ಚೆನ್ನೈ: ತಮಿಳುನಾಡು (Tamilnadu) ಸಿಎಂ ಎಂಕೆ ಸ್ಟಾಲಿನ್(MK Stalin) ಅವರ ಅಮೆರಿಕ ಭೇಟಿಗೆ ಮುನ್ನ ಆಗಸ್ಟ್‌ನಲ್ಲಿ ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್(Udhayanidhi Stalin) ಅವರನ್ನು ನೇಮಕ ಮಾಡುವ ಸಾಧ್ಯತೆಯಿದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ. ಆಗಸ್ಟ್ 22 ರಂದು ಸಿಎಂ ಸ್ಟಾಲಿನ್ ಅವರ ಅಮೇರಿಕಾ ಪ್ರವಾಸಕ್ಕೆ ಮುಂಚಿತವಾಗಿ ಉದಯನಿಧಿ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸುವ ಸಾಧ್ಯ ತೆ ಇದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಸಿಎಂ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಪ್ರಸ್ತುತ ತಮಿಳುನಾಡಿನ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಚಿವ ಸಂಪುಟ ಪುನಾರಚನೆ ನಿರೀಕ್ಷೆಯಲ್ಲಿರುವಾಗಲೇ ಉದಯನಿಧಿ ಅವರಿಗೆ ಈ ಮಹತ್ವದ ಹುದೆ ಸಿಗುವ ಸಾಧ್ಯತೆ ಇದೆ. ಈ ವರ್ಷದ ಜನವರಿಯಲ್ಲಿ, ಸಿಎಂ ಎಂಕೆ ಸ್ಟಾಲಿನ್ ಅವರು ತಮ್ಮ ಪುತ್ರ ಡಿಸಿಎಂ ಆಗುತ್ತಾರೆಂಬ ವದಂತಿಯನ್ನು ತಿರಸ್ಕರಿಸಿದ್ದರು. 2026ರಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಡಿಎಂಕೆಯ ಯುವ ಮೋರ್ಚಾ ಅಧ್ಯಕ್ಷ ಮತ್ತು ಚೆಪಾಕ್-ತಿರುವಲ್ಲಿಕೇಣಿ ಕ್ಷೇತ್ರದ ಶಾಸಕ ಉದಯನಿಧಿ ಅವರು ಡಿಸೆಂಬರ್ 2022 ರಲ್ಲಿ ಡಿಎಂಕೆ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೂಲಗಳ ಪ್ರಕಾರ ಈ ವರ್ಷ ಉದಯನಿಧಿ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರಿಸುವ ಅವಕಾಶಗಳು ಬಂದಿದ್ದವು. ಆದರೆ, ವಿವಾದಗಳಿಂದ ಹೊಡೆದ ಡಿಎಂಕೆಯ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ.
ಈ ವರ್ಷದ ಜನವರಿಯಲ್ಲಿ ಸನಾತನ ಧರ್ಮದ ವಿವಾದ ಹಾಗೂ ನಂತರ ಕಲ್ಲಕುರಿಚಿ ಹೂಚ್ ದುರಂತದಿಂದಾಗಿ ಅವರನ್ನು ಉಪ ಮುಖ್ಯಮಂತ್ರಿ ಮಾಡುವ ಯೋಜನೆ ಕೈಬಿಡಲಾಗಿತ್ತು.
ಉದಯನಿಧಿಯವರು ಸನಾತನ ಧರ್ಮವನ್ನು “ಮಲೇರಿಯಾ” ಮತ್ತು “ಡೆಂಗ್ಯೂ” ಗೆ ಹೋಲಿಸಿದ ನಂತರ ಅದರ ನಿರ್ಮೂಲನೆಗೆ ಕರೆ ನೀಡಿದಾಗ ಜನವರಿ ತಿಂಗಳಿನಲ್ಲಿ ಸನಾತನ ಧರ್ಮದ ವಿವಾದ ಭುಗಿಲೆದ್ದಿತು. ಸನಾತನ ಧರ್ಮವು ಜಾತಿ ವ್ಯವಸ್ಥೆ ಮತ್ತು ತಾರತಮ್ಯವನ್ನು ಆಧರಿಸಿದೆ ಎಂದು ಡಿಎಂಕೆ ಸಚಿವರು ವಾದಿಸಿದರು. ಅವರ ಹೇಳಿಕೆಯು ವ್ಯಾಪಕ ಟೀಕೆಗೆ ಕಾರಣವಾಯಿತು. ಅಷ್ಟೇ ಅಲ್ಲದೇ ಹಲವಾರು ದೂರುಗಳು ದಾಖಲಾಗಿ ಸುಪ್ರೀಂ ಕೋರ್ಟ್ ಅಂಗಳದಲ್ಲೂ ಇದರ ಬಗ್ಗೆ ಬಹಳ ಚರ್ಚೆ ಆಗಿತ್ತು.
ಉದಯನಿಧಿ ಸ್ಟಾಲಿನ್ 2023ರ ಸೆ. 4ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.
ಇದನ್ನೂ ಓದಿ:Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇತ್ತು ಆ 6 ಪ್ರಮುಖ ಕಾರಣಗಳು