Site icon Vistara News

Nirav Modi | ನೀರವ್‌ ಮೋದಿ ಅರ್ಜಿ ವಜಾಗೊಳಿಸಿದ ಬ್ರಿಟನ್‌ ಹೈಕೋರ್ಟ್‌, ಭಾರತಕ್ಕೆ ಹಸ್ತಾಂತರ ಸನ್ನಿಹಿತ

Nirav Modi

ಲಂಡನ್:‌ ದೇಶಭ್ರಷ್ಟ ಆರ್ಥಿಕ ಅಪರಾಧಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (Punjab National Bank) ಸಾವಿರಾರು ಕೋಟಿ ರೂ. ವಂಚಿಸಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ (Nirav Modi) ಅವರನ್ನು ಶೀಘ್ರವೇ ಭಾರತಕ್ಕೆ ಹಸ್ತಾಂತರಿಸುವ ಕಾಲ ಸನ್ನಿಹಿತವಾಗಿದೆ. ಭಾರತಕ್ಕೆ ಹಸ್ತಾಂತರಗೊಳಿಸುವ ಆದೇಶ ಪ್ರಶ್ನಿಸಿ ನೀರವ್‌ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಲಂಡನ್‌ ಹೈಕೋರ್ಟ್‌ ನಿರಾಕರಿಸಿದ್ದು, ಶೀಘ್ರವೇ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಮಾರು 13,500 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್‌ ಮೋದಿ ಅವರು ಹಸ್ತಾಂತರ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು. ಮಾನಸಿಕ ಖಿನ್ನತೆ ಸೇರಿ ಹಲವು ಕಾರಣಗಳಿಂದಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ನೀರವ್‌ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ನೀರವ್‌ ಮುಂದಿನ ಹಾದಿ ಏನು?

ನೀರವ್‌ ಮೋದಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಪ್ರಸ್ತಾಪಿಸಿದ ಕಾರಣ ಹಸ್ತಾಂತರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈಗ ಇದೇ ಮಾನದಂಡದ ಮೇಲೆ 14 ದಿನಗಳೊಳಗೆ ನೀರವ್‌ ಮೋದಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲೂ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ. ಇದೆಲ್ಲ ಪ್ರಕ್ರಿಯೆ ಮುಗಿಯುವರೆಗೂ ನೀರವ್‌ ಮೋದಿ, ವಿಂಡ್ಸ್‌ವರ್ತ್‌ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗುತ್ತದೆ.

ಏನಿದು ಪ್ರಕರಣ?

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸುಮಾರು 13,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಲುಕಿರುವ ನೀರವ್‌ ಮೋದಿ, 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇವರ ವಿರುದ್ಧ ಸಿಬಿಐ ಹಾಗೂ ಇ.ಡಿ ತನಿಖೆ ನಡೆಸುತ್ತಿದ್ದು, ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕೇಂದ್ರ ಸರ್ಕಾರವು ಬ್ರಿಟನ್‌ ಸರ್ಕಾರಕ್ಕೆ ಮನವಿ ಮಾಡಿದೆ. ಇವರನ್ನು ಭಾರತವು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದು, ಭಾರತದ ಮನವಿ ಮೇರೆಗೆ 2019ರಲ್ಲಿ ನೀರವ್‌ ಮೋದಿ ಅವರನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿದೆ. ಇದಾದ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಅವರನ್ನು ಹಸ್ತಾಂತರಿಸಬೇಕು ಎಂದು ಆದೇಶಿಸಲಾಗಿದೆ. ಇದನ್ನು ಪ್ರಶ್ನಿಸಿ ನೀರವ್‌ ಕೋರ್ಟ್‌ ಮೊರೆ ಹೋಗಿದ್ದಾರೆ.

ಇದನ್ನೂ ಓದಿ | Sanjay Bhandari | ಭಾರತಕ್ಕೆ ಉದ್ಯಮಿ ಸಂಜಯ್‌ ಭಂಡಾರಿ ಹಸ್ತಾಂತರಿಸಲು ಬ್ರಿಟನ್‌ ಅಸ್ತು, ಕೇಂದ್ರಕ್ಕೆ ಮೊದಲ ಜಯ

Exit mobile version