Site icon Vistara News

ವಿಸ್ತಾರ ಸಂಪಾದಕೀಯ: ಅಮೆರಿಕದಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ಖಲಿಸ್ತಾನಿಗಳಿಗೆ ದೇಶಪ್ರೇಮಿಗಳ ತಿರುಗೇಟು

Tricolor flag flown in America; Patriots strike back at Khalistanis

#image_title

ಅಮೆರಿಕದ ಕಾನ್ಸುಲೇಟ್ ಕಚೇರಿ ಎದುರು ಸಾವಿರಾರು ಭಾರತೀಯರು ತ್ರಿವರ್ಣ ಧ್ವಜ ಹಾರಿಸಿ ಭಾರತದ ಪರ ಘೋಷಣೆ ಮೊಳಗಿಸಿದ್ದಾರೆ. ಹಿಂದೂ, ಮುಸ್ಲಿಂ, ಸಿಖ್ ಸೇರಿದಂತೆ ಎಲ್ಲ ಧರ್ಮೀಯರೂ ಇದರಲ್ಲಿ ಭಾಗವಹಿಸಿದ್ದು ಗಮನಾರ್ಹ. ಪಾಕ್ ಪ್ರೇರಿತ ಸಿಖ್ ಪ್ರತ್ಯೇಕತಾವಾದಿಗಳಿಗೆ ಇದು ತಕ್ಕ ತಿರುಗೇಟಾಗಿದೆ. ಕಳೆದ ಭಾನುವಾರ ಖಲಿಸ್ತಾನಿಗಳ ಗುಂಪು ಇಂಡಿಯನ್ ಕಾನ್ಸುಲೇಟ್ ಕಚೇರಿ ಮೇಲೆ ದಾಳಿ ಮಾಡಿ ತ್ರಿವರ್ಣ ಧ್ವಜವನ್ನು ಕೆಳಗಿಸಿ ಅವಮಾನ ಮಾಡಿತ್ತು. ಇವರನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆಯನ್ನು ಅಲ್ಲಿನ ಸರ್ಕಾರಗಳು ವಿಧಿಸಬೇಕು ಅಥವಾ ಭಾರತಕ್ಕೆ ಹಸ್ತಾಂತರಿಸಬೇಕು. ಇದು ರಾಜನೀತಿಯ ಮಟ್ಟದಲ್ಲಿ ಆಗಬೇಕಾದ ಉಪಕ್ರಮ. ಈ ಬಗ್ಗೆ ಉಭಯ ದೇಶಗಳ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕಿದೆ. ಆದರೆ ನೈಜ ಭಾರತೀಯರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೋ ಆ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂಬುದು ನಮ್ಮ ಹೆಮ್ಮೆಗೆ ಕಾರಣವಾಗಿದೆ.

ಪಂಜಾಬ್‌ನಲ್ಲಿ ಖಲಿಸ್ತಾನಿಗಳು ಈಗಾಗಲೇ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪಾಕ್‌ ಪ್ರೇರಿತ ಡ್ರೋನ್‌ಗಳ ಮೂಲಕ ಪೂರೈಕೆಯಾಗುವ ಶಸ್ತ್ರಾಸ್ತ್ರಗಳು ಹಾಗೂ ಮಾದಕ ದ್ರವ್ಯಗಳ ಮೂಲಕ ಪಂಜಾಬ್‌ನ ಯುವಜನತೆಯನ್ನು ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಇವರು ಎಷ್ಟು ಬೆಳೆದಿದ್ದಾರೆ ಎಂದರೆ, ಇತ್ತೀಚೆಗೆ ಅಲ್ಲಿನ ತರಣ್ ತಾರಣ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್‌ನಿಂದ ದಾಳಿ ನಡೆಸಲಾಗಿತ್ತು. ಪಂಜಾಬ್ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆಯೂ ಇದೇ ರೀತಿಯ ದಾಳಿ ನಡೆಸಲಾಗಿತ್ತು. ಇವರಿಗೆ ಬೆಂಬಲವಾಗಿ ದೇಶದಾಚೆಯ ಕೆಲವು ಪ್ರತ್ಯೇಕತಾವಾದಿ ಸಿಖ್ಖರ ಗುಂಪುಗಳು, ಖಲಿಸ್ತಾನ್ ಪರ ಸಂಘಟನೆಗಳೂ ವರ್ತಿಸುತ್ತಿವೆ. ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕದಲ್ಲಿ ಇವು ಹೆಚ್ಚಾಗಿವೆ. ಇವರ ಟಾರ್ಗೆಟ್‌ ಎಂದರೆ ಅಲ್ಲಿನ ಭಾರತೀಯರು, ಅವರ ಶ್ರದ್ಧಾಕೇಂದ್ರಗಳಾದ ದೇವಾಲಯಗಳು ಹಾಗೂ ಕಾನ್ಸುಲೇಟ್‌ಗಳು. ಇತ್ತೀಚಿನ ದಿನಗಳಲ್ಲಿ ಅನೇಕ ದೇವಾಲಯಗಳನ್ನು ಹಾನಿಗೊಳಪಡಿಸಲಾಗಿದೆ. ಈ ಸಂಘಟನೆಗಳು ವಿನಾಕಾರಣ ಭಾರತೀಯರನ್ನು ಕೆಣಕುತ್ತಿವೆ.

