ದೃಷ್ಟಿಹೀನತೆಯೆಡೆಗೆ ಕಣ್ಣುಗಳನ್ನು ತಳ್ಳುವ ಟ್ರಕೋಮಾ ರೋಗ ಭಾರತದಿಂದ ಮುಕ್ತವಾಗಿದೆ (Trachoma Free India) ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯೂಎಚ್‌ಒ) ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ. ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುವ ಈ ಅಂಧತ್ವ, ಸೋಂಕಿತ ವ್ಯಕ್ತಿಯ ಕಣ್ಣು, ರೆಪ್ಪೆ, ಮೂಗು ಮತ್ತು ಗಂಟಲ ದ್ರವಗಳಿಂದ ಇನ್ನೊಬ್ಬರಿಗೆ ಹರಡುತ್ತದೆ.
ಒಂದು ಭೌಗೋಳಿಕ ಪ್ರದೇಶದಲ್ಲಿ ರೋಗವೊಂದು ಅಂತ್ಯಗೊಂಡಿದೆ ಎಂದು ಘೋಷಿಸಲು, ಆ ಪ್ರದೇಶದಲ್ಲಿ ರೋಗದ ಪ್ರಸರಣ ಶೇ.5% ಕ್ಕಿಂತ ಕಡಿಮೆ ಇರಬೇಕು. ಇದೀಗ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ನಡೆಸಿರುವ ಅಧ್ಯಯನದ ಪ್ರಕಾರ, ಭಾರತದಲ್ಲಿ ಈ ರೋಗದ ಪ್ರಸರಣ ಶೇ. 3.5ರಷ್ಟಿದೆ. ಈ ಕುರಿತ ಅಧ್ಯಯನ ವರದಿ ಈಗ ಅಂತಿಮ ಹಂತದಲ್ಲಿದ್ದು, ಇನ್ನೆರಡು ತಿಂಗಳಲ್ಲಿ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಏಮ್ಸ್ ಸಲ್ಲಿಸಲಿದೆ. ಆನಂತರವೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಈ ಕುರಿತು ಪ್ರಕಟಣೆ ಹೊರಬೀಳುವುದಕ್ಕೆ ಸಾಧ್ಯ.
ವಾಸಿಸುವ ಪರಿಸರದಲ್ಲಿನ ಸ್ವಚ್ಛತೆಯ ಕೊರತೆ, ವೈಯಕ್ತಿಯ ಶುದ್ಧತೆಯ ಅಭಾವ, ನೀರು ಮತ್ತು ಒಳಚರಂಡಿಯ ಅಸಮರ್ಪಕ ವ್ಯವಸ್ಥೆ ಮುಂತಾದ ಕಾರಣಗಳಿಂದ ಈ ಸೋಂಕಿನ ಪ್ರಸರಣ ಹೆಚ್ಚುತ್ತದೆ. ಕಣ್ಣು ರೆಪ್ಪೆಯ ಕೆಳಗಿರುವ ಭಾಗಕ್ಕೆ, ಕ್ರಮೇಣ ಕಾರ್ನಿಯಾಗೆ ಈ ಬ್ಯಾಕ್ಟೀರಿಯಾಗಳಿಂದ ಹಾನಿಯಾಗುತ್ತದೆ. “ಪಂಜಾಬ್, ರಾಜಸ್ಥಾನ, ಹರಿಯಾಣ, ಗುಜರಾತ್, ದೆಹೆಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ನಿಕೋಬಾರ್‌ಗಳಲ್ಲಿ ಮೇ ಹೊತ್ತಿಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ” ಎಂದು ಡಾ. ಆರ್‌ಪಿ ದೃಷ್ಟಿವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜೆ. ಎಸ್. ತ್ರಿತಿಯಾಲ್ ತಿಳಿಸಿದ್ದಾರೆ.
1970ರ ವೇಳೆಗೆ ಟ್ರಕೋಮಾ ಪ್ರಕರಣಗಳು ಭಾರತದಲ್ಲಿ ಬಹಳಷ್ಟು ಹೆಚ್ಚಾಗಿದ್ದವು. ಆನಂತರದ ವರ್ಷಗಳಲ್ಲಿ ಭಾರತದಿಂದ ಟ್ರಕೋಮಾ ನಿರ್ನಾಮವಾಗಿದೆ ಎಂದು ಭಾರತ ಸರ್ಕಾರ ಹೇಳಿದಾಗ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಸಮ್ಮತಿಸಿರಲಿಲ್ಲ. ಆದರೆ ಏಷ್ಯಾ-ಫೆಸಿಫಿಕ್ ಪ್ರಾಂತ್ಯದ ಹಲವಾರು ದೇಶಗಳು ತಮ್ಮಲ್ಲಿ ಈ ರೋಗ ಅಂತ್ಯಗೊಂಡಿದೆ ಎಂದು ಈಗಾಗಲೇ ಘೋಷಿಸಿಕೊಂಡಿವೆ. ವಿಶ್ವದೆಲ್ಲೆಡೆ ಅಂಧತ್ವಕ್ಕೆ ಕಾರಣವಾಗುವ ಪ್ರಮುಖ ರೋಗಗಳ ಪೈಕಿ ಟ್ರಕೋಮಾ ಸಹ ಒಂದು. 2017ರಲ್ಲಿ, ಮಕ್ಕಳಲ್ಲಿ ಟ್ರಕೋಮಾ ಅಂತ್ಯಗೊಂಡಿದೆ ಎಂದು ಭಾರತ ಘೋಷಿಸಿಕೊಂಡಿದೆ.
ಇದನ್ನೂ ಓದಿ: Medicine prices : ಬಿಪಿ, ಡಯಾಬಿಟಿಸ್ ಸೇರಿದಂತೆ ನಾನಾ ಕಾಯಿಲೆಗಳ ಚಿಕಿತ್ಸೆಗೆ ಬಳಸುವ 74 ಔಷಧ ದರ ಇಳಿಕೆ
“ಇಡೀ ದೇಶದೆಲ್ಲೆಡೆ ಈ ಸಮೀಕ್ಷೆ ನಡೆಸುವುದು ಸಾಧ್ಯವಿಲ್ಲ. ಬದಲಿಗೆ ರೋಗ ವ್ಯಾಪಕವಾಗಿರುವ ರಾಜ್ಯಗಳಲ್ಲಿ ಪ್ರಸರಣವೆಷ್ಟಿದೆ ಎಂಬುದನ್ನು ಅಧ್ಯಯನ ಮಾಡುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈಗಾಗಲೇ 163 ಜಿಲ್ಲೆಗಳ 5,26,316 ವ್ಯಕ್ತಿಗಳನ್ನು ಈ ಸಮೀಕ್ಷೆ ಒಳಗೊಂಡಿದೆ. ಇದಕ್ಕಾಗಿ ತರಬೇತಿ ಪಡೆದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಈ ಅಧ್ಯಯನದಲ್ಲಿ ಟ್ರಕೋಮಾ ರೋಗ ಪ್ರಸರಣ ಶೇ. 3.4ರಷ್ಟಿರುವುದು ಕಂಡುಬಂದಿದೆ. ಈ ವರ್ಷಾಂತ್ಯದೊಳಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಈ ಕುರಿತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ” ಎಂದು ಡಾ. ತ್ರಿತಿಯಾಲ್ ಹೇಳಿದ್ದಾರೆ.