ಬೆಂಗಳೂರು: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ಇಂದು ಮಂಡನೆಯಾಗಲಿದ್ದು, ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಏನಿರಲಿದೆ ಎಂಬ ಕುತೂಹಲ ಮೂಡಿಸಿದೆ. ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಹಲವು ಕೊಡುಗೆಗಳನ್ನು ನಿರೀಕ್ಷಿಸಲಾಗಿದೆ.
ಬೆಳಿಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕ ಹಿಂಜರಿತಕ್ಕೆ ಹೊಸ ಟಾನಿಕ್, ಆತ್ಮನಿರ್ಭರಕ್ಕೆ ಹೆಚ್ಚು ಒತ್ತು ನೀಡುವ ಕುರಿತು ಊಹಿಸಲಾಗಿದೆ.
ವಿಶ್ವದಲ್ಲಿ ಆರ್ಥಿಕತೆ ಕುಸಿತ- ದುಷ್ಪರಿಣಾಮ ತಪ್ಪಿಸಲು ಮೇಕ್ ಇನ್ ಇಂಡಿಯಾಗೆ ಒತ್ತು, ಆಮದು ಆಗುತ್ತಿದ್ದ ವಸ್ತುಗಳು ನಮ್ಮಲ್ಲೇ ತಯಾರಿ, ಆ ಮೂಲಕ ಆರ್ಥಿಕತೆ ಸದೃಢಗೊಳಿಸಲು ಆದ್ಯತೆ, ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಪರಿಚಯ- ತಂತ್ರಜ್ಞಾನ ಆವಿಷ್ಕಾರಗಳಿಗೆ ಡಿಬಿಟಿ ಮೂಲಕ ನೇರ ಸಬ್ಸಿಡಿ ಸಾಧ್ಯತೆ, ಹೊಸ ಶಿಕ್ಷಣ ನೀತಿ- ಪರಿಣಾಮಕಾರಿ ಜಾರಿಗೆ ಆದ್ಯತೆ, ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಅವಕಾಶ, ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್‌ಭವ ಯೋಜನೆಯಂತೆ ಮತ್ತಷ್ಟು ಸೇರ್ಪಡೆಗಳ ಸಾಧ್ಯತೆ, ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಹೊಸ ಆಲೋಚನೆಗಳು, ಗ್ರೀನ್ ಎನರ್ಜಿಗೆ ಹೊಸ ಕಾರಿಡಾರ್ ಪ್ರಕಟಿಸುವ ಸಾಧ್ಯತೆಗಳನ್ನು ಊಹಿಸಲಾಗಿದೆ.
ಈ ಬಾರಿ ಬಜೆಟ್‌ನಲ್ಲಿ ರಾಜ್ಯಕ್ಕೆ ಮೋದಿ ಏನು ಗಿಫ್ಟ್ ಕೊಡಲಿದ್ದಾರೆ ಎಂಬುದು ಕುತೂಹಲಕರವಾಗಿದೆ. ಹಲವು ವರ್ಷಗಳ ಬೇಡಿಕೆಯಾಗಿರುವ ಏಮ್ಸ್ ಅನ್ನು ಕರ್ನಾಟಕಕ್ಕೆ ಘೋಷಿಸುವ ಸಾಧ್ಯತೆ ಇದೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯಾಗಿ ಮಾನ್ಯತೆ ನೀಡಬಹುದು. ರೈಲ್ವೆ ಕಾಮಗಾರಿಗಳಿಗೆ ಹೆಚ್ಚು ಅನುದಾನ ಸಾಧ್ಯತೆ (ಪ್ರಸ್ತುತ 2,750 ಕೋಟಿ ಇದೆ) ಇದೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು ಸರಿಯಾಗಿ ಬಂದಿಲ್ಲ. ರಾಜ್ಯದ ಯೋಜನೆಗಳಿಗೆ ಸರಿಯಾಗಿ ಅನುದಾನ ಬಿಡುಗಡೆ ಆಗುತ್ತಿಲ್ಲ. ಚುನಾವಣೆ ನೆಪದಲ್ಲಾದರೂ ರಾಜ್ಯಕ್ಕೆ ಇವು ಸಿಗಬಹುದೇ ಎಂಬ ನಿರೀಕ್ಷೆ. ರಾಜ್ಯದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಸಿಗಬೇಕು. ಮೂಲಭೂತ ಕಚ್ಚಾ ಸಾಮಗ್ರಿಯಾಗಿರುವ ಉಕ್ಕಿನ ಪೂರೈಕೆಗೆ ಅವಕಾಶ ನೀಡಬಹುದು. ಬೆಂಗಳೂರು ಮೆಟ್ರೋ ವಿಸ್ತರಣೆಗೆ ಹಣಕಾಸಿನ ನೆರವು, ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೆ ಯೋಜನೆಗೆ ಅನುದಾನ ನೀಡಬಹುದು ಎಂಬ ನಿರೀಕ್ಷೆ ಇದೆ.
