Site icon Vistara News

UGC-NET: ಯುದ್ಧವನ್ನೇ ನಿಲ್ಲಿಸುವ ಸಾಮರ್ಥ್ಯವಿರುವ ಮೋದಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಕೆ ತಡೆಯುತ್ತಿಲ್ಲ? ರಾಹುಲ್‌ ಗಾಂಧಿ ವ್ಯಂಗ್ಯ

Agnipath Scheme

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET 2024) ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಜೂನ್‌ 18ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನೇ (NET 2024) ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ವಿಚಾರವಾಗಿ ಇದೀಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ʼʼಭಾರತ್‌ ಜೋಡೋ ನ್ಯಾಯ ಯಾತ್ರೆ ವೇಳೆಯೇ ಸಾವಿರಾರು ಮಂದಿ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ದೂರು ನೀಡಿದ್ದರು. ಪ್ರಧಾನಿ ಮೋದಿ ಅವರಿಗೆ ರಷ್ಯಾ-ಉಕ್ರೇನ್ ಯುದ್ಧವನ್ನೇ ನಿಲ್ಲಿಸುವ ಸಾಮರ್ಥ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ಕಾರಣಗಳಿಂದಾಗಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಅಥವಾ ಅದನ್ನು ನಿಯಂತ್ರಿಸಲು ಅವರು ಬಯಸುತ್ತಿಲ್ಲ” ಎಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.  “ಶಿಕ್ಷಣ ವ್ಯವಸ್ಥೆಯನ್ನು ಬಿಜೆಪಿಯ ಮಾತೃ ಸಂಸ್ಥೆ ವಶಪಡಿಸಿಕೊಂಡಿದೆ. ಈ ಕಾರಣಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆ ನಡೆಯುತ್ತಿದೆ. ಇದು ರಾಷ್ಟ್ರ ವಿರೋಧಿ ಚಟುವಟಿಕೆ” ಎಂದು ಅವರು ಟೀಕಿಸಿದ್ದಾರೆ.

“ಒಂದು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇನ್ನೊಂದನ್ನು ರದ್ದುಗೊಳಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂದು ನಮಗೆ ತಿಳಿದಿಲ್ಲ. ಅದೇನೇ ಇರಲಿ ತಪ್ಪಿತಸ್ಥರನ್ನು ಬಂಧಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ನಾಳೆ ದೇಶಾದ್ಯಂತ ಪ್ರತಿಭಟನೆ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET-UG) ಅಕ್ರಮ ನಡೆದಿದ್ದು, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಶುಕ್ರವಾರ (ಜೂನ್‌ 21) ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, “ನೀಟ್ ಪರೀಕ್ಷೆಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳು ಮತ್ತು ಎನ್‌ಡಿಎ ಸರ್ಕಾರದ ನಿಷ್ಕೀಯತೆಯನ್ನು ಎತ್ತಿ ತೋರಿಸಿದೆ. ವಿದ್ಯಾರ್ಥಿಗಳ ನ್ಯಾಯಕ್ಕಾಗಿ ಒತ್ತಾಯಿಸಿ ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿಗಳು ಜೂನ್ 21ರಂದು ರಾಜ್ಯ ಪ್ರಧಾನ ಕಚೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕು. ಇದರಲ್ಲಿ ಹಿರಿಯ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಭಾಗಿಯಾಗಬೇಕು” ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಇನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಟ್​ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ನರೇಂದ್ರ ಮೋದಿಯವರೇ, ನೀವು ಪರೀಕ್ಷೆಗಳ ಬಗ್ಗೆ ಸಾಕಷ್ಟು ಚರ್ಚಿಸುತ್ತೀರಿ. ಆದರೆ ನೀವು ಯಾವಾಗ ‘ನೀಟ್ ಪರೀಕ್ಷಾ ಪೇ ಚರ್ಚಾ’ ನಡೆಸುತ್ತೀರಿ? ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಉತ್ಸಾಹಕ್ಕೆ ತಣ್ಣೀರೆರಚಿದ್ದೀರಿ. ಇದು ಮೋದಿ ಸರ್ಕಾರದ ದುರಹಂಕಾರದ ಸೋಲು” ಎಂದು ಖರ್ಗೆ ಟೀಕಿಸಿದ್ದಾರೆ.

Exit mobile version