಅಧಿಕಾರಕ್ಕೆ ಬಂದರೆ, ಅವರು ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಆದ್ದರಿಂದ, ಅಂತಿಮವಾಗಿ ಸಂಪೂರ್ಣ ನ್ಯಾಯ ಸಿಗುತ್ತದೆ. ಆಡಳಿತದವರು ಇದನ್ನು ವಿರೋಧಪಕ್ಷದ ವಿರುದ್ಧ ಮಾಡದಿದ್ದರೆ, ವಿಪಕ್ಷಗಳು ಅಧಿಕಾರಕ್ಕೆ ಬಂದಾಗ ಈ ಜನರ ವಿರುದ್ಧವೂ ಮಾಡುವುದಿಲ್ಲ. ಈಗ ಕನಿಷ್ಠ 50 ಪ್ರತಿಶತ ನ್ಯಾಯಪಾಲನೆ ಆಗುತ್ತಿದೆ” ಎಂದು ಅವರು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಹೆಗ್ಡೆ ಹೇಳಿದರು. “ಯಾವುದೇ ಜಾತಿ ಅಥವಾ ಯಾವುದೇ ಸಂಬಂಧವನ್ನು ಆಧರಿಸದೆ, ಅಭ್ಯರ್ಥಿಯ ಅರ್ಹತೆಯನ್ನು ಆಧರಿಸಿ ಮತ ಚಲಾಯಿಸಿ. ನಿಮ್ಮ ಕ್ಷೇತ್ರಕ್ಕೆ ಸೇವೆ ಸಲ್ಲಿಸುವ ಸೂಕ್ತ ಅಭ್ಯರ್ಥಿ ನಿಮಗೆ ಸಿಗದಿದ್ದರೆ, ನೋಟಾ ಇದೆ. ಸೂಕ್ತ ರಾಜಕಾರಣಿ ಇಲ್ಲ ಎಂಬ ಸಂದೇಶವನ್ನು ರಾಜಕೀಯ ಪಕ್ಷಗಳಿಗೆ ನೋಟಾ ರವಾನಿಸುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: Arvind Kejriwal : ಡೆಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಮಾರ್ಚ್ 28ವರೆಗೆ ಜೈಲೇ ಗತಿ