ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ (Union budget 2023) ಆದಾಯ ತೆರಿಗೆ ದರ ಮತ್ತು ಶ್ರೇಣಿಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಘೋಷಣೆ ಪ್ರಕಾರ, ೨೦೨೩-೨೪ನೇ ಸಾಲಿನಿಂದ ವಾರ್ಷಿಕ ೭ ಲಕ್ಷ ರೂ.ವರೆಗೆ ಆದಾಯ ಹೊಂದಿದವರಿಗೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ. ಮತ್ತು ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿದವರು ಕಟ್ಟುವ ತೆರಿಗೆ ಪ್ರಮಾಣವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಇದೆಲ್ಲವೂ ಹೊಸ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುವವರಿಗೆ ಅನ್ವಯವಾಗುತ್ತದೆ. ಮುಂದೆ ಬಹುತೇಕ ಹೊಸ ತೆರಿಗೆ ಪದ್ಧತಿಯೇ ಅನ್ವಯವಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜತೆಗೆ ಹಳೆ ಪದ್ಧತಿ ಎಲ್ಲಿಯವರೆಗೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಮೂಲಕ ಇನ್ನು ಮುಂದೆ ಕೇವಲ ಒಂದೇ ತೆರಿಗೆ ಪದ್ಧತಿ ಇರುತ್ತದೆ ಎಂದಿದ್ದಾರೆ.
ಏಳು ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಇಲ್ಲ
ಈ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಹಿತವಾಗುವ ಅತಿ ಮುಖ್ಯ ಘೋಷಣೆ ಎಂದರೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಐದು ಲಕ್ಷದಿಂದ ಏಳು ಲಕ್ಷ ರೂ.ಗಳಿಗೆ ಏರಿಸಿರುವುದು. ಇದುವರೆಗೆ ೨.೫ ಲಕ್ಷ ರೂ.ವರೆಗೆ ಶೂನ್ಯ ತೆರಿಗೆ ಮತ್ತು ಐದು ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. ೫ ತೆರಿಗೆ ಇತ್ತು. ಅಂದರೆ, ಐದು ಲಕ್ಷ ರೂ.ವರೆಗೆ ೧೨,೫೦೦ ರೂ. ತೆರಿಗೆ ಬೀಳುತ್ತಿತ್ತು. ಆದರೆ, ಕೇಂದ್ರ ಸರಕಾರ ಈ ೧೨,೫೦೦ ರೂ.ಯನ್ನು ರಿಬೇಟ್ ಎಂದು ಘೋಷಿಸಿತ್ತು. ಹೀಗಾಗಿ, ಐದು ಲಕ್ಷ ರೂ.ವರೆಗೆ ಆದಾಯ ಇರುವವರು ಯಾವುದೇ ತೆರಿಗೆ ಕಟ್ಟಬೇಕಾಗಿರಲಿಲ್ಲ. ಇದೀಗ ಈ ರಿಬೇಟ್ ಪ್ರಮಾಣವನ್ನು ಏಳು ಲಕ್ಷ ರೂ.ವರೆಗೆ ವಿಸ್ತರಿಸಲಾಗಿದೆ. ಅಂದರೆ ಏಳು ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.
ಈ ಬಾರಿ ತೆರಿಗೆ ವಿನಾಯಿತಿ ಮೂಲ ಮಿತಿಯನ್ನು ೨.೫ ಲಕ್ಷದಿಂದ ೩ ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಹೀಗಾಗಿ ಮೂರು ಲಕ್ಷ ರೂ.ವರೆಗೆ ಆದಾಯು ಇರುವವರು ಇನ್‌ಕಂ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಬೇಕಾಗಿಲ್ಲ. ಅದಕ್ಕಿಂತ ಹೆಚ್ಚು ಆದಾಯ ಹೊಂದಿರುವ ಎಲ್ಲರೂ ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ.
ಏಳು ತೆರಿಗೆ ಶ್ರೇಣಿ ಬದಲು ಈಗ ಆರು ಶ್ರೇಣಿ
ಈ ಬಾರಿ ತೆರಿಗೆ ಶ್ರೇಣಿ (Tax slab)ಗಳನ್ನು ಕೂಡಾ ಬದಲಿಸಲಾಗಿದೆ. ಇದುವರೆಗೆ ಆರು ತೆರಿಗೆ ಶ್ರೇಣಿಗಳಿದ್ದರೆ ಅದನ್ನು ಈಗ ಐದಕ್ಕೆ ಇಳಿಸಲಾಗಿದೆ.
ಇದುವರೆಗಿನ ಶ್ರೇಣಿ ವ್ಯವಸ್ಥೆ ಪ್ರಕಾರ,
೧. ೦-೨.೫ ಲಕ್ಷ ರೂ.ವರೆಗೆ – ಶೂನ್ಯ ತೆರಿಗೆ
೨. ೨.೫ ಲಕ್ಷದಿಂದ ೫ ಲಕ್ಷದ ವರೆಗೆ- ೫%
೩. ೫.೦ ಲಕ್ಷದಿಂದ ೭.೫ ಲಕ್ಷ ರೂ.- ೧೦ %
೪. ೭.೫ ಲಕ್ಷದಿಂದ ೧೦ ಲಕ್ಷ ರೂ. – ೧೫%
೫. ೧೦ ಲಕ್ಷದಿಂದ ೧೨.೫ ಲಕ್ಷ ರೂ- ೨೦ %
೬. ೧೨.೫ ಲಕ್ಷದಿಂದ ೧೫ ಲಕ್ಷ ರೂ.- ೨೫%
೭. ೧೫ ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ- ೩೦%
ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದ ಹೊಸ ಪದ್ಧತಿಯ ಪ್ರಕಾರ ಇನ್ನು ಆರು ಶ್ರೇಣಿಗಳು ಮಾತ್ರ ಇರುತ್ತವೆ.
