Site icon Vistara News

Jammu Kashmir: ಕಾಶ್ಮೀರದ 2 ಕಡೆ ಉಗ್ರರ ದಾಳಿ; ಮಾಜಿ ಸರ್ಪಂಚ್‌ ಬಲಿ, ರಾಜಸ್ಥಾನದ ದಂಪತಿಗೆ ಗಾಯ

Jammu Kashmir

Two civilians shot at by terrorists in Jammu and Kashmir’s Anantnag

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಲೋಕಸಭೆ ಚುನಾವಣೆಯ (Lok Sabha Election) 5ನೇ ಹಂತದ ಮತದಾನಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಉಗ್ರರ ದಾಳಿ ನಡೆದಿದೆ. ಒಂದೇ ದಿನ ಎರಡು ಕಡೆ ಉಗ್ರರು ನಾಗರಿಕರು ಹಾಗೂ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಶೋಪಿಯಾನ್‌ (Shopian) ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಾಜಿ ಸರ್ಪಂಚ್‌ ಒಬ್ಬರು ಹತರಾದರೆ, ಅನಂತನಾಗ್‌ ಜಿಲ್ಲೆಯಲ್ಲಿ ರಾಜಸ್ಥಾನದ ದಂಪತಿಯು ಗಾಯಗೊಂಡಿದ್ದಾರೆ.

ಉಗ್ರರ ದಾಳಿಯ ಕುರಿತು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಶೋಪಿಯಾನ್‌ ಜಿಲ್ಲೆಯ ಹುರ್ಪುರ ಗ್ರಾಮದಲ್ಲಿ ಉಗ್ರರ ದಾಳಿಯಲ್ಲಿ ಮಾಜಿ ಸರ್ಪಂಚ್‌ ಐಜಾಜ್‌ ಅಹ್ಮದ್‌ ಶೇಖ್‌ ಎಂಬುವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಅನಂತನಾಗ್‌ನಲ್ಲಿಯೂ ಉಗ್ರರ ದಾಳಿ ನಡೆದಿದ್ದು, ರಾಜಸ್ಥಾನದ ಪತಿ-ಪತ್ನಿ ಮೃತಪಟ್ಟಿದ್ದಾರೆ. ಜಮ್ಮು-ಕಾಶ್ಮೀರದ ಮೂಲ ನಿವಾಸಿಗಳು ಅಲ್ಲ ಎಂಬುದನ್ನು ಗುರುತಿಸಿ ಉಗ್ರರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಟೂರಿಸ್ಟ್‌ ಕ್ಯಾಂಪ್‌ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಪರ್ಹಾ ಹಾಗೂ ಅವರ ಪತಿ ತಬ್ರೇಜ್‌ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ಕಡೆ ದಾಳಿ ಮಾಡಿದವರು ಯಾವ ಸಂಘಟನೆಗೆ ಸೇರಿದವರು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಉಗ್ರರು ದಾಳಿ ನಡೆಸಿದ ಕಾರಣ ಭದ್ರತಾ ಸಿಬ್ಬಂದಿಯು ಎರಡೂ ಜಿಲ್ಲೆಗಳಲ್ಲಿ ಉಗ್ರರು ನಡೆಸಿದ ದಾಳಿಯ ಪ್ರದೇಶಗಳ ಸುತ್ತ ಸುತ್ತುವರಿದಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಗಳು ಜಾಸ್ತಿಯಾಗಿವೆ. ಕಳೆದ ಏಪ್ರಿಲ್‌ನಲ್ಲಿ ಶೋಪಿಯಾನ್‌ ಜಿಲ್ಲೆಯಲ್ಲಿ ಸ್ಥಳೀಯನಲ್ಲದ ಟೂರಿಸ್ಟ್‌ ಗೈಡ್‌ ಒಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಶ್ರೀನಗರದಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಉಗ್ರರು ಹತ್ಯೆ ಮಾಡಿದ್ದರು.

ಇದನ್ನೂ ಓದಿ: Terrorists Killed: ಸೇನೆಯ ಭರ್ಜರಿ ಬೇಟೆ; ಎಲೆಕ್ಷನ್‌ ಹಾಳುಗೆಡವಲು ಗಡಿ ನುಸುಳುತ್ತಿದ್ದ ನಾಲ್ವರು ಉಗ್ರರ ಹತ್ಯೆ

Exit mobile version