ಡೆಹ್ರಾಡೂನ್: ಉತ್ತರಕಾಶಿ ಸುರಂಗ ಕುಸಿತದ (Tunnel Collapse) ತುರ್ತು ಕಾರ್ಯಾಚರಣೆ (rescue operation) ಪ್ರಕ್ರಿಯೆಯಲ್ಲಿನ ಸವಾಲುಗಳನ್ನು ಗಮನಿಸಿದರೆ ಸಿಕ್ಕಿಬಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯವು 15 ದಿನಗಳವರೆಗೆ ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಾರ್ಯಾಚರಣೆಯಲ್ಲಿ ಆಗಿರುವ ಒಂದು ಪ್ರಮುಖ ಪ್ರಗತಿ ಎಂದರೆ, ಹೆಚ್ಚಿನ ಪ್ರಮಾಣದ ಘನ ಆಹಾರ ಮತ್ತು ನೀರನ್ನು ಕಳುಹಿಸಲು 57 ಮೀಟರ್ ಉದ್ದದ, 6 ಇಂಚಿನ ಅಗಲದ ಪೈಪ್ ಅನ್ನು ಕಾರ್ಮಿಕರು ಇರುವಲ್ಲಿ ಸೇರಿಸುವಲ್ಲಿ ಯಶಸ್ವಿಯಾಗಿರುವುದು. ಈಗ ಕಾರ್ಮಿಕರಿಗೆ ಬಿಸಿ ಆಹಾರವನ್ನು ನೀಡಲಾಗುತ್ತಿದೆ.
ಸ್ಥಳಕ್ಕೆ ಆಗಮಿಸಿರುವ ವೈದ್ಯರು, ಸಿಲುಕಿರುವ ಕಾರ್ಮಿಕರಿಗೆ ಯೋಗ ಮಾಡಲು, ಇದ್ದಷ್ಟು ಜಾಗದಲ್ಲಿ ನಡೆದಾಡಲು ಮತ್ತು ಪರಸ್ಪರ ಮಾತನಾಡಲು ಸಲಹೆ ನೀಡಿದ್ದಾರೆ. ಸಿಲುಕಿರುವ ಕಾರ್ಮಿಕರ ಮೊದಲ ವಿಡಿಯೋ ದೃಶ್ಯಗಳು ಮಂಗಳವಾರ ಎಂಡೋಸ್ಕೋಪಿಕ್ ಕ್ಯಾಮೆರಾ ಮೂಲಕ ಹೊರಹೊಮ್ಮಿದ್ದವು.
#WATCH | Uttarkashi (Uttarakhand) tunnel rescue | A machine that was stuck yesterday due to the road being narrow, has now reached the Silkyara tunnel site where rescue operations to bring out the trapped workers are underway. pic.twitter.com/KbN6OvYdFC
— ANI (@ANI) November 22, 2023
ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಯು 11ನೇ ದಿನ ತಲುಪಿದೆ. ನವೆಂಬರ್ 12ರಂದು ಭೂಕುಸಿತದ ನಂತರ ಸುರಂಗವು ಕುಸಿದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ರಕ್ಷಣಾ ಕಾರ್ಯಗಳ ಅವಲೋಕನ ನಡೆಸಿದ್ದಾರೆ.
ಸಿಕ್ಕಿಬಿದ್ದವರನ್ನು ಪಾರು ಮಾಡಲು ರಕ್ಷಣಾ ಸುರಂಗವನ್ನು ಕೊರೆಯಲು ಆಡಳಿತ ಪ್ರಸ್ತುತ ಐದು ಅಂಶಗಳ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಅಂದಾಜಿನ ಪ್ರಕಾರ ಬೆಟ್ಟದ ಮೂರು ವಿಭಿನ್ನ ಬಿಂದುಗಳಿಂದ ಲಂಬ ಕೊರೆಯುವಿಕೆಯನ್ನು ಆರಂಭಿಸಲಾಗಿದೆ. ಇದಕ್ಕೆ ಸ್ಥಳವನ್ನು ಗುರುತಿಸಲಾಗಿದೆ. ಇನ್ನು 2-3 ದಿನಗಳಲ್ಲಿ ಸಿಕ್ಕಿಬಿದ್ದ ಜನರನ್ನು ತಲುಪಬಹುದು ಎಂಬ ಅಂದಾಜು ಇದೆ.
ಆದರೆ, ಮಧ್ಯೆ ಇರುವ ಬಂಡೆಗಳು ಕಾರ್ಯಾಚರಣೆಗೆ ಅಡೆತಡೆ ಉಂಟುಮಾಡುತ್ತಿವೆ. ತರಿಸಲಾಗಿರುವ ಎರಡು ದೈತ್ಯ ಆಗರ್ ಯಂತ್ರಗಳು ಕೂಡ ಬಂಡೆ ಸಿಕ್ಕಿದುದರಿಂದ ಕೆಲಸ ನಿಲ್ಲಿಸಿದ್ದವು.