ಇವು ಹೊಸ ಆರು ಶ್ರೇಣಿಗಳು
೧. ಮೂರು ಲಕ್ಷದವರೆಗಿನ ಮೊತ್ತಕ್ಕೆ- ೦%
೨. ೩-೬ ಲಕ್ಷ- ೫%
೩. ೬-೯ ಲಕ್ಷ-೧೦%
೪. ೯-೧೨ ಲಕ್ಷ- ೧೫%
೫. ೧೨-೧೫ ಲಕ್ಷ- ೨೦%
೬. ೧೫ ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ- ೩೦%
ಶ್ರೇಣಿ ಬದಲಾವಣೆಯಿಂದ ಏನು ಲಾಭ?
ಶ್ರೇಣಿ ಬದಲಾವಣೆಯಿಂದ ತೆರಿಗೆ ಪಾವತಿದಾರರಿಗೆ ಸಾಕಷ್ಟು ಲಾಭಗಳಾಗಲಿವೆ. ಹೆಚ್ಚು ಹೆಚ್ಚು ಆದಾಯ ಹೊಂದಿದವರಿಗೆ ಈಗ ಪಾವತಿಸುವ ತೆರಿಗೆ ಪ್ರಮಾಣಕ್ಕಿಂತ ಕಡಿಮೆ ತೆರಿಗೆ ಪಾವತಿಗೆ ಬರಲಿದೆ.
೯ ಲಕ್ಷ ರೂ. ವೇತನವಿದ್ದರೆ ೧೫ ಸಾವಿರ ರೂ. ಕಡಿಮೆ
ಉದಾಹರಣೆಗೆ, ೯ ಲಕ್ಷ ರೂ. ವೇತನ ಇದ್ದವರಿಗೆ ಹಿಂದಿನ ಶ್ರೇಣಿಯಲ್ಲಿ ೬೦ ಸಾವಿರ ರೂ. ತೆರಿಗೆ ವಿಧಿಸಲಾಗುತ್ತಿತ್ತು. ಆದರೆ, ಹೊಸ ಶ್ರೇಣಿಯಲ್ಲಿ ಈಗ ೪೫ ಸಾವಿರ ರೂ. ಮಾತ್ರ. ಅಂದರೆ, ಒಟ್ಟಾರೆ ತೆರಿಗೆ ಪಾವತಿಯಲ್ಲಿ ಶೇ. ೨೫ ಉಳಿತಾಯವಾಗಲಿದೆ. ಒಂದೊಮ್ಮೆ ಒಬ್ಬ ವ್ಯಕ್ತಿಗೆ ೧೫ ಲಕ್ಷ ರೂ. ವಾರ್ಷಿಕ ವೇತನವಿದ್ದರೆ ಇದುವರೆಗೆ ಅವರು ಪಾವತಿಸುವ ಒಟ್ಟು ತೆರಿಗೆ ಮೊತ್ತ ೧,೮೭,೫೦೦ ರೂ. ಆಗಿತ್ತು. ಹೊಸ ಪದ್ಧತಿಯಲ್ಲಿ ಇದು ಶೇ. ೨೦ರಷ್ಟು ಕಡಿಮೆಯಾಗಲಿದೆ.
೧೫ ಲಕ್ಷ ಮೀರಿದವರಿಗೆ ಮಾತ್ರ ಸ್ಟಾಂಡರ್ಡ್ ಡಿಡಕ್ಷನ್
ಕೇಂದ್ರ ಸರಕಾರ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು ೫೦,೦೦೦ದಿಂದ ೫೨,೫೦೦ ರೂ.ಗೆ ಏರಿಸಲಾಗಿದೆ. ಆದರೆ, ಇದರ ಲಾಭ ಸಿಗುವುದು ವರ್ಷಕ್ಕೆ ೧೫ ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿದವರಿಗೆ ಮಾತ್ರ.
ಹಳೆ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ಈಗ ಎರಡು ರೀತಿಯ ತೆರಿಗೆ ಪದ್ಧತಿಗಳಿವೆ. ಒಂದು ಹಳೆಯ ಪದ್ಧತಿ, ಇನ್ನೊಂದು ಹೊಸದು. ಹಳೆಯ ಪದ್ಧತಿಯಲ್ಲಿ ಶೇ. ೨.೫ ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಇಲ್ಲ. ೨.೫ ಲಕ್ಷದಿಂದ ೫ ಲಕ್ಷ ರೂ.ವರೆಗಿನ ಶ್ರೇಣಿಯಲ್ಲಿ ಶೇ. ೫ ತೆರಿಗೆ ಇದೆ. ೫ರಿಂದ ೧೦ ಲಕ್ಷ ರೂ.ವರೆಗಿನ ಆದಾಯಕ್ಕೆ ೨೦% ಮತ್ತು ೧೦ ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ. ೩೦ ತೆರಿಗೆ ಇದೆ.
ಇದನ್ನೂ ಓದಿ : Union Budget 2023: ದೇಶದ ಅಭಿವೃದ್ಧಿ ಪಥಕ್ಕೆ ಹೊಸ ಶಕ್ತಿ ತುಂಬುವ ಬಜೆಟ್ ಇದು ಎಂದ ಪ್ರಧಾನಿ ಮೋದಿ