ಇದನ್ನೂ ಓದಿ: Budget 2023: ಸಂಸತ್ತಿನಲ್ಲಿ ಬುಧವಾರ ಕೇಂದ್ರ ಬಜೆಟ್ ಮಂಡನೆ, ಜನಪರ ಘೋಷಣೆ ನಿರೀಕ್ಷೆ
ರಾಜ್ಯದ ನೀರಾವರಿ ಯೋಜನೆಗಳಿಗೂ ಸಹಕಾರ ಸಿಗಬೇಕಿದೆ. ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆ, ಮಹದಾಯಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕಿದೆ. ಇದರಿಂದ ಶೇಕಡಾ 90ರಷ್ಟು ಅನುದಾನ ಕೇಂದ್ರ ಸರ್ಕಾರದಿಂದಲೇ ಸಿಗಲಿದೆ. ಕರ್ನಾಟಕದಲ್ಲಿ ಸುಮಾರು 360 ಕಿಲೋ ಮೀಟರ್ ಉದ್ದದ ಕಡಲ ತೀರ ಅಭಿವೃದ್ಧಿಯಾಗಿಲ್ಲ. ರಾಜ್ಯದ ಬಂದರುಗಳು ಕೂಡ ಸಮರ್ಪಕವಾದ ಅಭಿವೃದ್ಧಿ ಕಂಡಿಲ್ಲ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಬಂದರುಗಳ ಅಭಿವೃದ್ಧಿ ನಿರೀಕ್ಷೆ ಇದೆ.
ರಾಜಕೀಯ ಅನಿಶ್ಚಿತತೆಯ ಕಾರಣಕ್ಕೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಗುತ್ತಿಲ್ಲ. ಜೊತೆಗೆ ನಿರಂತರವಾಗಿ ಬರ ಮತ್ತು ಪ್ರವಾಹಗಳು ಕಾಡುತ್ತಿವೆ. ರಾಜ್ಯ ಸರ್ಕಾರದ ಮೇಲಿನ ಸಾಲದ ಹೊರೆ ಹೆಚ್ಚಾಗುತ್ತಿದೆ. ರಾಜ್ಯದ 23 ಜಿಲ್ಲೆಗಳ 150ಕ್ಕೂ ಹೆಚ್ಚು ಬರಪೀಡಿತ ತಾಲೂಕುಗಳಿವೆ. ಕರ್ನಾಟಕದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಯೋಜನೆಗಳನ್ನು ಜಾರಿಗೊಳಿಸಲು ಹೆಚ್ಚಿನ ನಿಧಿ ನೀಡಬಹುದು. ಬೆಂಗಳೂರು ವಾಣಿಜ್ಯ ಬೆಳವಣಿಗೆಯನ್ನು ಕಾಣುತ್ತಿರುವ ಪ್ರಮುಖ ನಗರವಾದ ಕಾರಣ ಕೇಂದ್ರ ಸರ್ಕಾರವು ಬೆಂಗಳೂರಿಗೆ ಅಧಿಕ ಒತ್ತು ನೀಡಬಹುದು. ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ತಮಿಳುನಾಡಿಗೆ ಫಿನ್‌ಟೆಕ್ ಸಿಟಿ ಯೋಜನೆಗಳನ್ನು ಜಾರಿ ಮಾಡಿದಂತೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೂ ಯೋಜನೆಗಳನ್ನು ಜಾರಿಗೊಳಿಸುವ ನಿರೀಕ್ಷೆಯಿದೆ. ನಗರಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ದೃಷ್ಟಿಯಿಂದ ಸ್ಮಾರ್ಟ್ ಸಿಟಿಗಳ ಪಟ್ಟಿ ಹೆಚ್ಚಿಸಬಹುದು.
ಇದನ್ನೂ ಓದಿ: Budget 2023 : ಜನ ಜೀವನ ಗುಣಮಟ್ಟ ಸುಧಾರಣೆಯೇ ಬಜೆಟ್ ಗುರಿ, ಚುನಾವಣೆ ಅಲ್ಲ: ಕೇಂದ್ರ ಸಚಿವ ಪಂಕಜ್ ಚೌಧುರಿ