Site icon Vistara News

Uniform Civil Code: ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು ಸಮಾನ ನಾಗರಿಕ ಸಂಹಿತೆ ವಿಧೇಯಕ ಮಂಡನೆ

pushkar singh dhami

ಹೊಸದಿಲ್ಲಿ: ಉತ್ತರಾಖಂಡ ಸರ್ಕಾರ ವಿಧಾನಸಭೆಯಲ್ಲಿ (Uttarakhand Assembly) ಇಂದು ಏಕರೂಪ ನಾಗರಿಕ ಸಂಹಿತೆಯ (Uniform Civil Code – UCC – ಯುಸಿಸಿ) ಅಂತಿಮ ಕರಡನ್ನು ಮಂಡಿಸಲಿದೆ. ರಾಜ್ಯ ಸಚಿವ ಸಂಪುಟದಲ್ಲಿ ಇದನ್ನು ಕೆಲವೇ ದಿನಗಳ ಹಿಂದೆ ಅಂಗೀಕರಿಸಲಾಗಿತ್ತು.

UCCಯು ಭಾರತದ ಎಲ್ಲಾ ನಾಗರಿಕರಿಗೆ ಅನ್ವಯಿಸುವ ಸಾಮಾನ್ಯ ಕಾನೂನುಗಳನ್ನು ಸೂಚಿಸುತ್ತದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರ ಸೇರಿದಂತೆ ಹತ್ತು ಹಲವು ವೈಯಕ್ತಿಕ ವಿಷಯಗಳನ್ನು ಧರ್ಮನಿರಪೇಕ್ಷವಾಗಿ ಜೋಡಿಸುತ್ತದೆ.

ಈ ವಿಧೇಯಕ ಅಂಗೀಕಾರಗೊಂಡು ಕಾನೂನು ಜಾರಿಗೆ ಬಂದರೆ, ಉತ್ತರಾಖಂಡವು ಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯವಾಗಲಿದೆ. ಅಸ್ಸಾಂ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ಇತರ ಬಿಜೆಪಿ ಆಡಳಿತದ ರಾಜ್ಯಗಳು ಇದೇ ರೀತಿ ಕಾಯಿದೆ ತರಲು ಆಸಕ್ತಿ ವ್ಯಕ್ತಪಡಿಸಿವೆ. ಗೋವಾ ರಾಜ್ಯ ಪೋರ್ಚುಗೀಸ್ ಆಳ್ವಿಕೆಯಲ್ಲಿದ್ದಾಗಿನಿಂದಲೂ ಸಾಮಾನ್ಯ ನಾಗರಿಕ ಸಂಹಿತೆಯನ್ನು ಹೊಂದಿದೆ.

ಉತ್ತರಾಖಂಡ ವಿಧಾನಸಭೆಯಲ್ಲಿ ಮಂಡಿಸಲಿರುವ ಕರಡು ಮಸೂದೆಯಲ್ಲಿ ಬಹುಪತ್ನಿತ್ವವನ್ನು ಸಂಪೂರ್ಣ ನಿಷೇಧಿಸುವಂತೆ ಸರ್ಕಾರ ಕೋರಿದೆ ಎಂದು ಮೂಲಗಳು ತಿಳಿಸಿವೆ. ಲಿವ್-ಇನ್ ಜೋಡಿಗಳು ತಮ್ಮ ಸಂಬಂಧವನ್ನು ನೋಂದಾಯಿಸುವ ಕುರಿತು ಸಹ ಒಂದು ನಿಬಂಧನೆ ಇದೆ. ಕಾಯಿದೆಯಲ್ಲಿ, ಪ್ರತಿಯೊಬ್ಬರಿಗೂ ದತ್ತು ಹಕ್ಕು ಸಿಗಲಿದೆ. ಮಗ ಮತ್ತು ಮಗಳಿಬ್ಬರಿಗೂ ಸಮಾನವಾದ ಉತ್ತರಾಧಿಕಾರದ ಹಕ್ಕುಗಳನ್ನು ಸ್ಥಾಪಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಜೂನ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏಕರೂಪ ನಾಗರಿಕ ಸಂಹಿತೆಗೆ ದೊಡ್ಡ ಒತ್ತು ನೀಡಿದ್ದರು. “ದೇಶವು ಎರಡು ಕಾನೂನುಗಳ ಮೇಲೆ ನಡೆಯಲು ಸಾಧ್ಯವಿಲ್ಲ. ವಿಭಿನ್ನ ಪ್ರಜೆಗಳಿಗೆ ವಿಭಿನ್ನವಾದ ಕೌಟುಂಬಿಕ ನಿಯಮಗಳನ್ನು ಹೊಂದುವುದು ಕೆಲಸ ಮಾಡುವುದಿಲ್ಲ” ಎಂದಿದ್ದರು ಮೋದಿ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (pushkar singh dhami) ಅವರು ರಚಿಸಿದ್ದ ಸಮಿತಿಯು ಈ ವರ್ಷದ ಆರಂಭದಲ್ಲಿ ಕರಡನ್ನು ಸಿದ್ಧಪಡಿಸಿದೆ. ಸಮಿತಿಯು 2 ಲಕ್ಷಕ್ಕೂ ಹೆಚ್ಚು ಜನರು ಮತ್ತು ಪ್ರಮುಖ ಪಾಲುದಾರರೊಂದಿಗೆ ಚರ್ಚಿಸಿದೆ.

ಉತ್ತರಾಖಂಡಕ್ಕೆ ಏಕರೂಪ ನಾಗರಿಕ ಸಂಹಿತೆ 2022ರ ವಿಧಾನಸಭಾ ಚುನಾವಣೆಯಲ್ಲಿ ಪುಷ್ಕರ್‌ ಧಾಮಿ ಅವರ ಪ್ರಮುಖ ಚುನಾವಣಾ ಭರವಸೆಯಾಗಿತ್ತು. ಅನೇಕ ರಾಜ್ಯಗಳು ಉತ್ತರಾಖಂಡದ ಮಾದರಿಯನ್ನು ಅನುಸರಿಸಲಿವೆ; ಯುಸಿಸಿಯನ್ನು ಜಾರಿಗೆ ತರಲು ರಾಜ್ಯವು ಒದಗಿಸಿದ ಮಾದರಿಯನ್ನು ಬಳಸಬೇಕೆಂದು ಮುಖ್ಯಮಂತ್ರಿ ಆಶಿಸಿದ್ದಾರೆ.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಉತ್ತರಾಖಂಡ ಸಂಪುಟ ಗ್ರೀನ್‌ ಸಿಗ್ನಲ್;‌ ಜಾರಿಯೊಂದೇ ಬಾಕಿ

Exit mobile version