ಮುಂಬೈ: ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ಪರಿವರ್ತನೆಗೊಂಡ ಮಹಿಳೆಯೂ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ರಕ್ಷಣೆ ಪಡೆಯಬಹುದು. ಹಾಗೆಯೇ, ಅವಳು ಇದೇ ಕಾಯ್ದೆ ಅಡಿಯಲ್ಲಿ ಜೀವನಾಂಶವನ್ನೂ ಪಡೆಯಬಹುದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಹೈಕೋರ್ಟ್ ಆದೇಶದಿಂದಾಗಿ ಇನ್ನು ಮುಂದೆ ಲಿಂಗಪರಿವರ್ತಿತ ಮಹಿಳೆಯರಿಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ರಕ್ಷಣೆ ಸಿಗಲಿದೆ.
ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಪರಿವರ್ತನೆ ಮಾಡಿಕೊಂಡ ಮಹಿಳೆಯು ಕೂಡ ಜೀವನಾಂಶ ಪಡೆಯಬಹುದು ಎಂಬ ಕುರಿತು ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಮಿತ್ ಬೋರ್ಕರ್ ಅವರನ್ನು ಒಳಗೊಂಡ ಏಕಸದಸ್ಯ ಪೀಠವು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯು ಲಿಂಗ ಪರಿವರ್ತಿತ ಮಹಿಳೆಯರಿಗೆ ಅನ್ವಯವಾಗುತ್ತದೆ ಎಂದು ಹೇಳಿತು. ಮಾರ್ಚ್ 16ರಂದೇ ನ್ಯಾಯಾಲಯವು ಆದೇಶ ಹೊರಡಿಸಿದ್ದು, ಮಾರ್ಚ್ 31ರಂದು ಆದೇಶದ ಪ್ರತಿ ಲಭ್ಯವಾಗಿದೆ.
“ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 2 (A)ರಲ್ಲಿ ಮಹಿಳೆ ಎಂಬ ಪದದ ಉಲ್ಲೇಖವಿದೆ. ಅದರ ಪ್ರಕಾರ ಮಹಿಳೆ ಎಂತಾದರೆ, ಆಕೆ ನೊಂದವಳು, ದೌರ್ಜನ್ಯಕ್ಕೀಡಾದವಳು ಎಂಬ ಅರ್ಥವಿದೆ. ಆದರೆ, ಶಸ್ತ್ರಚಿಕಿತ್ಸೆ ಮೂಲಕ ಪುರುಷನು ಮಹಿಳೆಯಾಗಿ ಪರಿವರ್ತನೆಯಾದರೂ ಆಕೆ ಮಹಿಳೆಯೇ ಆಗಿರುವುದರಿಂದ ಆಕೆಗೂ ಕಾಯ್ದೆಯ ರಕ್ಷಣೆ ಸಿಗುತ್ತದೆ” ಎಂದ ನ್ಯಾಯಮೂರ್ತಿ ಆದೇಶಿಸಿದರು.
ಇದನ್ನೂ ಓದಿ: Trans Couple Pregnancy: ಮಗುವಿನ ನಿರೀಕ್ಷೆಯಲ್ಲಿ ಕೇರಳದ ತೃತೀಯ ಲಿಂಗಿ ಜೋಡಿ, ಇದು ದೇಶದಲ್ಲೇ ಮೊದಲು
ಕಾಯ್ದೆಯ ಸೆಕ್ಷನ್ 2 (F) ಉಲ್ಲೇಖದಂತೆ ದಾಂಪತ್ಯವು ಲಿಂಗ ತಟಸ್ಥವಾಗಿರುತ್ತದೆ. ಇಲ್ಲಿ ಲೈಂಗಿಕ ಆದ್ಯತೆಗಳಿಗಿಂತ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಯಾವುದೇ ವ್ಯಕ್ತಿಯು ಇಚ್ಛೆಯ ಮೇರೆಗೆ ಲಿಂಗ ಪರಿವರ್ತನೆ ಮಾಡಿಕೊಳ್ಳುವುದು ಅವರ ಹಕ್ಕು. ಅವರು ಆಯ್ಕೆಯ ಹಕ್ಕನ್ನು ಹೊಂದಿರುತ್ತಾರೆ. ಹಾಗಾಗಿ, ಪುರುಷನು ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಪರಿವರ್ತನೆ ಮಾಡಿಕೊಂಡ ಬಳಿಕ ಆಕೆ ಎಂದರೆ, ಮಹಿಳೆಯಾಗಿ ಪರಿವರ್ತನೆಯಾಗುತ್ತಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿತು.
ಏನಿದು ಪ್ರಕರಣ?
2016ರಲ್ಲಿ ಮಹಾರಾಷ್ಟ್ರದ ಪುರುಷನೊಬ್ಬ ಶಸ್ತ್ರಚಿಕಿತ್ಸೆ ಮೂಲಕ ಲಿಂಗಪರಿವರ್ತನೆ ಮೂಲಕ ಮಹಿಳೆಯಾಗಿ ಬದಲಾಗಿದ್ದರು. ಇದೇ ವರ್ಷ ಮಹಿಳೆಯು ಬೇರೊಬ್ಬನ ಜತೆ ಮದುವೆಯಾಗಿದ್ದರು. ಆದರೆ, ಮದುವೆಯಾದ ಬಳಿಕ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದ ಕಾರಣ ದೂರವಾಗಿದ್ದರು. ಆದರೆ, ಲಿಂಗಪರಿವರ್ತನೆಗೊಂಡ ಮಹಿಳೆಯು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ಜೀವನಾಂಶ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೀವನಾಂಶ ನೀಡುವಂತೆ ನ್ಯಾಯಾಲಯವು ಪತಿಗೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ವ್ಯಕ್ತಿಯು ಹೈಕೋರ್ಟ್ ಮೊರೆಹೋಗಿದ್ದ.