Site icon Vistara News

Tunnel Collapse: ಸುರಂಗ ಕೊರೆಯುವ ಯತ್ನ ವಿಫಲ; 40 ಕಾರ್ಮಿಕರ ಪ್ರಾಣ ಕ್ಷಣಕ್ಷಣಕ್ಕೂ ಅಪಾಯದತ್ತ

tunnes collapse uttarakashi

ಉತ್ತರಕಾಶಿ:‌ ಕುಸಿದಿರುವ ಸುರಂಗದಲ್ಲಿ (tunnel collapse) ಸಿಕ್ಕಿಬಿದ್ದಿರುವ 40 ಕಾರ್ಮಿಕರನ್ನು ರಕ್ಷಿಸುವ ಕಾರ್ಯ ವಿಳಂಬವಾಗುತ್ತಿದ್ದು, ಕಾರ್ಮಿಕರು ಪ್ರತಿ ಗಂಟೆಗೂ ಹೆಚ್ಚಿನ ಅಪಾಯದತ್ತ ಜಾರುತ್ತಿದ್ದಾರೆ. ಕಳೆದ 84 ಗಂಟೆಗಳಿಂದ ಅವರು ಸುರಂಗದಲ್ಲಿ ಸಿಕ್ಕಿಬಿದ್ದಿದ್ದಾರೆ.

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ 4.5 ಕಿಮೀ ರಸ್ತೆಯ ಸುರಂಗದೊಳಗೆ 260 ಮೀಟರ್‌ಗಳಷ್ಟು ಒಳಗೆ 40 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಬುಧವರಾ ಸಂಜೆಯವರೆಗೂ ಸುರಂಗವನ್ನು ಅಡ್ಡಗಟ್ಟಿರುವ 50 ಮೀಟರ್‌ನಷ್ಟು ದೊಡ್ಡ ಬಂಡೆಯನ್ನು ಕತ್ತರಿಸುವ ಎರಡು ಪ್ರಯತ್ನಗಳು ವಿಫಲವಾಗಿವೆ. ಕಳೆದ 84 ಗಂಟೆಗಳಿಂದ ಪ್ರಯತ್ನ ನಡೆಯುತ್ತಿದ್ದು, ಕಾರ್ಮಿಕರ ಕುಟುಂಬಗಳು ಮತ್ತು ಸಹೋದ್ಯೋಗಿಗಳ ಹತಾಶೆಗೆ ಕಾರಣವಾಗಿದೆ.

ಬುಧವಾರ ಬೆಳಗ್ಗೆ, ನಿರ್ಮಾಣ ಕಂಪನಿ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ (NECL), ಮತ್ತು ರಕ್ಷಣಾ ತಂಡಗಳು ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ಸಾಕಷ್ಟು ಮಾಡುತ್ತಿಲ್ಲ ಎಂದು ಆರೋಪಿಸಿ ಕಾರ್ಮಿಕರ ಕುಟುಂಬಗಳು ಮತ್ತು ಇತರ ಕಾರ್ಮಿಕರು ಸುರಂಗದ ಹೊರಗೆ ಪ್ರತಿಭಟನೆ ನಡೆಸಿದರು. ರಕ್ಷಣಾ ಕಾರ್ಯಾಚರಣೆಯನ್ನು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್) ಮತ್ತು ಉತ್ತರಾಖಂಡ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ವಹಿಸುತ್ತಿದೆ. ಸ್ಥಳದಲ್ಲಿದ್ದ ಎನ್‌ಡಿಆರ್‌ಎಫ್ ಅಧಿಕಾರಿಗಳು ಕುಟುಂಬಸ್ಥರನ್ನು ಸಮಾಧಾನಿಸಿದರು.

ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL) ಅಧಿಕಾರಿಗಳು ಎರಡು ಪ್ರಯತ್ನಗಳ ವೈಫಲ್ಯಕ್ಕೆ ಸುರಂಗದ ಕುಸಿದ ಭಾಗದ ಮೇಲಿರುವ ಸಡಿಲವಾದ ಬಂಡೆಗಳು ಮತ್ತು ಮರಳನ್ನು ದೂಷಿಸಿದ್ದಾರೆ. ಭೂಕುಸಿತಕ್ಕೆ ಒಳಗಾಗುವ ಮೃದುವಾದ ಪರ್ವತ ಶ್ರೇಣಿಯಲ್ಲಿ ಕೆಲಸ ಮಾಡುವುದರ ಕುರಿತು ಸರಿಯಾದ ಭೌಗೋಳಿಕ ಮಾಹಿತಿಯ ಕೊರತೆಯಿಂದಾಗಿ ಈ ಪ್ರಯತ್ನಗಳು ವಿಫಲವಾಗಿವೆ ಎಂದು ತಜ್ಞರು ಹೇಳಿದ್ದಾರೆ. ರಕ್ಷಣಾ ತಂಡವು ಒಳಗಿರುವವರ ಗಾಳಿ ಮತ್ತು ಆಹಾರಕ್ಕಾಗಿ ಹೆಚ್ಚುವರಿ 125 ಎಂಎಂ ವ್ಯಾಸದ ಪೈಪ್ ಅನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ.

ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳ ಪ್ರಕಾರ, ಮೊದಲ ಎರಡು ದಿನ ಭಾರೀ ಅಗೆಯುವ ಯಂತ್ರಗಳನ್ನು ಬಳಸಿ ಸುರಂಗದ 55 ಮೀಟರ್ ವಿಸ್ತಾರದಲ್ಲಿ ಇರುವ ಅವಶೇಷಗಳನ್ನು ತೆಗೆದುಹಾಕಲಾಯಿತು. “ಶಾಟ್‌ಕ್ರೀಟ್ ವಿಧಾನ” ಬಳಸಿ ಹೆಚ್ಚಿನ ಮಣ್ಣು ಬೀಳದಂತೆ ತಡೆಯಲು ಪ್ರಯತ್ನಿಸಲಾಯಿತು. ಶಾಟ್‌ಕ್ರೀಟ್‌ ಎಂದರೆ ಹೆಚ್ಚಿನ ವೇಗದ ಗಾಳಿಯನ್ನು ಬಳಸಿಕೊಂಡು ಕಾಂಕ್ರೀಟ್ ಸಿಂಪಡಿಸುವ ನಿರ್ಮಾಣ ತಂತ್ರ. ಸುರಂಗದ ಮೇಲ್ಛಾವಣಿಯ ದುರ್ಬಲವಾದ ಗುಣದಿಂದಾಗಿ ಇದು ಕೆಲಸ ಮಾಡಲಿಲ್ಲ.

ಎನ್‌ಡಿಆರ್‌ಎಫ್ ಮತ್ತು ಉತ್ತರಾಖಂಡ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಆಗರ್ ಯಂತ್ರವನ್ನು ಬಳಸಿ ಸುರಕ್ಷಿತ ಕಿಂಡಿಮಾರ್ಗ ರಚಿಸಲು ನಿರ್ಧರಿಸಿದರು. ಇದೀಗ ಕಾರ್ಮಿಕರನ್ನು ಹೊರಗೆ ತರಲು 800 ಮತ್ತು 900 ಎಂಎಂ ವ್ಯಾಸದ ದೊಡ್ಡ ಪೈಪ್‌ಗಳನ್ನು ಅಳವಡಿಸುತ್ತಿದ್ದಾರೆ. “ಕಾರ್ಮಿಕರನ್ನು ಹೊರತರಲು ಶಿಲಾಖಂಡರಾಶಿಗಳು ಬೀಳುವ ಭಯವಿಲ್ಲದ ಸಣ್ಣ ಮಾರ್ಗವನ್ನು ರಚಿಸಬೇಕಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಇದು ಕೂಡ ನಿರೀಕ್ಷೆಯಂತೆ ಆಗುತ್ತಿಲ್ಲ.

ಕಾರ್ಯಾಚರಣೆಯ ಸಿಬ್ಬಂದಿಯು ರಾಶಿಯಾದ ಅವಶೇಷಗಳ ನಡುವೆ ಬಂಡೆಗಳನ್ನು ನಿರೀಕ್ಷಿಸಿರಲಿಲ್ಲ. ಹೊಸ ಆಗರ್ ಯಂತ್ರವು ಶಿಲಾಖಂಡರಾಶಿಗಳನ್ನು ಭೇದಿಸಲು ಯಶಸ್ವಿಯಾಗಬಹುದು. ಆದರೆ ದಿಡೀರ್‌ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಹೆಸರು ಹೇಳಲಿಚ್ಛಿಸದ ಕೆಲಸಗಾರರೊಬ್ಬರು, “ನಾನು ಒಳಗೆ ಸಿಕ್ಕಿಬಿದ್ದ ನನ್ನ ಸಹ ಕೆಲಸಗಾರರಲ್ಲಿ ಒಬ್ಬರೊಂದಿಗೆ ಫೋನ್‌ನಲ್ಲಿ ಮಾತನಾಡಿದೆ. ಅವರು ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ವಿಳಂಬವಾದ ರಕ್ಷಣಾ ಕಾರ್ಯಾಚರಣೆಯಿಂದ ಅವರ ವಿಶ್ವಾಸವು ಅಲುಗಾಡುತ್ತಿದೆʼʼ ಎಂದಿದ್ದಾರೆ.

ಇದನ್ನೂ ಓದಿ: Tunnel Collapses: ಉತ್ತರಾಖಂಡದಲ್ಲಿ ಸುರಂಗ ಕುಸಿದು 30 ಗಂಟೆ; 40 ಜನರ ಸ್ಥಿತಿ ಈಗ ಹೇಗಿದೆ?

Exit mobile version