ಮುಂಬಯಿ: ಒಂದು ಸಣ್ಣ ಟೈಪಿಂಗ್ ತಪ್ಪು ಎಷ್ಟರ ಮಟ್ಟಿಗೆ ದುಬಾರಿಯಾಗಬಹುದು ಎನ್ನುವುದಕ್ಕೆ ರಾಷ್ಟ್ರೀಯ ಷೇರು ಪೇಟೆಯಲ್ಲಿ ಗುರುವಾರ ನಡೆದ ಒಂದು ಘಟನೆಯೇ ಸಾಕ್ಷಿ. ಷೇರು ವ್ಯವಹಾರದ ಸಂದರ್ಭದಲ್ಲಿ ತಪ್ಪಾದ ಕೀ ಒತ್ತಿದ ಪರಿಣಾಮವಾಗಿ ಬ್ರೋಕರೇಜ್ ಸಂಸ್ಥೆಯೊಂದು 200ರಿಂದ 250 ಕೋಟಿ ರೂ. ನಷ್ಟ ಅನುಭವಿಸಿರುವ ಸಾಧ್ಯತೆ ಇದೆ. ಷೇರು ವ್ಯವಹಾರದ ಪರಿಭಾಷೆಯಲ್ಲಿ ಇದನ್ನು ಫ್ಯಾಟ್ ಫಿಂಗರ್ ಟ್ರೇಡ್ ಎಂದು ಕರೆಯುತ್ತಾರೆ. ಅಂದರೆ, ಬೆರಳುಗಳು ದೊಡ್ಡದಿದ್ದಾಗ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ನಾವು ಒತ್ತುವ ನಂಬರ್ ಒಂದಾಗಿದ್ದಾರೆ, ಅದು ಆ ಕಡೆ ಈ ಕಡೆಯ ಕೀಗಳನ್ನೂ ಸ್ಪರ್ಶಿಸಿ ಬೇರಾವುದೋ ಅಂಕೆ ಪ್ರೆಸ್ ಅಗುವ ಸಾಧ್ಯತೆ (Typing error) ಇರುತ್ತದೆ.
ಆಗಿದ್ದೇನು?
ಗುರುವಾರ ಮಧ್ಯಾಹ್ನ 2.37ರಿಂದ 2.39ರ ನಡುವೆ, ವ್ಯಾಪಾರಿಯೊಬ್ಬರು 25000 ಲಾಟ್‌ಗಳನ್ನು ಮಾರಾಟ ಮಾಡಿದರು. ಆದರೆ, ಅದಕ್ಕೆ ಅವರು ಕೋಟ್ ಮಾಡಿದ ಮೊತ್ತ ಕೇವಲ 15 ಪೈಸೆ! ಆದರೆ, ನಿಜವಾಗಿ ಮಾರುಕಟ್ಟೆಯಲ್ಲಿ ಆ ಷೇರಿನ ಮೌಲ್ಯ 2,100 ರೂ. ಇತ್ತು. ಈ ಷೇರಿನಲ್ಲಿ ಒಂದು ಲಾಟ್ ಎಂದರೆ ಷೇರುಗಳು. ಅಂದರೆ ಒಟ್ಟು 12,50,000 ಷೇರುಗಳು ಅಲ್ಲಿದ್ದವು.
ಈ ನಡುವೆ, ಒಳ್ಳೆಯ ಷೇರೊಂದು ಅತಿ ಕಡಿಮೆ ಬೆಲೆಗೆ ಕೋಟ್ ಆಗಿದೆ ಎಂದು ತಿಳಿದವರು ಕೂಡಲೇ ಟ್ರೇಡ್ ಮಾಡಿದ್ದಾರೆ. ಕೋಲ್ಕೊತಾ ಮೂಲದ ಇಬ್ಬರು ಟ್ರೇಡರ್‌ಗಳು ಕೂಡಲೇ ದೊಡ್ಡ ಪ್ರಮಾಣದ ಷೇರುಗಳನ್ನು ಖರೀದಿ ಮಾಡಿದ್ದು ಒಬ್ಬರಿಗೆ 50 ಕೋಟಿ ರೂ. ಲಾಭವಾಗಿದ್ದರೆ, ಮತ್ತೊಬ್ಬರು 25 ಕೋಟಿ ರೂ. ಲಾಭವಾಗಿದೆ.
ಇದು ಬ್ರೋಕರ್‌ಗಳ ನಡುವೆ ನಡೆದಿರುವ ವ್ಯವಹಾರವಾಗಿರುವುದರಿಂದ ಎನ್‌ಎಸ್‌ಇ ಇದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ದೊಡ್ಡ ದೊಡ್ಡ ಬ್ರೋಕರ್‌ಗಳು ಇಂಥ ಅಪಾಯಗಳಿಂದ ರಕ್ಷಿಸಿಕೊಳ್ಳಲು ಮೊದಲೇ ವಿಮೆ ಮಾಡಿಸಿಕೊಂಡಿರುತ್ತಾರೆ. ಹೀಗಾಗಿ ನಷ್ಟ ಪರಿಹಾರವೂ ಸಿಗಬಹುದು ಎಂದು ಹೇಳಲಾಗಿದೆ. ಈ ತಪ್ಪನ್ನು ಕೇವಲ ಎರಡೇ ನಿಮಿಷದಲ್ಲಿ ಸರಿಪಡಿಸಲಾಯಿತು.
