ನವದೆಹಲಿ: ಕೊರೊನಾ ವೈರಸ್‌ನಿಂದ ತತ್ತರಿಸುತ್ತಿರುವಾಗಲೇ ಕೇರಳದಲ್ಲಿ (norovirus infection in Kerala) ಮತ್ತೊಂದು ವೈರಸ್ ಪತ್ತೆಯಾಗಿದೆ. ಇಬ್ಬರು ವಿದ್ಯಾರ್ಥಿಗಳು ನೊರೊವೈರಸ್(Norovirus Disease) ಸೋಂಕಿತರಾಗಿದ್ದಾರೆ ಎಂದು ಕೇರಳ ರಾಜ್ಯ ಸರ್ಕಾರವು ಹೇಳಿದೆ. ಕಾಕ್ಕನಾಡ ಶಾಲೆಯ ಒಂದು ಹಾಗೂ ಎರಡನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಈ ನೊರೊವೈರಸ್ ಸೋಂಕಿತರಾಗಿದ್ದಾರೆ. ಅವರಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ನೊರೊವೈರಸ್ ಸೋಂಕಿನಿಂದ ಗ್ಯಾಸ್ಟ್ರೋಎಂಟರೈಟಿಸ್ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಇದು ಅತಿಸಾರ, ಹೊಟ್ಟೆ ಸೆಳೆತ, ವಾಕರಿಕೆ ಅಥವಾ ವಾಂತಿ ಮತ್ತು ಕೆಲವೊಮ್ಮೆ ಜ್ವರ ಲಕ್ಷಣಗಳನ್ನು ಹೊಂದಿರುತ್ತದೆ.
ಶಾಲೆಯ ಒಟ್ಟು 62 ಮಕ್ಕಳು ಮತ್ತು ಕೆಲವು ಪೋಷಕರಿಗೆ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಆದರೆ, ಪರೀಕ್ಷೆ ವೇಳೆ, ಇಬ್ಬರು ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಮಕ್ಕಳಿಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಬಂದ್ ಆಗಿರುವ ಶಾಲೆಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಮಕ್ಕಳು ಮತ್ತು ಪೋಷಕರಿಗೆ ನಾವು ಆನ್‌ಲೈನ್ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಕ್ಲಾಸ್ ರೂಮ್ ಮತ್ತು ಟಾಯ್ಲೆಟ್‌ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ಕಳೆದ ವರ್ಷವೂ ಇದೇ ರೀತಿಯಲ್ಲಿ ಕೇರಳದಲ್ಲಿ ನೊರೊ ವೈರಸ್ ಪತ್ತೆಯಾಗಿತ್ತು. ತಿರುವನಂಥಪುರಂನ ವಿಳಿಂಜಮ್‌ನ ಶಾಲೆಯ ಮಕ್ಕಳಲ್ಲಿ ನೊರೊವೈರಸ್ ಕಂಡು ಬಂದಿತ್ತು.
ಇದನ್ನೂ ಓದಿ : ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ವೈರಸ್; ಇಂದು 7 ಸಾವಿರಕ್ಕೂ ಅಧಿಕ ಕೇಸ್ ದಾಖಲು
ಏನಿದು ನೊರೊವೈರಸ್ ಸೋಂಕು?
ಇದೊಂದು ಜಾಗತಿಕವಾಗಿ ಕಾಣಸಿಕೊಳ್ಳುವ ಸಾಮಾನ್ಯ ವೈರಲ್ ಸೋಂಕು ಆಗಿದ್ದು, ಮಕ್ಕಳಲ್ಲಿ ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆಗೆ ಕಾರಣವಾಗುತ್ತಿದೆ. ತುಂಬಾ ಸರಳವಾಗಿ ಹೇಳಬೇಕೆಂದರೆ, ಇದು ಅತಿಸಾರ ಮತ್ತು ವಾಂತಿಗೆ ಕಾರಣವಾಗುವ ಅತ್ಯಂತ ಸಾಂಕ್ರಾಮಿಕ ವೈರಸ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ನೊರೊವೈರಸ್ ಪ್ರಸರಣದ ಸಾಮರ್ಥ್ಯವನ್ನು ಹೊಂದಿದೆ ಮತ್ತು ತೀವ್ರ ಅನಾರೋಗ್ಯಕ್ಕೆ ಕಾರಣವಾಗಬಹುದು.