ಕೋಲ್ಕತ್ತಾ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್‌ಪ್ರೆಸ್ (Kanchanjunga Express) ರೈಲಿಗೆ ಗೂಡ್ಸ್ ರೈಲು ಡಿಕ್ಕಿಯಾಗಿ (Train Accident) ಸುಮಾರು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೀಗ ರೈಲು ಅಪಘಾತಕ್ಕೆ ಕಾರಣವೇನು ಎನ್ನುವ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಸಿಗ್ನಲ್‌ನಲ್ಲಿ ಕಂಡು ಬಂದ ದೋಷವೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ದೋಷದಿಂದ ಕೂಡಿದ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಗೂಡ್ಸ್ ರೈಲು ವೇಗದ ಮಿತಿಯನ್ನು ಮೀರಿ ಸಂಚರಿಸಿ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಮಂಡಳಿಯ ಆರಂಭಿಕ ವರದಿ ತಿಳಿಸಿದೆ.
The railway accident in West Bengal is saddening. Condolences to those who lost their loved ones. I pray that the injured recover at the earliest. Spoke to officials and took stock of the situation. Rescue operations are underway to assist the affected. The Railways Minister Shri…
— Narendra Modi (@narendramodi) June 17, 2024
ನಿಯಮ ಏನು ಹೇಳುತ್ತದೆ?
ಟಿಎ 912 (TA 912) (ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಸಿಗ್ನಲ್ ವೈಫಲ್ಯ ಸಂಭವಿಸಿದಾಗ, ಕೆಂಪು ಸಿಗ್ನಲ್‌ಗಳನ್ನು ದಾಟಲು ಸ್ಟೇಷನ್ ಮಾಸ್ಟರ್ ಚಾಲಕನಿಗೆ ಲಿಖಿತ ಪಾಸ್ ಅನ್ನು ಟಿಎ 912 ಎಂದು ಕರೆಯಲಾಗುತ್ತದೆ) ನಿಯಮದ ಪ್ರಕಾರ ಒಂದುವೇಳೆ ದೋಷಪೂರಿತ ಸಿಗ್ನಲ್‌ಗಳನ್ನು ದಾಟಲು ಅನುಮತಿ ಪಡೆದಿದ್ದರೆ, ಚಾಲಕ ಪ್ರತಿ ಸಿಗ್ನಲ್‌ನಲ್ಲಿ ಕೆಲವು ಹೊತ್ತು ನಿಂತು ಗಂಟೆಗೆ 10 ಕಿ.ಮೀ. ವೇಗದಲ್ಲಿ ಮಾತ್ರ ರೈಲು ಓಡಿಸಬೇಕು. ಮಾತ್ರವಲ್ಲ ಇನ್ನೊಂದು ರೈಲಿನಿಂದ 150 ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ಆದಾಗ್ಯೂ ಈ ಘಟನೆಯಲ್ಲಿ ಗೂಡ್ಸ್ ರೈಲು ಚಾಲಕ ಈ ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಕಾಂಚನಜುಂಗಾ ಎಕ್ಸ್‌ಪ್ರೆಸ್ ಟಿಎ 912ರೊಂದಿಗೆ 9 ಸ್ವಯಂಚಾಲಿತ ಸಿಗ್ನಲ್‌ಗಳನ್ನು ದಾಟಿ ಮುಂದೆ ಸಾಗಲು ಅನುಮತಿಗಾಗಿ ಕಾಯುತ್ತಿತ್ತು ಎನ್ನಲಾಗಿದೆ.
