Site icon Vistara News

Union Budget 2023: ನಿರ್ಮಲಾ ಸೀತಾರಾಮನ್‌ ತಂಡದಲ್ಲಿ ಇರುವವರು ಇವರೇ ನೋಡಿ

Budget 2024, Why did Nirmala Sitharaman use bahi khata instead of briefcase

ನವ ದೆಹಲಿ: 2023ರ ಬಜೆಟ್‌ ಮಂಡಿಸುತ್ತಿರುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹಿಂದೆ ಆರ್ಥಿಕ ತಜ್ಞರ ಬಲವಾದ ಒಂದು ತಂಡವೇ ಇದ್ದು, ಈ ಸಾಲಿನ ಬಜೆಟ್‌ ತಯಾರಿಸಲು ಅದು ಹಗಲಿರುಳು ಶ್ರಮಿಸಿದೆ.

ಇದು ವಿತ್ತ ಸಚಿವೆಯಾಗಿ ನಿರ್ಮಲಾ ಅವರ ನಾಲ್ಕನೇ ಬಜೆಟ್‌ ಮಂಡನೆಯಾಗಿದೆ. ಈ ಹಿಂದಿನ ಎರಡು ವರ್ಷಗಳ ಕೊರೊನಾ ಸಾಂಕ್ರಾಮಿಕದ ಕ್ಲಿಷ್ಟಕರ ಅವಧಿಯಲ್ಲಿ ಬಜೆಟ್‌ ಮಂಡಿಸಿ, ದೇಶವನ್ನು ಮುನ್ನಡೆಸಿದ ಹೆಗ್ಗಳಿಕೆ ಇವರದಾಗಿದೆ. ಹಲವರು ಪರಿಹಾರ ಹಾಗೂ ಪುನರುತ್ಥಾನ ಪ್ಯಾಕೇಜ್‌ಗಳನ್ನು ಅವರು ಮಂಡಿಸಿದ್ದರು. ಪ್ರಸ್ತುತ ಸಾಲಿನಲ್ಲಿ ಅವರು ಜಾಗತಿಕ ಆರ್ಥಿಕ ಹಿನ್ನಡೆಯ ಆತಂಕವನ್ನು ಎದುರಿಸಿದ್ದಾರೆ.

ಅವರ ತಂಡದಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ನೋಡೋಣ.

ಟಿ.ವಿ. ಸೋಮನಾಥನ್‌, ವಿತ್ತ ಕಾರ್ಯದರ್ಶಿ

ಇವರು 1987ರ ಬ್ಯಾಚ್‌ನ ತಮಿಳುನಾಡು ಕ್ಯಾಡರ್‌ನ ಐಎಎಸ್‌ ಅಧಿಕಾರಿ. ಈ ಹಿಂದೆ 2015-17ರಲ್ಲಿ ಪ್ರಧಾನಿ ಕಾರ್ಯಾಲಯ ಹಾಗೂ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿದ್ದರು. ಇವರ ಅವಧಿಯಲ್ಲಿ ಕ್ಯಾಪಿಟಲ್‌ ವೆಚ್ಚಗಳ ಹೆಚ್ಚಳ ಹಾಗೂ ರಾಜ್ಯ ವಿನಿಯೋಗದ ಏರಿಕೆ ಸಾಧೀತವಾಗಿತ್ತು. ಎಕನಾಮಿಕ್ಸ್‌ನಲ್ಲಿ ಡಾಕ್ಟರೇಟ್‌ ಪಡೆದಿದ್ದಾರೆ. ಕಂಪನಿ ಸೆಕ್ರೆಟರಿಯೂ ಆಗಿದ್ದಾರೆ.

ವಿ.ಅನಂತ ನಾಗೇಶ್ವರನ್, ಮುಖ್ಯ ಆರ್ಥಿಕ ಸಲಹೆಗಾರ

ವಿ. ಅನಂತ ನಾಗೇಶ್ವರನ್ ಅವರು 2022-23ರ ಬಜೆಟ್ ಮಂಡಿಸುವ ಕೆಲವೇ ದಿನಗಳ ಮೊದಲು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಆಗಿ ನೇಮಕವಾದವರು. 2022-23ರ ಆರ್ಥಿಕ ಸಮೀಕ್ಷೆಯ ಕರಡನ್ನು ಅವರು ತಯಾರಿಸಿದ್ದಾರೆ. ನಾಗೇಶ್ವರನ್ ಅವರು ಮ್ಯಾಸಚೂಸೆಟ್ಸ್ ಆಮ್ಹೆರ್ಸ್ಟ್ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಪಿಎಚ್‌ಡಿ ಮತ್ತು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಿಂದ ಎಂಬಿಎ ಪಡೆದಿದ್ದಾರೆ.

ಅಜಯ್‌ ಸೇಠ್‌, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ

ಕರ್ನಾಟಕ ಕೇಡರ್‌ನ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಹಣಕಾಸು ಸಚಿವರ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರು. ಎಲ್ಲಾ ಡೇಟಾವನ್ನು ಒಟ್ಟುಗೂಡಿಸುವ ಬಜೆಟ್ ವಿಭಾಗವು ಅವರ ಮೇಲ್ವಿಚಾರಣೆಯಲ್ಲಿದೆ. G20 ದೇಶಗಳ ಕೇಂದ್ರ ಬ್ಯಾಂಕ್ ಮತ್ತು ಹಣಕಾಸು ಸಚಿವರ ಸಭೆಗಳ ಸಹ-ಅಧ್ಯಕ್ಷತೆಯ ಹೆಚ್ಚುವರಿ ಜವಾಬ್ದಾರಿಯನ್ನು ಸೇಠ್ ಹೊಂದಿದ್ದಾರೆ.

