Site icon Vistara News

TTD Bhagavad Gita: 1 ಕೋಟಿ ಮಕ್ಕಳಿಗೆ ಭಗವದ್ಗೀತೆ ಪ್ರತಿ ವಿತರಿಸಲಿದೆ ಟಿಟಿಡಿ; ಏನಿದು ಯೋಜನೆ?

Bhagavad Gita

ತಿರುಮಲ: ಅಧ್ಯಾತ್ಮದಿಂದ ವ್ಯಕ್ತಿತ್ವ ವಿಕಸನದವರೆಗೆ ಜೀವನ ರೂಪಿಸುವ ಅಂಶಗಳಿರುವ ಭಗವದ್ಗೀತೆಯು (Bhagavad Gita) ಹಿಂದುಗಳ ಪವಿತ್ರ ಗ್ರಂಥವಾಗಿರುವ ಜತೆಗೆ ಜಗತ್ತಿನಾದ್ಯಂತ ಪುಸ್ತಕವನ್ನು ಓದಿದವರು, ಓದಿ ಬದುಕಿನಲ್ಲಿ ಬದಲಾವಣೆ ತಂದುಕೊಂಡವರು ಹೆಚ್ಚಿದ್ದಾರೆ. ಹೀಗೆ, ಭಗವದ್ಗೀತೆಯ ಸಾರವನ್ನು, ಅದರ ಮೌಲ್ಯಯುತ ಅಂಶಗಳನ್ನು ಮಕ್ಕಳಿಗೂ ತಿಳಿಯಬೇಕು, ಅವರು ಕೂಡ ಪುಸ್ತಕವನ್ನು ಓದಬೇಕು ಎಂಬ ಉದ್ದೇಶದಿಂದ ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಂ ಮಂಡಳಿಯು ಒಂದು ಕೋಟಿ ಮಕ್ಕಳಿಗೆ ಉಚಿತವಾಗಿ ಭಗವದ್ಗೀತೆ ವಿತರಿಸುವ (TTD Bhagavad Gita) ಯೋಜನೆ ಜಾರಿಗೆ ತರುತ್ತಿದೆ.

ಜಗತ್‌ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯಾಗಿರುವ ಟಿಟಿಡಿಯು ಯೋಜನೆ ರೂಪಿಸಿದೆ. “ಶಾಲೆಗಳಲ್ಲಿ ಓದುತ್ತಿರುವ ಒಂದು ಕೋಟಿ ಮಕ್ಕಳಿಗೆ ಉಚಿತವಾಗಿ ಭಗವದ್ಗೀತೆ ಪ್ರತಿಗಳನ್ನು ವಿತರಿಸಲಾಗುತ್ತದೆ. ಭಗವದ್ಗೀತೆಯ ಶ್ಲೋಕಗಳನ್ನು ಸರಳೀಕರಿಸಿ, ಮಕ್ಕಳು ಕೂಡ ಭಗವದ್ಗೀತೆಯ ಸಾರವನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಪ್ರತಿಗಳನ್ನು ವಿತರಣೆ ಮಾಡಲಾಗುತ್ತದೆ” ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಎ.ವಿ. ಧರ್ಮಾರೆಡ್ಡಿ ಮಾಹಿತಿ ನೀಡಿದ್ದಾರೆ.

ತಿರುಪತಿ ದೇವಸ್ಥಾನ

ಮಾಸಿಕವಾಗಿ ನಡೆಯುವ ‘ಡಯಲ್‌ ಯುವರ್‌ ಇ.ಒ’ ಎಂಬ ಕಾರ್ಯಕ್ರಮದಲ್ಲಿ ಸಂವಾದ ನಡೆಸುವಾಗ ಧರ್ಮಾರೆಡ್ಡಿ ಅವರು ಈ ಘೋಷಣೆ ಮಾಡಿದ್ದಾರೆ. “ಮಂಡಳಿಯಿಂದಲೇ ಗೋವಿಂದ ಕೋಟಿ ಪುಸ್ತಕಗಳನ್ನೂ ಮುದ್ರಣ ಮಾಡಿ, ಹಂಚಲಾಗುತ್ತದೆ. ಅಲ್ಲದೆ, ಟಿಟಿಡಿಯಿಂದ ಕಾರ್ತಿಕ ಮಾಸದಲ್ಲಿ ಅಧ್ಯಾತ್ಮ ಪುಸ್ತಕಗಳನ್ನು ಮುದ್ರಿಸಿ, ಜನರಿಗೆ ಹಂಚಲಾಗುತ್ತದೆ” ಎಂದು ಇಒ ಎ.ವಿ. ಧರ್ಮಾರೆಡ್ಡಿ ತಿಳಿಸಿದರು.

ಇದನ್ನೂ ಓದಿ: MS Dhoni : ಎಂ.ಎಸ್.ಧೋನಿ ಭಗವದ್ಗೀತೆಯೊಂದಿಗೆ ಕಾಣಿಸಿಕೊಂಡ ಫೋಟೋ ವೈರಲ್

ಇಸ್ಲಾಮಿಕ್‌ ಸಂಸ್ಥೆಯಲ್ಲಿ ಭಗವದ್ಗೀತೆ ಪಠ್ಯ

ಕೇರಳದ ಇಸ್ಲಾಮಿಕ್ ಸಂಸ್ಥೆಯೊಂದು 11 ಮತ್ತು 12ನೇ ತರಗತಿಯ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಸಂಸ್ಕೃತ ವ್ಯಾಕರಣ, ಭಗವದ್ಗೀತೆ (Bhagavad Gita) ಹಾಗೂ ಹಿಂದೂ ಧರ್ಮದ ಇತರ ಗ್ರಂಥಗಳ ಬಗ್ಗೆ ಬೋಧನೆ ಮಾಡುತ್ತಿದೆ. ತ್ರಿಶ್ಶೂರ್‌ ನಗರದ ಮಲಿಕ್ ದೀನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (MIC) ನಡೆಸುವ ಅಕಾಡೆಮಿ ಆಫ್ ಷರಿಯಾ ಆ್ಯಂಡ್ ಅಡ್ವಾನ್ಸ್ಡ್ ಸ್ಟಡೀಸ್(ASAS) ಸಂಸ್ಥೆಯು ಹಿಂದೂ ಧಾರ್ಮಿಕ ದೇವ ಭಾಷಾ ಸಿಲಬಸ್ ಸಿದ್ಧಪಡಿಸಿದೆ. ಈ ಹೊಸ ಸಿಲಬಸ್ ಜೂನ್‌ ತಿಂಗಳಿಂದ ಜಾರಿಗೆ ಬಂದಿದೆ.

Exit mobile version