ನವದೆಹಲಿ: ಬ್ಯಾಂಕುಗಳಲ್ಲಿ ಯಾರೂ ಕ್ಲೈಮ್ ಮಾಡದ (ವಾಪಸ್ ಪಡೆಯದ) ಠೇವಣಿಗಳು ವರ್ಷದಿಂದ ವರ್ಷಕ್ಕೆ ಶೇಕಡಾ 26ರಷ್ಟು ಏರಿಕೆ ಕಂಡು 2024 ರ ಮಾರ್ಚ್ ಅಂತ್ಯದ ವೇಳೆಗೆ 78,213 ಕೋಟಿ ರೂ.ಗೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ವಾರ್ಷಿಕ ವರದಿ ತಿಳಿಸಿದೆ. ಅದೇ ರೀತಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯು ಮಾರ್ಚ್ 2023 ರ ಅಂತ್ಯದ ವೇಳೆಗೆ 62,225 ಕೋಟಿ ರೂಪಾಯಿಗೆ ಏರಿದೆ ಎಂದು ಅದು ಹೇಳಿದೆ.
ಸಹಕಾರಿ ಬ್ಯಾಂಕುಗಳು ಸೇರಿದಂತೆ ಬ್ಯಾಂಕುಗಳು ತಮ್ಮ ಖಾತೆಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳವರೆಗೆ ಯಾರೂ ಕ್ಲೇಮ್ ಮಾಡದೇ ಇರುವ ಖಾತೆಯಲ್ಲಿನ ದುಡ್ಡನ್ನು ಆರ್ಬಿಯ ಠೇವಣಿ ಶಿಕ್ಷಣ ಮತ್ತು ಜಾಗೃತಿ (ಡಿಇಎ) ನಿಧಿಗೆ ವರ್ಗಾಯಿಸುತ್ತವೆ.
ಖಾತೆದಾರರಿಗೆ ಸಹಾಯ ಮಾಡುವ ಕ್ರಮವಾಗಿ ಮತ್ತು ನಿಷ್ಕ್ರಿಯ ಖಾತೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಈ ವರ್ಷದ ಆರಂಭದಲ್ಲಿ ಖಾತೆಗಳು ಮತ್ತು ಠೇವಣಿಗಳನ್ನು ನಿಷ್ಕ್ರಿಯ ಖಾತೆಗಳು ಮತ್ತು ಕ್ಲೈಮ್ ಮಾಡದ ಠೇವಣಿಗಳು ಎಂದು ವರ್ಗೀಕರಿಸಲು ಬ್ಯಾಂಕುಗಳು ಜಾರಿಗೆ ತರಬೇಕಾದ ಕ್ರಮಗಳ ಬಗ್ಗೆ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದನ್ನು ಸಂದರ್ಭಕ್ಕೆ ತಕ್ಕಂತೆ ಅನುಸರಿಬಹುದಾಗಿದೆ.
ಇದನ್ನೂ ಓದಿ: Radhika Merchant : ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹದ ಸ್ಥಳ ಬಹಿರಂಗ; ಇಲ್ಲಿದೆ ವಿವರ
ಖಾತೆಗಳ ನಿಯಮಿತ ಪರಿಶೀಲನೆ, ಅಂಥ ಖಾತೆಗಳ ಮೂಲಕ ವಂಚನೆ ತಡೆಗಟ್ಟುವ ಕ್ರಮಗಳು, ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಕುಂದುಕೊರತೆ ಪರಿಹಾರ ಕಾರ್ಯವಿಧಾನ, ಖಾತೆಗಳನ್ನು ಮರು ಸಕ್ರಿಯಗೊಳಿಸಲು ಅವರ ನಾಮನಿರ್ದೇಶಿತರು ಅಥವಾ ಕಾನೂನುಬದ್ಧ ವಾರಸುದಾರರು ಸೇರಿದಂತೆ ನಿಷ್ಕ್ರಿಯ ಖಾತೆಗಳು ಅಥವಾ ಕ್ಲೈಮ್ ಮಾಡದ ಠೇವಣಿಗಳ ಗ್ರಾಹಕರನ್ನು ಪತ್ತೆಹಚ್ಚಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಲಾಗಿತ್ತು. ಕ್ಲೇಮ್ಗಳ ಇತ್ಯರ್ಥ ಅಥವಾ ಖಾತೆ ಮುಚ್ಚಲು ಅನುಸರಿಸಬೇಕಾದ ಪ್ರಕ್ರಿಯೆಗಳಿಗೆ ಆರ್ಸಿಬಿ ಬ್ಯಾಂಕುಗಳಿಗೆ ಸಲಹೆ ನೀಡಿದೆ.
ಈ ಸೂಚನೆಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ಲೈಮ್ ಮಾಡದ ಠೇವಣಿಗಳ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಅಂತಹ ಠೇವಣಿಗಳನ್ನು ಅವುಗಳ ನಿಜವಾದ ಮಾಲೀಕರು / ಹಕ್ಕುದಾರರಿಗೆ ಹಿಂದಿರುಗಿಸಲು ಬ್ಯಾಂಕುಗಳು ಮತ್ತು ರಿಸರ್ವ್ ಬ್ಯಾಂಕ್ ಕೈಗೊಂಡ ಪ್ರಯತ್ನಗಳು ಮತ್ತು ಉಪಕ್ರಮಗಳಿಗೆ ಪೂರಕವಾಗಿತ್ತು. ಪರಿಷ್ಕೃತ ಸೂಚನೆಗಳು ಎಲ್ಲಾ ವಾಣಿಜ್ಯ ಬ್ಯಾಂಕುಗಳು (ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸೇರಿದಂತೆ) ಮತ್ತು ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ಅನ್ವಯಿಸುತ್ತವೆ ಮತ್ತು ಏಪ್ರಿಲ್ 1, 2024 ರಿಂದ ಜಾರಿಗೆ ಬಂದಿವೆ.