ದೋಷಯುಕ್ತ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆಯಿಂದಾಗಿ ಗೂಡ್ಸ್ ರೈಲು ಚಾಲಕನಿಗೆ ರಂಗಪಾಣಿ ಮತ್ತು ಚಟ್ಟರ್ ಹ್ಯಾಟ್ ರೈಲ್ವೆ ನಿಲ್ದಾಣಗಳ ನಡುವಿನ ಎಲ್ಲ ಸಿಗ್ನಲ್‌ಗಳನ್ನು ದಾಟಲು ಅನುಮತಿ ನೀಡಲಾಗಿತ್ತು. ಆದರೆ ರೈಲು ಅಂತಹ ಸಂದರ್ಭಗಳಿಗೆ ನಿಗದಿಪಡಿಸಿದ ಮಿತಿಯನ್ನು ಮೀರಿ ಸಂಚರಿಸಿದೆ. ʼʼರಾಣಿಪಾತ್ರ ರೈಲ್ವೆ ನಿಲ್ದಾಣ ಮತ್ತು ಚಟ್ಟರ್ ಹ್ಯಾಟ್ ಜಂಕ್ಷನ್ ನಡುವಿನ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯು ಸೋಮವಾರ ಬೆಳಿಗ್ಗೆ 5.50ರಿಂದ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಗೂಡ್ಸ್ ರೈಲು ಚಾಲಕನಿಗೆ ರಂಗಪಾಣಿಯ ಸ್ಟೇಷನ್ ಮಾಸ್ಟರ್ ಟಿಎ 912 ಅನ್ನು ನೀಡಿ, ಒಂಬತ್ತು ಸಿಗ್ನಲ್ ಅನ್ನು ಹಾದುಹೋಗಲು ಅನುಮತಿ ನೀಡಿದ್ದರು. ಆದರೆ ಚಾಲಕ ನಿಗದಿ ಪಡಿಸಿದ ಮಿತಿಗಿಂತ ವೇಗವಾಗಿ ಚಲಿಸಿದ್ದರಿಂದ ದುರಂತ ಸಂಭವಿಸಿದೆʼʼ ಎಂದು ಮೂಲಗಳು ತಿಳಿಸಿವೆ.
ಬೆಳಿಗ್ಗೆ 8:42ಕ್ಕೆ ರಂಗಪಾಣಿಯಿಂದ ಹೊರಟ ಗೂಡ್ಸ್ ರೈಲು ಬೆಳಿಗ್ಗೆ 8:55ಕ್ಕೆ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಗಾರ್ಡ್ ಕೋಚ್, ಎರಡು ಪಾರ್ಸೆಲ್ ಬೋಗಿಗಳು ಮತ್ತು ಪ್ಯಾಸೆಂಜರ್ ರೈಲಿನ ಸಾಮಾನ್ಯ ಆಸನದ ಬೋಗಿ ಹಳಿ ತಪ್ಪಿದೆ. ಮೃತರಲ್ಲಿ ಗೂಡ್ಸ್ ರೈಲಿನ ಚಾಲಕ ಕೂಡ ಸೇರಿದ್ದಾರೆ. ಇತ್ತ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಚಾಲಕ ಸಿಗ್ನಲಿಂಗ್ ದೋಷದ ಸಮಯದಲ್ಲಿ ಅಗತ್ಯವಿರುವ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿದ್ದಾರೆ. ಎಲ್ಲ ಕೆಂಪು ಸಿಗ್ನಲ್‌ಗಳಲ್ಲಿ ಒಂದು ನಿಮಿಷ ನಿಲ್ಲಿಸಿ 10 ಕಿ.ಮೀ. ವೇಗದಲ್ಲಿ ಸಂಚರಿಸಿದ್ದರು ಎಂದು ವರದಿ ತಿಳಿಸಿದೆ.
ಸದ್ಯ ರೈಲ್ವೆ ಸುರಕ್ಷತಾ ಆಯುಕ್ತರು (Commissioner of Railway Safety) ಅಪಘಾತದ ಕಾರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ., ಸಣ್ಣಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂ. ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Andhra train accident: 13 ಜನರ ಬಲಿ ಪಡೆದ ಆಂಧ್ರ ರೈಲು ಅಪಘಾತದ ಮೂಲ ಕಾರಣ ಬಹಿರಂಗ