ಲಖನೌ: ಉತ್ತರ ಪ್ರದೇಶದ ವಾರಾಣಸಿಯಲ್ಲಿ (Varanasi) ಸಹೋದರಿಯರಿಬ್ಬರು (Sisters) ವರ್ಷದಿಂದ ತಮ್ಮ ತಾಯಿಯ ಶವದೊಂದಿಗೆ ಬದುಕುತ್ತಿದ್ದರು (Living With mother’s Dead body) ಎಂದು ಪೊಲೀಸರು ತಿಳಿಸಿದ್ದಾರೆ(UP Police). ಒಂದು ವಾರದಿಂದ ಸಹೋದರಿಯರು ಮನೆಯಿಂದ ಹೊರಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಇಡೀ ಘಟನೆ ಬೆಳಕಿಗೆ ಬಂದಿದೆ.
ಈ ಹುಡುಗಿಯರ ತಾಯಿ, 52 ವರ್ಷದ ಉಷಾ ದೇವಿ 2022ರ ಡಿಸೆಂಬರ್ 8ರಂದು ಮೃತಪಟ್ಟಿದ್ದಾಳೆ. ಆದರೆ, ಮಕ್ಕಳಿಬ್ಬರು ಆಕೆಯ ಶವಸಂಸ್ಕಾರ ಮಾಡಿರಲಿಲ್ಲ. ಬದಲಿಗೆ ಶವವನ್ನು ಮನೆಯ ಕೋಣೆಯೊಂದರಲ್ಲಿ ಇಟ್ಟು ಲಾಕ್ ಮಾಡಿದ್ದರು. ವಾರಾಣಸಿಯ ಮಂದರ್ವಾ ಪ್ರದೇಶದಲ್ಲಿ ಇವರುವ ವಾಸಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸು ತಿಳಿಸಿದ್ದಾರೆ.
ಮೃತ ಮಹಿಳೆಯ ಪತಿ ಎರಡು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ಪತ್ನಿಯ ಮರಣದ ನಂತರವೂ ಮನೆಗೆ ಬಂದಿಲ್ಲ. ಆಗ ಅವರ ಇಬ್ಬರು ಪುತ್ರಿಯರಾದ ಪಲ್ಲವಿ ತ್ರಿಪಾಠಿ (27) ಮತ್ತು ವೈಶ್ವಿಕ್ ತ್ರಿಪಾಠಿ (18) ಮೃತದೇಹವನ್ನು ಅಂತ್ಯಸಂಸ್ಕಾರ ಮಾಡದೆ ಕೊಠಡಿಯಲ್ಲಿಟ್ಟು ಬೀಗ ಹಾಕಿದ್ದರು.
ಅಂದಿನಿಂದ ಪಲ್ಲವಿ ಮತ್ತು ವೈಶ್ವಿಕ್ ತಮ್ಮ ತಾಯಿಯ ಮೃತದೇಹದೊಂದಿಗೆ ವಾಸಿಸುತ್ತಿದ್ದರು. ಇವರಿಬ್ಬರೂ ಕಳೆದ ಒಂದು ವಾರದಿಂದ ಮನೆಯಿಂದ ಹೊರಗೆ ಬಂದಿರಲಿಲ್ಲ. ಆಗ ಅನುಮಾನಗೊಂಡ ನೆರೆ ಹೊರೆಯುವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಈ ಮಾಹಿತಿಯ ಅನ್ವಯ ಪೊಲೀಸರು ತನಿಖೆ ಕೈಗೊಂಡರು. ಸ್ಥಳಕ್ಕೆ ಆಗಮಿಸಿದ ಅವರು ಬಾಗಿಲು ತೆರೆಯುವ ಪ್ರಯತ್ನ ಮಾಡಿದರು.
ಸಹೋದರಿಯರಿದ್ದ ಮನೆಯ ಬಾಗಿಲು ಬಡಿದರೂ ಒಳಗಿನಿಂದ ಯಾರೂ ಬಾಗಿಲು ತೆರೆಯಲಿಲ್ಲ. ಉತ್ತರವೂ ಕೊಡಲಿಲ್ಲ. ಕೊನೆಗೆ ಅಧಿಕಾರಿಯೊಬ್ಬರು ಬಾಗಿಲು ಮುರಿದು ಒಳಗೆ ಹೋದಾಗ ಆಘಾತ ಕಾದಿತ್ತು. ನೆಲದ ಮೇಲೆ ಬಿದ್ದಿದ್ದ ಮೃತ ಮಹಿಳೆಯ ಕೊಳೆತ ಶವವನ್ನು ಕಂಡು ಇಡೀ ಪೊಲೀಸ್ ತಂಡವು ಆಘಾತಕ್ಕೊಳಗಾಯಿತು. ಆಕೆಯ ಹೆಣ್ಣುಮಕ್ಕಳು ಸಹ ಅದೇ ಕೋಣೆಯಲ್ಲಿ ತಮ್ಮ ತಾಯಿಯ ಶವದ ಪಕ್ಕದಲ್ಲಿ ಕುಳಿತಿದ್ದರು ಎಂದು ಪೊಲೀಸ್ ತಂಡವು ತಿಳಿಸಿದೆ. ಸಹೋದರಿಯರಿಬ್ಬರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಇದೇ ರೀತಿಯ ಘಟನೆಯು ಚೆನ್ನೈನಲ್ಲೂ ನಡೆದಿತ್ತು. 84 ವರ್ಷದ ಮಹಿಳೆಯೊಬ್ಬರು ತನ್ನ ಮೃತ ಮಗಳೊಂದಿಗೆ ದಿನಗಟ್ಟಲೆ ವಾಸಿಸುತ್ತಿದ್ದರು. ಬಳಿಕ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ಮಹಿಳೆ ಶೀಲಾ (55) ಒಂಟಿಯಾಗಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆಕೆ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಮಗಳು ಮೃತಪಟ್ಟರೂ ತಾಯಿ ಮಣ್ಣು ಮಾಡಿರಲಿಲ್ಲ. ದಿನಗಟ್ಟಲೇ ಆಕೆ ಮಗಳ ಶವದ ಪಕ್ಕದಲ್ಲೇ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Dead Body: ತಾಯಿಯ ಶವದೊಂದಿಗೆ ಎರಡು ದಿನ ಕಳೆದ ಬಾಲಕ, ರಾಜಧಾನಿಯಲ್ಲೊಂದು ಮನ ಕಲಕುವ ಘಟನೆ