ನವದೆಹಲಿ: ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ರಷ್ಟು ಇಳಿಕೆ ಮಾಡಲಾಗುವುದು ಎಂಬುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್‌ನಲ್ಲಿ (Union Budget 2024) ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಇಳಿಕೆಯಾಗಲಿದೆ. ಇದು ಗ್ರಾಹಕರಿಗೆ ಶುಭ ಸುದ್ದಿಯಾಗಿದೆ. ಇನ್ನು, ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಇಳಿಸಿರುವುದು ಚಿನ್ನದ ಮೇಲೆ ಹೂಡಿಕೆ ಮಾಡಲು ಸಕಾರಾತ್ಮಕ ಪರಿಣಾಮವೇ? ಈಗ ಚಿನ್ನದ ಮೇಲೆ ಹೂಡಿಕೆ ಮಾಡಲು ಸಕಾಲವೇ ಎಂಬ ಪ್ರಶ್ನೆಗಳು ಉದಯಿಸಿವೆ. ಇಂತಹ ಪ್ರಶ್ನೆಗಳಿಗೆ ತಜ್ಞರು ಉತ್ತರ ನೀಡಿದ್ದಾರೆ.
ಕಸ್ಟಮ್ಸ್ ಸುಂಕ ಇಳಿಸಿದ್ದು ಹೂಡಿಕೆಗೆ ಸಕಾರಾತ್ಮಕವೇ?
ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ರಷ್ಟು ಇಳಿಸಿರುವುದು ಗ್ರಾಹಕರು ಖರೀದಿಸಲು ಉತ್ತಮ ಸಮಯವಾಗಿರುವುದರ ಜತೆಗೆ ಹೂಡಿಕೆಗೂ ಸಕಾಲವಾಗಿದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಚಿನ್ನದ ಬೆಲೆಯು ಏಕಾಏಕಿ ಇಳಿಕೆಯಾಗಲಿದ್ದು, ಮದುವೆ ಸೇರಿ ಹಲವು ಸಮಾರಂಭಗಳಿಗೆ ಗ್ರಾಹಕರು ಚಿನ್ನ ಖರೀದಿಸಲು ಅನುಕೂಲವಾಗಲಿದೆ. ಇನ್ನು, ಚಿನ್ನದ ಬೆಲೆಯು ಇಳಿಕೆಯಾಗುವ ಕಾರಣ ಹೂಡಿಕೆ ಮಾಡುವವರೂ ಹೆಚ್ಚಿನ ಪ್ರಮಾಣದ ಚಿನ್ನವನ್ನು ಖರೀದಿಸಬಹುದಾಗಿದೆ.
ಚಿನ್ನದ ಬೆಲೆಯನ್ನು ಜಾಗತಿಕ ಆರ್ಥಿಕ ಪರಿಸ್ಥಿತಿಗಳು, ಜಾಗತಿಕ ರಾಜಕೀಯ ಬೆಳವಣಿಗೆಗಳು, ಹೂಡಿಕೆದಾರರ ಮನಸ್ಥಿತಿ ಸೇರಿ ಹಲವು ಅಂಶಗಳ ಮೇಲೆ ನಿರ್ಧರಿಸಲಾಗುತ್ತದೆ. ಇದರಿಂದಾಗಿ, ಬಹುತೇಕ ಸಂದರ್ಭದಲ್ಲಿ ಚಿನ್ನದ ಬೆಲೆಯು ಏರಿಕೆಯೇ ಆಗುತ್ತದೆ. ಹಾಗಾಗಿ, ಚಿನ್ನದ ಬೆಲೆಯು ಕಡಿಮೆಯಾದಾಗಲೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರೆ, ಅದು ಹೂಡಿಕೆಯ ದೃಷ್ಟಿಯಿಂದ ಉತ್ತಮ ನಿರ್ಧಾರವಾಗುತ್ತದೆ. ಆದರೆ, ಇರುವ ಹಣವನ್ನೆಲ್ಲ ಚಿನ್ನದ ಮೇಲೆಯೇ ಹೂಡಿಕೆ ಮಾಡುವುದು ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