ತುಹಿನ್‌ ಕಾಂತ ಪಾಂಡೆ, ಹೂಡಿಕೆ ಸಚಿವಾಲಯ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ (DIPAM) ಕಾರ್ಯದರ್ಶಿ

ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ತನ್ನ ಹೂಡಿಕೆಯ ಗುರಿಗಳನ್ನು ಹದಗೊಳಿಸಿದೆ. ಕೊರೊನಾವೈರಸ್ ಸಾಂಕ್ರಾಮಿಕದಿಂದಾಗಿ ಅದರ ಯೋಜನೆ ಹಿನ್ನಡೆ ಕಂಡಿದೆ. ಆದರೆ, ಏರ್ ಇಂಡಿಯಾ ಮಾರಾಟ ತುಹಿನ್ ಕಾಂತಾ ಪಾಂಡೆ ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು.

ಸಂಜಯ್ ಮಲ್ಹೋತ್ರಾ, ಕಂದಾಯ ಕಾರ್ಯದರ್ಶಿ

ರಾಜಸ್ಥಾನ ಕೇಡರ್‌ನ 1990ರ ಬ್ಯಾಚ್‌ನ ಐಎಎಸ್ ಅಧಿಕಾರಿ ಸಂಜಯ್ ಮಲ್ಹೋತ್ರಾ ಅವರನ್ನು ಇತ್ತೀಚೆಗೆ ಹಣಕಾಸು ಸೇವೆಗಳ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲಾಯಿತು. ಜಿಎಸ್‌ಟಿ ಪರಿಹಾರ ಸೇರಿದಂತೆ ಆದಾಯದ ನಿರೀಕ್ಷೆಗಳನ್ನು ಬ್ಯಾಲೆನ್ಸ್‌ ಮಾಡಬೇಕಾದ ಪ್ರಯಾಸಕರ ಕೆಲಸವನ್ನು ಅವರು ಎದುರಿಸಬೇಕಿದೆ.

ವಿವೇಕ್ ಜೋಶಿ, ಕಾರ್ಯದರ್ಶಿ, ಹಣಕಾಸು ಸೇವೆಗಳು

ಬ್ಯಾಂಕಿಂಗ್ ವಲಯವನ್ನು ಆಳುವ ಸಚಿವಾಲಯದಲ್ಲಿ ಹೊಸ ಮುಖ, ವಿವೇಕ್ ಜೋಶಿ ಸಂಜಯ ಮಲ್ಹೋತ್ರಾ ಅವರ ಉತ್ತರಾಧಿಕಾರಿಯಾಗಿ ಬಂದವರು. ಹರಿಯಾಣ ಕೇಡರ್‌ನ 1989ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ಇವರು ಜಿನೀವಾ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್‌ನಿಂದ ಅಂತರಾಷ್ಟ್ರೀಯ ಅರ್ಥಶಾಸ್ತ್ರದಲ್ಲಿ ಎಂಎ ಮತ್ತು ಪಿಎಚ್‌ಡಿ ಪಡೆದಿದ್ದಾರೆ.

ಇದನ್ನೂ ಓದಿ: Union Budget 2023 : ಕೃಷಿಕರ ಸಮಸ್ಯೆ ಬಗೆಹರಿಸುವ ಸ್ಟಾರ್ಟಪ್‌ಗೆ ಪ್ರೋತ್ಸಾಹ; ಕೇಂದ್ರದಿಂದ ಹೊಸ ನಿಧಿ ಸ್ಥಾಪನೆ

ನಿತಿನ್ ಗುಪ್ತಾ, ಸಿಬಿಡಿಟಿ ಅಧ್ಯಕ್ಷ

ನಿತಿನ್ ಗುಪ್ತಾ ಅವರು 1986ರ ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯಾಗಿದ್ದು, ಆದಾಯ ತೆರಿಗೆ ಇಲಾಖೆಯ ಆಡಳಿತ ಮಂಡಳಿಯಾದ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (CBDT) ಮುಖ್ಯಸ್ಥರಾಗಿದ್ದಾರೆ. ಪ್ರಸ್ತುತ CBDTಯಲ್ಲಿ ಸದಸ್ಯರಾಗಿ (ತನಿಖೆ) ಸೇವೆ ಸಲ್ಲಿಸುತ್ತಿದ್ದಾರೆ.

ವಿವೇಕ್ ಜೋಹ್ರಿ, ಅಧ್ಯಕ್ಷರು, ಸಿಬಿಐಸಿ

ವಿವೇಕ್ ಜೋಹ್ರಿ ಅವರು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ (CBIC) ಅಧ್ಯಕ್ಷ ಮತ್ತು ಭಾರತ ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿದ್ದಾರೆ. 1985ರ ಬ್ಯಾಚ್‌ನ IRS ಅಧಿಕಾರಿಯಾದ ಜೋಹ್ರಿ ಅವರು ಪರೋಕ್ಷ ತೆರಿಗೆ ಆಡಳಿತದ ಹಲವಾರು ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜಿಎಸ್‌ಟಿ ಸದಸ್ಯರಾಗಿ ಅವರ ಅಧಿಕಾರಾವಧಿಯಲ್ಲಿ ಜಿಎಸ್‌ಟಿ ಕಾನೂನು ಮತ್ತು ಕಾರ್ಯವಿಧಾನದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ: Union Budget 2023: ಇದುವರೆಗಿನ 5 ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್​ ಧರಿಸಿದ್ದ ಸೀರೆಗಳು ವಿವರ ಇಲ್ಲಿದೆ

Exit mobile version