ಮುನ್ಸೂಚನೆ ದೊರೆಯಲೇ ಇಲ್ಲ
ನಿಜವೆಂದರೆ, ಟೈಪಿಂಗ್ ಎರರ್, ಫ್ಯಾಟ್ ಫಿಂಗರ್ ಟ್ರೇಡ್‌ಗಳಿಂದ ಅಪಾಯ ಸಂಭವಿಸಬಾರದು ಎಂಬ ಕಾರಣಕ್ಕಾಗಿ ಒಂದು ಎಚ್ಚರಿಕೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಲಾಗಿತ್ತು. ಅಂದರೆ, ಒಂದು ದೊಡ್ಡ ಮೊತ್ತದ ಷೇರು ಏಕಾಏಕಿಯಾಗಿ ಕಡಿಮೆ ಬೆಲೆಗೆ ಟ್ರೇಡಿಂಗ್‌ಗೆ ಬಂದರೆ ಅಥವಾ ಕಡಿಮೆ ಮೊತ್ತದ ಷೇರು ದೊಡ್ಡ ಮೊತ್ತಕ್ಕೆ ಟ್ರೇಡ್ ಆದರೆ ಅದರ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ ಎಚ್ಚರಿಕೆ ನೀಡುವ ವ್ಯವಸ್ಥೆ ಇದು. ಆದರೆ, ಗುರುವಾರದ ಈ ವ್ಯವಹಾರದ ವೇಳೆ ಅದು ಯಾವುದೇ ಎಚ್ಚರಿಕೆ ನೀಡದೆ, ಸೈರನ್ ಮೊಳಗಿಸದೆ ಮೌನವಾಗಿತ್ತು!
ಏನಿದು ಫ್ಯಾಟ್ ಫಿಂಗರ್ ಟ್ರೇಡ್?
-ಕೀಬೋರ್ಡ್‌ನಲ್ಲಿ ತಪ್ಪು ಕೀ ಬಳಕೆ ಅಥವಾ ಮೌಸ್‌ನಲ್ಲಿ ತಪ್ಪಾದ ಬಟನ್ ಕ್ಲಿಕ್ ಮಾಡುವಾಗ ಏನಾದರೂ ಹೆಚ್ಚು ಕಡಿಮೆ ಆಗಿ ತಪ್ಪಾಗುವುದನ್ನು ಫ್ಯಾಟ್ ಫಿಗರ್ ಟ್ರೇಡ್ ಅನ್ನುತ್ತಾರೆ. ಒಂದು ಷೇರಿನ ಮೌಲ್ಯ 11,100 ರೂ. ಅಂತಿಟ್ಟುಕೊಳ್ಳಿ, ವಹಿವಾಟಿನ ವೇಳೆ ತಪ್ಪಾಗಿ ಅದನ್ನು 1100 ರೂ. ಎಂದು ಟೈಪ್ ಮಾಡಿದರೆ ದೊಡ್ಡ ಮೊತ್ತದ ನಷ್ಟ ಉಂಟಾಗುತ್ತದೆ. ಆದರೆ, ಈ ನಡುವೆ ಯಾರಾದರೂ ಖರೀದಿ ಮಾಡಿದರೆ ಅವರಿಗೆ ಲಾಭವಾಗುತ್ತದೆ.
ಹಿಂದೆಯೂ ಆಗಿತ್ತು ಇದೆಲ್ಲ
-2೦14ರಲ್ಲಿ ಜಪಾನ್ ಷೇರು ಮಾರುಕಟ್ಟೆಯಲ್ಲಿ ಬ್ಲೂಚಿಪ್ ಷೇರುಗಳ ದರ ವ್ಯತ್ಯಾಸವಾಗಿ 600 ಬಿಲಿಯನ್ ಡಾಲರ್ ನಷ್ಟವಾಗಿತ್ತು.
-ಡಷ್ ಬ್ಯಾಂಕ್‌ನಲ್ಲಿ 2018ರಲ್ಲಿ ಹಲವಾರು ಖಾತೆಗಳಿಗೆ ತಪ್ಪಾಗಿ ಹಣ ವರ್ಗಾವಣೆಯಾಗಿ 28 ಬಿಲಿಯನ್ ಡಾಲರ್‌ನಷ್ಟು ನಷ್ಟ ಉಂಟಾಗಿತ್ತು.
-2012ರ ಅಕ್ಟೋಬರ್‌ನಲ್ಲಿ ನಿಫ್ಟಿ ಕಾಂಟ್ರಾಕ್ಟ್‌ನಲ್ಲಿ ಎಂಕೆ ಗ್ಲೋಬಲ್ ಟ್ರೇಡರ್‌ಗೆ 60 ಕೋಟಿ ರೂ. ನಷ್ಟವಾಗಿತ್ತು. ಆವತ್ತು ಎನ್‌ಎಸ್‌ಇ ಕೂಡಾ 15 % ಕುಸಿತ ಕಂಡು ಅಲ್ಲೋಲಕಲ್ಲೋಲವಾಗಿತ್ತು.
ಇದನ್ನೂ ಓದಿ| Money Guide: ಜಾಗತಿಕ ಷೇರು ಮಾರುಕಟ್ಟೆ ಎತ್ತ ಸಾಗುತ್ತಿದೆ, ಭಾರತದ ಷೇರು ಪೇಟೆ ಹೇಗಿದೆ?