ನವದೆಹಲಿ: ತನ್ನ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್‌ನ್ಯೂಸ್ ನೀಡಿದೆ. ಐಆರ್‌ಟಿಸಿ (Indian Railway Catering and Tourism Corporation) ವೆಬ್‌ಸೈಟ್‌ನಿಂದ ಕಾಯ್ದಿರಿಸಿದ ಆರ್‌ಎಸಿ (Reservation Against Cancellation) ಟಿಕೆಟ್‌ಗಳನ್ನು ರದ್ದುಗೊಳಿಸಲು ಕನಿಷ್ಠ ಶುಲ್ಕವನ್ನು ವಿಧಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ (Train Ticket Cancellation). ಇನ್ನು ಮುಂದೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಪ್ರತಿ ಪ್ರಯಾಣಿಕರಿಂದ ಕೇವಲ 60 ರೂ. ಕಡಿತವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಗಿರಿದಿಹ್‌ನ ಸಾಮಾಜಿಕ ಮತ್ತು ಆರ್‌ಟಿಐ ಕಾರ್ಯಕರ್ತ ಸುನಿಲ್ ಕುಮಾರ್ ಖಂಡೇಲ್ವಾಲ್ ಅವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ರೈಲ್ವೆ ಈ ನಿರ್ಧಾರ ಪ್ರಕಟಿಸಿದೆ. ಟಿಕೆಟ್ ರದ್ದು ಪಡಿಸುವಾಗ ವಿಧಿಸಲಾಗುವ ಅನಿಯಂತ್ರಿತ ಶುಲ್ಕದ ಬಗ್ಗೆ ಖಂಡೇಲ್ವಾಲ್ ಏಪ್ರಿಲ್ 12ರಂದು ರೈಲ್ವೆ ಆಡಳಿತಕ್ಕೆ ಪತ್ರ ಬರೆದಿದ್ದರು. ಐಆರ್‌ಟಿಸಿ ವೆಬ್‌ಸೈಟ್ ಮುಖಾಂತರ ಬುಕ್ ಮಾಡಲಾದ ವೈಟಿಂಗ್ ಟಿಕೆಟ್ ಖಾತರಿಯಾಗದಿದ್ದರೆ ರೈಲ್ವೇ ಇಲಾಖೆಯೇ ಸ್ವತಃ ಅದನ್ನು ರದ್ದು ಪಡಿಸುತ್ತದೆ. ಈ ವೇಳೆ ಸೇವಾ ಶುಲ್ಕದ ಹೆಸರಿನಲ್ಲಿ ಪಾವತಿಯ ಬಹು ದೊಡ್ಡ ಮೊತ್ತವನ್ನು ಕಡಿತ ಮಾಡಲಾಗುತ್ತದೆ ಎಂದು ಸುನಿಲ್ ಕುಮಾರ್ ತಮ್ಮ ಪತ್ರದಲ್ಲಿ ವಿವರಿಸಿದ್ದರು.
ಇದನ್ನು ಅವರು ಉದಾಹರಣೆ ಸಹಿತ ವಿವರಿಸಿದ್ದರು. ಪ್ರಯಾಣಿಕರೊಬ್ಬರು 190 ರೂ. ಪಾವತಿಸಿ ವೈಟಿಂಗ್ ಟಿಕೆಟ್ ಅನ್ನು ಕಾಯ್ದಿರಿಸಿದ್ದಾರೆ ಎಂದಿಟ್ಟುಕೊಳ್ಳೋಣ. ಈ ಟಿಕೆಟ್ ಖಾತರಿಯಾಗದಿದ್ದರೆ ರೈಲ್ವೇ ಕೇವಲ 95 ರೂ.ಗಳನ್ನು ಮಾತ್ರ ಮರು ಪಾವತಿಸುತ್ತದೆ. ಅಂದರೆ ಸುಮಾರು 100 ರೂ. ಕಡಿತವಾಗುತ್ತದೆ ಎಂದು ಸುನಿಲ್ ಕುಮಾರ್ ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಐಆರ್‌ಟಿಸಿ ಇದೀಗ ಈ ಮಹತ್ವದ ಕ್ರಮ ಕೈಗೊಂಡಿದೆ.
ಐಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಏಪ್ರಿಲ್ 18ರಂದು ಸುನಿಲ್ ಕುಮಾರ್ ಅವರಿಗೆ ಈ ಹೊಸ ಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ರೈಲ್ವೇ ನಿಗದಿಪಡಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ಐಆರ್‌ಟಿಸಿ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ʼʼಭಾರತೀಯ ರೈಲ್ವೆ ಸೂಚನೆಯ ಪ್ರಕಾರ ಇನ್ನು ಮುಂದೆ ವೈಟಿಂಗ್ ಟಿಕೆಟ್ ಕ್ಯಾನ್ಸಲ್ ಮಾಡಿದಾಗ ಕೇವಲ 60 ರೂ. ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆʼʼ ಎಂದು ಅವರು ವಿವರಿಸಿದ್ದಾರೆ. ದೂರನ್ನು ಪರಿಶೀಲಿಸಿ ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ರೈಲ್ವೆ ಆಡಳಿತ ಮಂಡಳಿಗೆ ಸುನಿಲ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Bullet Train: ಬುಲೆಟ್ ರೈಲು ಓಡೋದು ಯಾವಾಗ? ರೈಲ್ವೆ ಸಚಿವ ಹೇಳೋದಿಷ್ಟು
1230 ಕೋಟಿ ರೂ. ಆದಾಯ!
ಕಳೆದ ಮೂರು ವರ್ಷಗಳಲ್ಲಿ ರೈಲ್ವೇಯು ವೈಟಿಂಗ್ ಟಿಕೆಟ್‌ಗಳ ರದ್ದತಿಯಿಂದ ಬರೋಬ್ಬರಿ 1,230 ಕೋಟಿ ರೂ. ಆದಾಯ ಗಳಿಸಿದೆ ಎನ್ನುವ ವಿಚಾರ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.