ಇದಕ್ಕೆ ತಕ್ಕ ಉತ್ತರವನ್ನು ಭಾರತೀಯರು ನೀಡಿದ್ದಾರೆ. ಈವರೆಗೆ ಇದನ್ನೆಲ್ಲ ತಾಳ್ಮೆಯಿಂದ ಸಹಿಸಿಕೊಂಡಿದ್ದ ಅನಿವಾಸಿ ಭಾರತೀಯರು ಈಗ ತಿರುಗಿ ಬಿದ್ದಿದ್ದಾರೆ. ಅಮೆರಿಕ ಮಾತ್ರವಲ್ಲ, ವಿಶ್ವದ ಮೂಲೆ ಮೂಲೆಗಳಲ್ಲಿ ಅನಿವಾಸಿ ಭಾರತೀಯರು ಒಗ್ಗಟ್ಟಿನಿಂದ ಇದ್ದಾರೆ ಮತ್ತು ಸದಾ ಭಾರತದ ಪರ ದನಿ ಎತ್ತುತ್ತಿದ್ದಾರೆ. ವಿದೇಶಗಳಲ್ಲಿನ ಭಾರತ ವಿರೋಧಿ ಚಟುವಟಿಕೆ ವಿರುದ್ಧ ಭಾರತ ಸರ್ಕಾರ ಈಗಾಗಲೇ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಪ್ರತೀಕಾರದ ಕ್ರಮವಾಗಿ ಭಾರತವು ದಿಲ್ಲಿಯಲ್ಲಿನ ಬ್ರಿಟನ್ ದೂತಾವಾಸ ಕಚೇರಿಯಲ್ಲಿನ ಹೆಚ್ಚುವರಿ ಭದ್ರತೆಯನ್ನು ಹಿಂತೆಗೆದುಕೊಂಡಿತ್ತು. ಖಲಿಸ್ತಾನಿಗಳಿಗೆ ಅನಿವಾಸಿ ಭಾರತೀಯರು ಇಷ್ಟೊಂದು ಸದರವಾಗಿರುವುದೇಕೆ? ಇವರಿಗೆ ಭದ್ರತೆಯಿಲ್ಲವೆಂದು ಖಲಿಸ್ತಾನಿಗಳು ಭಾವಿಸಿರಬಹುದು. ಆದರೆ ಅನಿವಾಸಿ ಭಾರತೀಯರ ನೆರವಿಗೆ ಭಾರತ ಸದಾ ಸನ್ನದ್ಧವಾಗಿದೆ. ಈ ಸಂದೇಶವನ್ನು ನಾವು ರವಾನಿಸಬೇಕು. ಅನಿವಾಸಿ ಭಾರತೀಯರೂ ತಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ನೀಡಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕೇಂದ್ರೀಯ ತನಿಖಾ ದಳಗಳ ದುರುಪಯೋಗ ಆರೋಪ; ಪಾರದರ್ಶಕತೆ ಅಗತ್ಯ

ಇದರ ಜತೆಗೆ ಭಾರತದಲ್ಲಿ ಕೂಡ ಕೇಂದ್ರ ಸರ್ಕಾರ ಸಿಖ್ ಫಾರ್ ಜಸ್ಟಿಸ್, ವಾರಿಸ್ ಪಂಜಾಜ್ ದೇ ಇತ್ಯಾದಿ ಖಲಿಸ್ತಾನ್‌ ಪರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಆರಂಭಿಸಿದೆ. ಪಂಜಾಬಿನಲ್ಲಿ ಪ್ರತ್ಯೇಕತೆಯ ಬೀಜ ಬಿತ್ತುತ್ತಿರುವ ಅಮೃತ್ ಪಾಲ್ ಸಿಂಗ್‌ನನ್ನು ಬೇಟೆಯಾಡಲು ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆತನ ಹಲವಾರು ಬೆಂಬಲಿಗರನ್ನು ಬಂಧಿಸಿದ್ದಾರೆ. ಸಿಖ್ ಧರ್ಮ ಎಂಬುದು ಶತಮಾನಗಳಿಂದ ಹಿಂದೂಗಳ ಜತೆಗೆ ಎರಕವಾಗಿ ಅನ್ಯೋನ್ಯತೆಯಿಂದ ಇರುವ ಧರ್ಮ. ಅವರು ಬೇರೆ ಎಂದು ಹಿಂದೂಗಳಿಗೆ ಎಂದೂ ಅನಿಸಿಯೇ ಇಲ್ಲ. ಇಂಥವರ ನಡುವೆ ಪ್ರತ್ಯೇಕತೆಯ ವಿಷಬೀಜ ಬಿತ್ತಲು ಯತ್ನಿಸುವ ದೇಶವಿರೋಧಿ ಸಂಚನ್ನು ಈಗಲೇ ಹೊಸಕಿ ಹಾಕಬೇಕಿದೆ. ಇದನ್ನು ಪೋಷಿಸುತ್ತಿರುವ ಕೆನಡಾ ಹಾಗೂ ಬ್ರಿಟನ್‌ನ ಕೆಲವು ರಾಜಕಾರಣಿಗಳ ಬಣ್ಣವನ್ನೂ ಬಯಲು ಮಾಡಬೇಕಿದೆ.

Exit mobile version