ಹೈದರಾಬಾದ್: ತಾಳಿ ಕಟ್ಟುವ ಮೊದಲು ವಧುವಿನ ಕಡೆಯವರು ಹೇಳಿದಷ್ಟು ವರದಕ್ಷಿಣೆ ಕೊಡಲಿಲ್ಲ ಎಂದು, ಕಾರು ಕೊಡಿಸಲಿಲ್ಲ ಎಂದು ಮದುವೆ ರದ್ದಾದ ಉದಾಹರಣೆಗಳಿವೆ. ಇತ್ತೀಚೆಗೆ ಇಂತಹ ಉದಾಹರಣೆಗಳ ಸಂಖ್ಯೆಯೂ ಕಡಿಮೆಯಾಗಿದೆ. ಆದರೆ, ತೆಲಂಗಾಣದಲ್ಲಿ ಮದುವೆ ವೇಳೆ ಮಾಡಲಾದ ಮಾಂಸದ (ಮಟನ್) ಅಡುಗೆಯಲ್ಲಿ (ಬೀಗರೂಟ) ನಲ್ಲಿ ಮೂಳೆ ಇರಲಿಲ್ಲ ಎಂದು ವರನ ಕಡೆಯವರು ಜಗಳ ತೆಗೆದಿದ್ದಾರೆ. ಅಷ್ಟೇ ಅಲ್ಲ, ಒಂದು ನಲ್ಲಿ ಮೂಳೆಗಾಗಿ ವರನ ಸಂಬಂಧಿಕರು ಮದುವೆಯನ್ನೇ ರದ್ದುಗೊಳಿಸಿದ್ದಾರೆ. ಇದರಿಂದಾಗಿ ವರನ ಕಡೆಯವರ ಮೇಲೆ ವಧುವಿನ ಕಡೆಯವರು ಹಿಡಿಶಾಪ ಹಾಕಿದ್ದಾರೆ.
ಹೌದು, ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಇಂತಹದ್ದೊಂದು ಹೀನ ಕೃತ್ಯ ನಡೆದಿದೆ. ನಿಜಾಮಾಬಾದ್ ಜಿಲ್ಲೆಯ ವಧು ಹಾಗೂ ಜಗ್ತಿಯಾಲ್ ಜಿಲ್ಲೆಯ ವರನಿಗೆ ನವೆಂಬರ್‌ನಲ್ಲಿ ಮದುವೆ ಫಿಕ್ಸ್ ಆಗಿತ್ತು. ವಧುವಿನ ಕಡೆಯವರೇ ಮದುವೆಯ ಜವಾಬ್ದಾರಿ ಹೊತ್ತಿದ್ದರು. ಮದುವೆ ದಿನ ಮಾಂಸದಡುಗೆ ಮಾಡಿ, ಅದರಲ್ಲೂ ಮಟನ್ ಮಾಡಿಸಿ ಎಂಬುದು ವರನ ಕಡೆಯವರ ಬೇಡಿಕೆಯಾಗಿತ್ತು. ಹೇಗಾದರೂ ಆಗಲಿ, ಮದುವೆ ಮುಗಿದರೆ ಸಾಕು ಎಂದು ಭಾವಿಸಿದ ವರನ ಕಡೆಯವರು ಮಾಂಸದೂಟಕ್ಕೆ ಒಪ್ಪಿದ್ದಾರೆ.
ಮದುವೆ ದಿನ ಆಗಿದ್ದೇನು?
ಮದುವೆ ದಿನ ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು. ಸಾಲಾಗಿ ಕುಳಿತು ಎಲ್ಲರೂ ಊಟ ಮಾಡುತ್ತಿದ್ದರು. ಇದೇ ವೇಳೆ ವರನ ಕಡೆಯ ವ್ಯಕ್ತಿಯೊಬ್ಬ ಮಾಂಸದಲ್ಲಿ ನಲ್ಲಿ ಮೂಳೆ ಹುಡುಕಿದ್ದಾನೆ. ಎಷ್ಟು ಹುಡುಕಿದರೂ ನಲ್ಲಿ ಮೂಳೆ ಸಿಗದ ಕಾರಣ ಆತ ವಧುವಿನ ಕಡೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇದೇ ವೇಳೆ ವರ ಹಾಗೂ ವಧುವಿನ ಕಡೆಯವರ ಮಧ್ಯೆ ವಾಗ್ವಾದ ನಡೆದಿದೆ. ಪ್ರಕರಣವು ಸ್ಥಳೀಯ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಠಾಣೆಯಲ್ಲಿಯೂ ಎರಡೂ ಕಡೆಯವರು ಜಗಳ ಆಡಿದ್ದಾರೆ.
ಇದನ್ನೂ ಓದಿ: Raichur News: ಕ್ಷೌರಿಕ ವೃತ್ತಿಗೆ ಅವಮಾನ: ಶಾಮನೂರು ಶಾಸಕ ಸ್ಥಾನ ರದ್ದುಪಡಿಸಲು ಆಗ್ರಹ
ನಲ್ಲಿ ಮೂಳೆಗಾಗಿ ಜಗಳ ಆಡಬೇಡಿ, ಮುಹೂರ್ತದ ಸಮಯಕ್ಕೆ ತಕ್ಕಂತೆ ವರ ತಾಳಿ ಕಟ್ಟಲಿ ಎಂದು ಪೊಲೀಸರು ತಿಳಿಹೇಳಿದ್ದಾರೆ. ಆದರೆ, ಸಂಧಾನಕ್ಕೆ ಒಪ್ಪದ ವರನ ಕಡೆಯವರು ಅಲ್ಲೂ ವಾಗ್ವಾದ ನಡೆಸಿದ್ದಾರೆ. ಕೊನೆಗೆ, ನಮಗೆ ನಲ್ಲಿ ಮೂಳೆ ಬಡಿಸದೆ ಅವಮಾನ ಮಾಡಿದ್ದಾರೆ ಎಂದು ಮದುವೆಯನ್ನೇ ರದ್ದುಗೊಳಿಸಿದ್ದಾರೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಬಳಗಂ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಮಾಂಸದ ಊಟಕ್ಕಾಗಿ ನಡೆಯುವ ಗಲಾಟೆಯು ಮದುವೆಯನ್ನೇ ಕ್ಯಾನ್ಸಲ್ ಮಾಡಿಸುವ ಕಥಾಹಂದರವುಳ್ಳ ಸಿನಿಮಾ ಹಿಟ್ ಆಗಿತ್ತು. ಸಿನಿಮಾದ ಬೆನ್ನಲ್ಲೇ ಮಾಂಸದೂಟಕ್ಕಾಗಿ ನಿಜವಾಗಿಯೂ ಮದುವೆಯೊಂದು ಮುರಿದುಬಿದ್ದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