“ಚಿನ್ನದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಇಳಿಕೆ ಮಾಡಿರುವುದು ಖರೀದಿ ಜತೆಗೆ ದೇಶೀಯ ಚಿನ್ನದ ಉದ್ಯಮದಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಲಿದೆ. ಇದರಿಂದಾಗಿ ಚಿನ್ನದ ಮೇಲಿನ ಒಟ್ಟು ಶೇ.18.5ರಷ್ಟು ತೆರಿಗೆಯು ಶೇ.9ಕ್ಕೆ (ಜಿಎಸ್‌ಟಿ ಸೇರಿ) ಇಳಿಯಲಿದೆ. ಇದರಿಂದ ಖರೀದಿ ಹಾಗೂ ಹೂಡಿಕೆ ಮಾಡಲು ಉತ್ತಮ ಸಮಯವಾಗಿದೆ” ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ರೀಜನಲ್ ಸಿಇಒ ಸಚಿನ್ ಜೈನ್ ಅವರು ನ್ಯೂಸ್ 18 ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಹೂಡಿಕೆ ಮಾಡುವವರಿಗೆ ತೆರಿಗೆ ಬಗ್ಗೆಯೂ ಗಮನ ಇರಲಿ
ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ಹೆಚ್ಚಾಗಿ ಚಿನ್ನವನ್ನು ಖರೀದಿಸುವ ಮುನ್ನ ಕ್ಯಾಪಿಟಲ್ ಗೇನ್ (Capital Gain) ಬಗ್ಗೆಯೂ ಗಮನ ಹರಿಸಬೇಕು. ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಕ್ಯಾಪಿಟಲ್ ಗೇನ್ ಅಂದರೆ, ಹೂಡಿಕೆ ಮೇಲಿನ ತೆರಿಗೆಯನ್ನು ಏರಿಕೆ ಮಾಡಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಿ, ಬಳಿಕ ಚಿನ್ನವನ್ನು ಮಾರಾಟ ಮಾಡಲು ಮುಂದಾದರೆ, ತೆರಿಗೆ ಹೊಡೆತ ಬೀಳುತ್ತದೆ ಎಂಬುದು ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ಸಂಗತಿಯಾಗಿದೆ.
ನೀವು ಚಿನ್ನವನ್ನು ಖರೀದಿಸಿ, ಅದನ್ನು 2 ವರ್ಷದ ಬಳಿಕ ಮಾರಾಟ ಮಾಡಿದರೆ, ನಿಮಗೆ ನಿಗದಿಯಂತೆ ಆದಾಯ ತೆರಿಗೆ ಸ್ಲ್ಯಾಬ್ ರೇಟ್ ಪ್ರಕಾರ ತೆರಿಗೆಯನ್ನು ವಿಧಿಸಲಾಗುತ್ತದೆ. ಆದರೆ, ನೀವು ಖರೀದಿಸಿದ ಚಿನ್ನವನ್ನು 24 ತಿಂಗಳ ಬಳಿಕ ಮಾರಾಟ ಮಾಡಿದರೆ, ನೀವು ದೀರ್ಘಾವಧಿ ಹೂಡಿಕೆ ಕ್ಯಾಪಿಟಲ್ ಗೇನ್ಸ್ ವ್ಯಾಪ್ತಿಗೆ ಬಂದು, ಮಾರಾಟ ಮಾಡಿದ ಬಳಿಕ ಆಗುವ ಕ್ಯಾಪಿಟಲ್ ಗೇನ್‌ನಲ್ಲಿ ಶೇ.12.5ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: Union Budget 2024: ಹಳೇ ತೆರಿಗೆ Vs ಹೊಸ ತೆರಿಗೆ; ಯಾರಿಗೆ ಯಾವುದು ಅನುಕೂಲ? ಇಲ್ಲಿದೆ ಕಂಪ್ಲೀಟ್ ಮಾಹಿತಿ