ಚಾರಣವನ್ನು ಮನಸಾರೆ ಪ್ರೀತಿಸುವ ಸಾಹಸಿಗರಿಗೆ (Trekkers) ಇಲ್ಲೊಂದು ಶುಭಸುದ್ದಿ ಕಾದಿದೆ. ಕೈಗೆಟುಕದ ಹಿಮಶಿಖರಗಳನ್ನೆಲ್ಲ ಉತ್ತರಾಖಂಡ ಸರ್ಕಾರ ಇದೀಗ ಎಲ್ಲರ ಕೈಗೆಟಕುವಂತೆ (trekking guide) ಮಾಡಿದೆ. ಇನ್ನು ಚಾರಣಿಗರು, ಯಾವ ಯೋಚನೆಯೂ ಇಲ್ಲದೆ, ಉತ್ತರಾಖಂಡದ ನಂದಾದೇವಿಯಿಂದ ಮೊದಲ್ಗೊಂಡು ದೂನಗಿರಿಯವರೆಗೆ ಸಾಲುಸಾಲು ಎತ್ತರೆತ್ತರ ಹಿಮಪರ್ವತಗಳನ್ನೇರಿ ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಖುಷಿಪಡಬಹುದು.
ಯಾಕೆಂದರೆ, ಸಾಹಸ ಪ್ರವಾಸೋದ್ಯಮವನ್ನು (Adventure tourism) ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತರಾಖಂಡ ಸರ್ಕಾರ ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ತನ್ನ ರಾಜ್ಯದ ಪ್ರಮುಖ ಪರ್ವತಗಳ ಚಾರಣಗಳಿಗೆ ಉಚಿತ ಪ್ರವೇಶಾವಕಾಶವನ್ನು ಒದಗಿಸಿದೆ. ಭಾರತೀಯ ಪ್ರವಾಸಿಗರಿಗೆ, ಚಾರಣಿಗರಿಗೆ ಮಾತ್ರ ಈ ಉಚಿತ ಪ್ರವೇಶ ಲಭ್ಯವಿದ್ದು, ವಿದೇಶೀ ಚಾರಣಿಗರು ಮೊದಲಿನಂತೆ ಶುಲ್ಕ ಪಾವತಿಸಬೇಕಾಗಿದೆ.
ಹಿಮಶಿಖರವೇರಿ ಅಲ್ಲೊಂದು ನಮ್ಮ ದೇಶದ ಧ್ವಜವನ್ನು ಊರಿ ಫೋಟೋಗೆ ಪೋಸು ಕೊಡುವುದು ಯಾವ ಚಾರಣಿಗನಿಗೆ ತಾನೇ ಪ್ರಿಯವಿರಲಿಕ್ಕಿಲ್ಲ ಹೇಳಿ! ಪ್ರತಿ ಚಾರಣಿಗನ ಅಷ್ಟೂ ದಿನಗಳ ಶ್ರಮದ ಸಾರ್ಥಕತೆ ಅಡಗಿರುವುದೇ ಅಲ್ಲಿ. ಕಠಿಣವಾದ ದುರ್ಗಮ ಶಿಖರವನ್ನೇರುತ್ತಾ ಏರುತ್ತಾ ಕೊನೆಗೂ ಸಮ್ಮಿಟ್ ತಲುಪಿ ಅಲ್ಲಿ ನಮ್ಮ ಧ್ವಜವನ್ನೂರುವ ಕ್ಷಣ ಪ್ರತಿಯೊಬ ಚಾರಣಿಗನಿಗೂ ಆನಂದದಾಯಕ ಕ್ಷಣವದು. ಉತ್ತರಾಖಂಡದ ಸರಹದ್ದಿನಲ್ಲಿ ಬರುವ ಇಂತಹ ಸಾಲು ಸಾಲು ಶಿಖರಗಳಲ್ಲಿ ಬಹುತೇಕವು ಅಷ್ಟು ಸುಲಭಕ್ಕೆ ಏರಲಾಗದವುಗಳು. ಜೊತೆಗೆ, ಅನುಮತಿ, ಶುಲ್ಕ ಎಂದೆಲ್ಲ ನಿಯಮಗಳಲ್ಲಿ ಚಾರಣಿಗರು ಈ ಬಗ್ಗೆ ಪ್ರಯತ್ನಿಸುವುದೇ ಕಡಿಮೆ ಎಂಬುದನ್ನು ಮನಗಂಡಿರುವ ಉತ್ತರಾಖಂಡ ಸರ್ಕಾರ ಇದೀಗ ತನ್ನ ನಿಯಮಗಳನ್ನು ಸಡಿಲಿಸಿ ಪ್ರತಿಯೊಬ್ಬ ಆಕಾಂಕ್ಷಿ ಚಾರಣಿಗನಿಗೂ ಸುಲಭವಾಗಿ ತಲುಪಬೇಕೆಂಬ ಚಿಂತನೆ ನಡೆಸಿದೆ. ಭಾರತದುದ್ದಕ್ಕೂ ಇರುವ ಚಾರಣಪ್ರೇಮಿಗಳು ಉತ್ತರಾಖಂಡದೆಡೆಗೆ ಇನ್ನಷ್ಟು ಮುಖ ಮಾಡಲಿ ಎಂದು ಈ ನಿರ್ಧಾರ ಮಾಡಿದೆಯಂತೆ.
