Site icon Vistara News

G20 Summit 2023: ಸಂಚಾರ ನಿರ್ಬಂಧ, ಯುದ್ಧವಿಮಾನ ನಿಯೋಜನೆ; ಜಿ 20 ಸಭೆಗೆ ದೆಹಲಿ ಸನ್ನದ್ಧ

G20 Summit

Traffic Curbs, Fighter Jets; Delhi All Set For G20 Summit 2023

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್‌ 9 ಹಾಗೂ 10ರಂದು ನಡೆಯುವ ಜಿ 20 ಶೃಂಗಸಭೆಗೆ (G20 Summit 2023) ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಜಿ 20 ರಾಷ್ಟ್ರಗಳ ಗಣ್ಯರು ದೆಹಲಿಯತ್ತ ದೌಡಾಯಿಸುತ್ತಿದ್ದು ಅವರಿಗೆ ವಸತಿ ಸೌಕರ್ಯ, ಭರಪೂರ ಭೋಜನ, ಭದ್ರತೆ ಸೇರಿ ಸಕಲ ವ್ಯವಸ್ಥೆ ಮಾಡಲಾಗಿದೆ. ಅದರಲ್ಲೂ, ಶುಕ್ರವಾರ ಬೆಳಗ್ಗೆಯಿಂದಲೇ ಕಠಿಣ ಸಂಚಾರ ನಿಯಮಗಳು, ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಭದ್ರತೆಗಾಗಿ ಯುದ್ಧವಿಮಾನಗಳ ನಿಯೋಜನೆ ಸೇರಿ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ.

ಶುಕ್ರವಾರ ಬೆಳಗ್ಗೆಯಿಂದಲೇ ದೆಹಲಿಯ ಹಲವೆಡೆ ಕಠಿಣ ಸಂಚಾರ ನಿಯಮಗಳನ್ನು ಜಾರಿಗೆ ತರಲಾಗಿದೆ. ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಟಾಟ ನಿಷೇಧಿಸಲಾಗಿದೆ. ಭಾನುವಾರ (ಸೆಪ್ಟೆಂಬರ್‌ 10) ರಾತ್ರಿ 11.59ರವರೆಗೆ ಈ ನಿಯಮಗಳು ಜಾರಿಯಲ್ಲಿರಲಿವೆ. ಆಂಬುಲೆನ್ಸ್‌ಗಳು, ಔಷಧ ಸಾಗಣೆ ವಾಹನಗಳು ಹಾಗೂ ಕೆಲ ಕಾರ್ಯನಿಮಿತ್ತ ವಸ್ತುಗಳ ಸಾಗಣೆ ಮಾಡುವ ವಾಹನಗಳಿಗೆ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ.

ದೆಹಲಿಗೆ ಆಗಮಿಸಿದ ಅರ್ಜೆಂಟೀನಾ ಅಧ್ಯಕ್ಷ

ಹೀಗಿದೆ ಭದ್ರತಾ ವ್ಯವಸ್ಥೆ

ದೆಹಲಿಯಾದ್ಯಂತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಸುಮಾರು 1.3 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಗಲ್ಲಿ ಗಲ್ಲಿಗಳಲ್ಲಿ ನಿಗಾ ಇರಿಸಲಾಗಿದೆ. ಹಾಗೆಯೇ, ಗಸ್ತು ತಿರುಗುವುದು ಸೇರಿ ಹಲವು ಕಾರಣಗಳಿಗಾಗಿ ಯುದ್ಧವಿಮಾನಗಳು, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕ್ಯಾಮೆರಾಗಳು, ಜ್ಯಾಮಿಂಗ್‌ ಡಿವೈಸ್‌ಗಳು, ಶ್ವಾನಗಳನ್ನು ನಿಯೋಜಿಸಲಾಗಿದೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಶಾಲೆ-ಕಾಲೇಜುಗಳು, ಬ್ಯಾಂಕ್‌ಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ. ನಗರದಾದ್ಯಂತ ಸುಮಾರು 5 ಸಾವಿರ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ.

ಸ್ಪೇನ್‌ ಅಧ್ಯಕ್ಷ ಪೆಡ್ರೋಗೆ ಕೊರೊನಾ, ಸಭೆಗೆ ಗೈರು

ಸ್ಪೇನ್‌ ಅಧ್ಯಕ್ಷ ಪೆಡ್ರೋ ಸ್ಯಾಂಚೆಜ್‌ ಅವರಿಗೆ ಕೊರೊನಾ ದೃಢಪಟ್ಟಿರುವ ಕಾರಣ ಅವರು ಜಿ 20 ಶೃಂಗಸಭೆಗೆ ಗೈರಾಗಲಿದ್ದಾರೆ. “ನನಗೆ ಕೊರೊನಾ ದೃಢಪಟ್ಟಿದೆ. ನನ್ನ ಆರೋಗ್ಯ ಸ್ಥಿರವಾಗಿದ್ದರೂ ಜಿ 20 ಸಭೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಆದರೆ, ಸ್ಪೇನ್‌ ನಿಯೋಗವು ಸಭೆಯಲ್ಲಿ ಪಾಲ್ಗೊಳ್ಳಲಿದೆ” ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೆಡ್ರೋ ಸ್ಯಾಂಚೆಜ್‌ ತಿಳಿಸಿದ್ದಾರೆ.

Exit mobile version