ನವ ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ನೇ ಸಾಲಿನ ಬಜೆಟ್ ಹೇಳಿಕೆಯನ್ನು ಮಂಡಿಸುವ ಸಂದರ್ಭ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಹೊಸ ತೆರಿಗೆ ಪದ್ಧತಿಯ ಕೆಲವು ಪ್ರಮುಖ ಘೋಷಣೆಗಳು, ಆದಾಯ ತೆರಿಗೆಗೆ ಈಗ ಡೀಫಾಲ್ಟ್ ವ್ಯವಸ್ಥೆ, ಕೆಲವು ವಿನಾಯಿತಿಗಳು ಇತ್ಯಾದಿಗಳು ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರಬಹುದು.
ಹೊಸ ತೆರಿಗೆ ಪದ್ಧತಿ ಇನ್ನು ಮುಂದೆ ಡೀಫಾಲ್ಟ್
ಆದಾಯ ತೆರಿಗೆಗೆ ಹೊಸ ತೆರಿಗೆ ಪದ್ಧತಿ ಇನ್ನು ಮುಂದೆ ಡೀಫಾಲ್ಟ್ ಪದ್ಧತಿಯಾಗಿರಲಿದೆ ಎಂದು ನಿರ್ಮಲಾ ಹೇಳಿದ್ದಾರೆ. ಸ್ವಯಂಪ್ರೇರಿತ ತೆರಿಗೆ ಪಾವತಿಯನ್ನು ಹೆಚ್ಚು ಆಕರ್ಷಕವಾಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ಅಳವಡಿಸಿಕೊಳ್ಳಲಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಆದಾಯವನ್ನು ಸರ್ಕಾರ ಬಿಟ್ಟುಬಿಡಲಿದೆ ಎಂದಿದ್ದಾರೆ. ಹಳೆಯ ಪದ್ಧತಿಯೋ ಹೊಸ ಪದ್ಧತಿಯೋ ಎಂದು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ತೆರಿಗೆ ಪಾವತಿದಾರನಿಗೆ ಇರುವುದಿಲ್ಲ.
ಆದಾಯ ತೆರಿಗೆ ರಿಯಾಯಿತಿ
ಸಂಬಳ ಪಡೆಯುವ ಉದ್ಯೋಗಿಗಳಿಗೆ ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ರಚನೆಯಲ್ಲಿ ದೊಡ್ಡ ಬದಲಾವಣೆಯನ್ನು ಸಚಿವೆ ಘೋಷಿಸಿದ್ದಾರೆ. ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಆದಾಯ ತೆರಿಗೆ ರಿಯಾಯಿತಿಯನ್ನು 5 ಲಕ್ಷ ರೂಪಾಯಿಗಳಿಂದ 7 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಅವರು ಪ್ರಸ್ತಾಪಿಸಿದ್ದಾರೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಳ
ಸಂಬಳ ಪಡೆಯುವ ವರ್ಗ ಮತ್ತು ಪಿಂಚಣಿದಾರರಿಗೆ ಈಗ 45,000 ರೂಪಾಯಿಗಳ ಪ್ರಮಾಣಿತ ಕಡಿತವನ್ನು ಹೊಸ ತೆರಿಗೆ ಪದ್ಧತಿಗೆ ವಿಸ್ತರಿಸಲಾಗಿದೆ. ರೂ. 9 ಲಕ್ಷ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿ ಈಗ ರೂ. 45,000 ತೆರಿಗೆಯನ್ನು ಪಾವತಿಸುತ್ತಾನೆ. ಅದು ಸಂಬಳದ 5 ಪ್ರತಿಶತದಷ್ಟು. ಅಂದರೆ ಈಗಿನ ರೂ 60,000ದಿಂದ ರೂ. 15,000 ಕಡಿತವಾಗುತ್ತದೆ.
ಇದನ್ನೂ ಓದಿ: Union Budget 2023 : ಮನೆ ಖರೀದಿದಾರರಿಗೆ ಗುಡ್ ನ್ಯೂಸ್, ಆವಾಸ್ ಯೋಜನೆಗೆ 79,000 ಕೋಟಿ ರೂ. ಅನುದಾನ
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಗರಿಷ್ಠ ಠೇವಣಿಯನ್ನು ನಿರ್ಮಲಾ ವಿಸ್ತರಿಸಿದ್ದಾರೆ. ಠೇವಣಿ ಖಾತೆಯನ್ನು 15 ಲಕ್ಷದಿಂದ 30 ಲಕ್ಷ ರೂ.ಗಳಿಗೆ ವಿಸ್ತರಿಸಲಾಗುವುದು ಎಂದು ವಿತ್ತ ಸಚಿವೆ ಘೋಷಿಸಿದ್ದಾರೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಮಿತಿ ಏರಿಕೆ
ಸಣ್ಣ ಉಳಿತಾಯ ಯೋಜನೆಯಾದ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಮೇಲಿನ ಮಿತಿಯನ್ನು ಹೆಚ್ಚಿಸಲಾಗಿದೆ. ಏಕ ಖಾತೆಗಳಿಗೆ 4.5 ಲಕ್ಷದಿಂದ 9 ಲಕ್ಷ ಹೊಸ ಮಿತಿ ಮತ್ತು ಜಂಟಿ ಖಾತೆದಾರರಿಗೆ 9 ಲಕ್ಷದಿಂದ 15 ಲಕ್ಷ ಹೊಸ ಮಿತಿ.
MSMEಗಳು ಮತ್ತು ವೃತ್ತಿಪರರು
ಸಣ್ಣ ಉದ್ಯಮಗಳ ತೆರಿಗೆ ವಿನಾಯಿತಿಯನ್ನೂ ವಿಸ್ತರಿಸಲಾಗಿದೆ. ರೂ. 50 ಲಕ್ಷದವರೆಗಿನ ಹಾಗೂ ರೂ. 2 ಕೋಟಿವರೆಗಿನ ವಹಿವಾಟು ಹೊಂದಿರುವ ಸಣ್ಣ ಉದ್ಯಮಗಳ ತೆರಿಗೆ ವಿನಾಯಿತಿಯನ್ನು ಕ್ರಮವಾಗಿ 75 ಲಕ್ಷ ಮತ್ತು 3 ಕೋಟಿ ರೂಪಾಯಿಗಳಿಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ: Union Budget 2023: ಗುಜರಿ ವಾಹನವೂ ಬೇಡ, ಗುಜರಿ ರಾಜಕೀಯವೂ ಬೇಡ! ನಿರ್ಮಲಾ ಅಣಿಮುತ್ತು!