ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಸಿಎಂ ಹುದ್ದೆಯನ್ನೂ ಏಕನಾಥ್ ಶಿಂಧೆಗೆ ಬಿಟ್ಟುಕೊಡಲು ಮುಂದಾಗಿದ್ದರು. ಆದರೆ ಈ ಆಫರ್ ಅನ್ನು ಏಕನಾಥ್ ಶಿಂಧೆ ತಿರಸ್ಕರಿಸಿದ್ದಾರೆ ಎನ್ನುತ್ತಿವೆ ಮೂಲಗಳು. ಹಾಗಾದರೆ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.
ಶಿವಸೇನಾ ಪಕ್ಷದಿಂದ ಬೆಮಬಲಿಗ ಶಾಸಕರೊಡನೆ ಬಂಡಾಯವೆದ್ದಿರುವ ಏಕನಾಥ್ ಶಿಂಧೆ, ಶಿವಸೇನಾ ತನ್ನ ಹಿಂದುತ್ವ ಸಿದ್ಧಾಂತಕ್ಕೆ ಮರಳಬೇಕು ಹಾಗೂ ಹಿಂದುತ್ವಕ್ಕೆ ವಿರುದ್ಧ ಇರುವ ಮಹಾರಾಷ್ಟ್ರ ವಿಕಾಸ ಅಘಾಡಿಯಿಂದ ಹೊರಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಉದ್ಧವ್ ಠಾಕ್ರೆ ಭಾವನಾತ್ಮಕವಾಗಿ ಸಿಎಂ ಹುದ್ದೆಯನ್ನು ಬಿಟ್ಟುಕೊಡುವುದಾಗಿ ಹೇಳಿಕೆ ನೀಡಿದ ಬಳಿಕ ಇದೀಗ ಏಕನಾಥ್ ಶಿಂಧೆ ಅವರ ಬಳಿ ಉಳಿದಿರುವ ಆಯ್ಕೆಗಳು ಏನು?
- ಒಂದು ಯೂಟರ್ನ್ ತೆಗೆದುಕೊಂಡು ಉದ್ಧವ್ ಠಾಕ್ರೆಯವರ ಆಫರ್ ಸ್ವೀಕರಿಸಿ ಎಂವಿಎ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗುವುದು. ಆಗ ಉದ್ಧವ್ ಠಾಕ್ರೆಗೂ, ಏಕನಾಥ್ ಶಿಂಧೆಗೂ ಲಾಭ. ಕಾಂಗ್ರೆಸ್ ಮತ್ತು ಎನ್ಸಿಪಿಗೆ ಅಧಿಕಾರದಿಂದ ಬಿಜೆಪಿಯನ್ನು ದೂರವಿಡಲು ಹಾಗೂ ಎರಡನೇ ಬಾರಿಗೆ ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಮುಖಭಂಗ ಮಾಡಲು ಅವಕಾಶ ಉಂಟಾಗುತ್ತದೆ. ಆದರೆ ಶಿಂಧೆ ಹಾಗೂ ಅವರ ಬೆಂಬಲಿಗ ಶಾಸಕರ ಭವಿಷ್ಯದ ನಡೆ ಸ್ಪಷ್ಟವಾಗಿಲ್ಲ. ಅವರೆಲ್ಲರನ್ನೂ ಕ್ಯಾಬಿನೆಟ್ಗೆ ತೆಗೆದುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.
- ಎರಡನೆಯದ್ದು ಬಿಜೆಪಿ ಜತೆ ಏಕನಾಥ್ ಶಿಂಧೆ ಹೋಗುವುದು. ಸರ್ಕಾರ ರಚಿಸಿ ಡಿಸಿಎಂ ಹುದ್ದೆ ಒಪ್ಪಿಕೊಳ್ಳುವುದು. ಈ ವಿಷಯದಲ್ಲಿ ತಾನೊಬ್ಬ ಬಾಳಾ ಸಾಹೇಬ್ ಅವರ ನಿಷ್ಠಾವಂತ ಅನುಯಾಯಿ. ಆದರೆ ಸ್ವಪಕ್ಷೀಯರಿಂದಲೇ ಅನ್ಯಾಯವಾಯಿತು ಎಂಬ ಸಮರ್ಥಿಸಿಕೊಳ್ಳಬಹುದು.
- ಮೂರನೆಯ ಆಯ್ಕೆ ಬಿಜೆಪಿಯು ಏಕನಾಥ್ ಶಿಂಧೆ ಅವರಿಗೆ ಸಿಎಂ ಹುದ್ದೆ ಬಿಟ್ಟುಕೊಟ್ಟು, ಸರ್ಕಾರವನ್ನು ಹೊರಗಿನಿಂದ ಬೆಂಬಲಿಸುವುದು. ಈ ಮೂಲಕ ಠಾಕ್ರೆ, ಕಾಂಗ್ರೆಸ್ ಮತ್ತು ಎನ್ಸಿಪಿಯ ಆರೋಪಗಳಿಗೆ ತಿರುಗೇಟು ನೀಡಬಹುದು.
ಒಂದೊಮ್ಮೆ ಶಿಂಧೆ ಅವರು ಠಾಕ್ರೆ ಜತೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದರೆ, ಬಿಜೆಪಿಯ ಪ್ರತಿಕ್ರಿಯೆ ಹೇಗಿರಬಹುದು ಎಂಬುದು ಬಂಡಾಯವೆದ್ದಿರುವ ಶಾಸಕರ ಚಿಂತೆಗೆ ಕಾರಣವಾಗಿದೆ. ಶಾಸಕರಲ್ಲಿ ಹಲವರು ಐಟಿ ಇಲಾಖೆ ಮತ್ತು ಇ.ಡಿಯಿಂದ ತನಿಖೆ ಎದುರಿಸುತ್ತಿದ್ದಾರೆ.