ಸಧ್ಯಕ್ಕೆ ಉತ್ತರಾಖಂಡದ ಪ್ರಮುಖ ಹಿಮಶಿಖರಗಳಾದ ಗಡ್‌ವಾಲ್ ಹಿಮಾಲಯ ಶ್ರೇಣಿಯಲ್ಲಿ ಬರುವ ನಂದಾದೇವಿ, ಪಂಚಚುಲಿ 3, ತ್ರಿಶೂಲ್ 3, ಪುಕುಟ ಪರ್ಬತ್, ಭಾಗೀರತಿ 3, ಗಂಗೋತ್ರಿ 3, ಸತೋಪಂಥ್, ಶಿವಲಿಂಗ್, ಶ್ರೀಕಂಠ, ವಾಸುಕಿ ಪರ್ಬತ್, ಹಾತಿ ಪರ್ಬತ್, ದೂನಗಿರಿ, ಚೌಕಂಬ 4 ಇತ್ಯಾದಿ ಶಿಖರಗಳಿಗೆ ಸರ್ಕಾರ ಉಚಿತ ಪ್ರವೇಶ ಘೋಷಿಸಿದೆ.
ಇದನ್ನೂ ಓದಿ: Monsoon Trekking: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ ಮಳೆಗಾಲದ ಚಾರಣಗಳಿವು!
ಇವೆಲ್ಲವೂ, ಅತ್ಯಂತ ಕ್ಲಿಷ್ಟಕರ ಚಾರಣಗಳಾಗಿದ್ದು, ಮೊದಲು ಇವುಗಳಿಗೆ ಅನುಮತಿ ಪಡೆಯುವುದರ ಜೊತೆಗೆ 3000 ರೂಪಾಯಿಗಳಿಂದ ಹಿಡಿದು 6000 ರೂಪಾಯಿಗಳವರೆಗೂ ಶುಲ್ಕ ಪಾವತಿಸಬೇಕಾಗಿತ್ತು. ಇದೀಗ ಅದನ್ನು ತೆರವುಗೊಳಿಸಿದ್ದು, ಚಾರಣ ಮಾಡಬಲ್ಲ ಸಾಹಸಿಗರನ್ನು ಸೆಳೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ. ವಿದೇಶೀ ಚಾರಣಿಗರಿಗೆ 20,000 ರೂಪಾಯಿಗಳಿಂದ 40,000 ರೂಪಾಯಿಗಳವರೆಗೂ ಶುಲ್ಕವಿದ್ದು, ಶಿಖರದ ಎತ್ತರಕ್ಕೆ ಅನುಗುಣವಾಗಿ ದರ ನಿಗದಿಪಡಿಸಲಾಗಿದೆ.
ಈಗಾಗಲೇ ಉತ್ತರಾಖಂಡವೂ ಹಿಮಾಚಲ ಪ್ರದೇಶದಂತೆಯೇ, ಸಾಹಸ ಪ್ರವಾಸೋದ್ಯಮದೆಡೆಗೆ ಪ್ರವಾಸಿಗರನ್ನು ಸೆಳೆಯುತ್ತಿದೆ. ರಾಜ್ಯದಲ್ಲಿ ಕಯಾಕಿಂಗ್, ಚಾರಣ, ಪಾರಾಗ್ಲೈಡಿಂಗ್, ರ್ಯಾಫ್ಟಿಂಗ್ ಮತ್ತಿತರ ಹಲವು ವಿಭಾಗಗಳಲ್ಲಿ ಯುವ ಸಾಹಸೀ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ಈ ಶುಲ್ಕ ತೆರವು ಕೂಡಾ, ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಇದನ್ನೂ ಓದಿ: Trekking Guide: ಪ್ರವಾಸ, ಚಾರಣದಲ್ಲಿ ನೀವು ಹಾದಿ ತಪ್ಪಿದರೆ ಮಾಡಬೇಕಾದ್ದೇನು? ಇಲ್ಲಿವೆ ಟಿಪ್ಸ್!