ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಪ್ರಸಕ್ತ ಹಣಕಾಸು ಸಾಲಿನ ಬಜೆಟ್ (Union Budget 2024) ಮಂಡಿಸಲಿದ್ದಾರೆ. ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ (Interim Budget 2024) ಮಂಡಿಸುತ್ತಿದ್ದರೂ, ತೆರಿಗೆದಾರರಿಗೆ ಸಿಹಿ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ಇದೆ. ಅದರಲ್ಲೂ, ಹಳೇ ತೆರಿಗೆ ಪದ್ಧತಿಯಲ್ಲಿ (Old Tax Regime) ಕೆಲ ವಿನಾಯಿತಿ ಸಿಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಹಳೇ ತರಿಗೆ ಪದ್ಧತಿಯಲ್ಲಿ ಏನು ಬದಲಾವಣೆ?
ಹಳೆಯ ತೆರಿಗೆ ಪದ್ಧತಿಯಲ್ಲಿ ಕೆಲ ತೆರಿಗೆ ವಿನಾಯಿತಿಗಳನ್ನು ಘೋಷಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದರಲ್ಲೂ, ರೈತ ಮಹಿಳೆಯರಿಗೆ ವಿಶೇಷ ವಿನಾಯಿತಿ, ಸುಮಾರು 7 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡುವುದು ಸೇರಿ ಹಲವು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ. ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲೂ ಈ ಬಾರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದಬಂದಿದೆ.
ಹೊಸ ತೆರಿಗೆ ಪದ್ಧತಿಯಲ್ಲಿ ಏನಿದೆ ನಿರೀಕ್ಷೆ?
ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳಬೇಕು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವು ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ತರುವ ನಿರೀಕ್ಷೆ ಇದೆ. ಮೂಲ ಸ್ಲ್ಯಾಬ್‌ಅನ್ನು 5 ಲಕ್ಷ ರೂ.ವರೆಗೆ ಏರಿಕೆ ಮಾಡುವುದು, ಹೊಸ ತೆರಿಗೆ ಪದ್ಧತಿಯಲ್ಲೂ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತ ಅಳವಡಿಸಿಕೊಳ್ಳುವುದು ಸೇರಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Budget Session: ಜ.31ರಿಂದ ಬಜೆಟ್ ಅಧಿವೇಶನ; ಕಿಸಾನ್ ಸಮ್ಮಾನ್ ನಿಧಿ ಹಣ ಡಬಲ್?
ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡಿಸುವ ಮೂಲಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆ ಬರೆಯಲಿದ್ದಾರೆ. ಮೊರಾರ್ಜಿ ದೇಸಾಯಿ ಅವರ ಬಳಿಕ ಸತತ 6 ಬಜೆಟ್ ಮಂಡಿಸುತ್ತಿರುವ ಎರಡನೇ ವಿತ್ತ ಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಫೆ.1ರಂದು ಮಧ್ಯಂತರ ಬಜೆಟ್ ಮಂಡನೆಯಾದರೂ, ಲೋಕಸಭೆ ಚುನಾವಣೆ ಬಳಿಕ ರಚನೆಯಾಗುವ ಸರ್ಕಾರವು ಮತ್ತೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತದೆ.
ರೈತರಿಗೂ ಸಿಹಿ ಸುದ್ದಿ ನಿರೀಕ್ಷೆ
ಶೇ. 33ಕ್ಕೂ ಹೆಚ್ಚಿನ ರೈತರು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 6,000 ರೂ. ಒದಗಿಸಲಾಗುತ್ತದೆ. 2023-24ರಲ್ಲಿ ಕೇಂದ್ರವು ಈ ಯೋಜನೆಗೆ 60,000 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದು 2024-25ರಲ್ಲಿ ಹೆಚ್ಚಾಗಲಿದೆ. ವಿವಿಧ ಸಚಿವಾಲಯಗಳಿಗೆ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