Site icon Vistara News

Train Accident: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್​ ರೈಲು ಡಿಕ್ಕಿ; ಕನಿಷ್ಠ 15 ಮಂದಿ ಸಾವು

Train Accident

Train Accident

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ (Kanchanjunga Express) ರೈಲಿಗೆ ಗೂಡ್ಸ್​ ರೈಲು ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ (Train Accident).

ʼʼಅಪಘಾತದಲ್ಲಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 20-25 ಮಂದಿಗೆ ಗಂಭೀರ ಗಾಯವಾಗಿವೆ. ಪರಿಸ್ಥಿತಿ ಗಂಭೀರವಾಗಿದೆ. ಗೂಡ್ಸ್ ರೈಲು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ” ಎಂದು ಡಾರ್ಜಿಲಿಂಗ್ ಎಸ್‌ಪಿ ಅಭಿಷೇಕ್ ರಾಯ್ ಮಾಹಿತಿ ನೀಡಿದ್ದಾರೆ. ಗಾಯಗೊಂಡಿರುವವರನ್ನು ನ್ಯೂ ಜಲ್‌ಪೈಗುರಿ ಜಂಕ್ಷನ್‌ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗರ್ತಲಾದಿಂದ ಸೀಲ್ದಾಹ್‌ಗೆ ಪ್ರಯಾಣಿಸುತ್ತಿದ್ದ 13174 ಸಂಖ್ಯೆಯ ಕಾಂಚನಜುಂಗಾ ಎಕ್ಸ್‌ಪ್ರೆಸ್ ರಂಗಪಾಣಿ ಮತ್ತು ಚಥರ್‌ಹತ್ ನಿಲ್ದಾಣದ ಮಧ್ಯೆ ಅಪಘಾತಕ್ಕೀಡಾಗಿ ಹಳಿ ತಪ್ಪಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ʼʼಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾ ಪ್ರದೇಶದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದ ಬಗ್ಗೆ ತಿಳಿದು ಆಘಾತವಾಯಿತು. ಕಾಂಚನಜುಂಗಾ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ವೈದ್ಯಕೀಯ ನೆರವಿಗಾಗಿ ಡಿಎಂ, ಎಸ್ಪಿ, ವೈದ್ಯರು, ಆಂಬ್ಯುಲೆನ್ಸ್‌ಗಳು ಮತ್ತು ವಿಪತ್ತು ತಂಡಗಳು ಸ್ಥಳಕ್ಕೆ ಧಾವಿಸಿವೆʼʼ ಎಂದು ತಿಳಿಸಿದ್ದಾರೆ.

ಡಿಕ್ಕಿ ಹಿಡೆದ ರಭಸಕ್ಕೆ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ. ಕಾಂಚನಜುಂಗಾ ಎಕ್ಸ್‌ಪ್ರೆಸ್‌ ಬಂಗಾಳವನ್ನು ಈಶಾನ್ಯ ನಗರಗಳಾದ ಸಿಲ್ಚಾರ್ ಮತ್ತು ಅಗರ್ತಲಾದೊಂದಿಗೆ ಸಂಪರ್ಕಿಸುತ್ತದೆ. ಈ ಮಾರ್ಗವು ಚಿಕನ್ಸ್ ನೆಕ್ ಕಾರಿಡಾರ್‌ನಲ್ಲಿದೆ. ಈ ಮಾರ್ಗದಲ್ಲಿನ ಅಪಘಾತವು ಹಲವು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಹಾಯವಾಣಿ

ರೈಲ್ವೆ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. 033-23508794 ಮತ್ತು 033-23833326 (ಸೀಲ್ಡಾ) ಹಾಗೂ 03612731621, 03612731622 ಮತ್ತು 03612731623 (ಗುವಾಹಟಿ) ಸಂಖ್ಯೆಯನ್ನು ಸಂಪರ್ಕಿಸಬಹುದು.

ರಕ್ಷಣಾ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ಪ್ರಾರಂಭವಾಗಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್ ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. “ಎನ್ಎಫ್ಆರ್ ವಲಯದಲ್ಲಿ ಅಪಘಾತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ರೈಲ್ವೆ, ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಕಾರ್ಯನಿರ್ವಹಿಸುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ” ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ 238ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು, ಬೆಂಗಳೂರು-ಹೌರಾ ರೈಲು ಹಾಗೂ ಗೂಡ್ಸ್‌ ರೈಲು ಡಿಕ್ಕಿಯಾಗಿದ್ದು ಈ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದ ಎರಡು ರೈಲುಗಳ ಡಿಕ್ಕಿಯಲ್ಲಿ 13 ಮಂದಿ ಅಸುನೀಗಿದ್ದರು. ಆ ಆಘಾತಗಳು ಮರೆಯುವ ಮುನ್ನ ಮತ್ತೊಂದು ದೊಡ್ಡ ದುರಂತ ನಡೆದಿದೆ.

ಇದನ್ನೂ ಓದಿ: Andhra train accident: 13 ಜನರ ಬಲಿ ಪಡೆದ ಆಂಧ್ರ ರೈಲು ಅಪಘಾತದ‌ ಮೂಲ ಕಾರಣ ಬಹಿರಂಗ

Exit mobile version