Site icon Vistara News

Union Budget 2024: ಬಜೆಟ್‌ಗೂ ಮೊದಲು, ನಂತರ ಹೂಡಿಕೆ ಮಾಡುವುದು ಲಾಭವೇ? ತಜ್ಞರು ಹೇಳೋದಿಷ್ಟು

Union Budget 2024

Union Budget 2024: 7 Income Tax reliefs highly expected from FM Nirmala Sitharaman on July 23

ನವದೆಹಲಿ: ಎನ್‌ಡಿಎ ಸರ್ಕಾರವು (NDA Government) ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಮೂರನೇ ಅವಧಿಯ ಮೊದಲ ಬಜೆಟ್‌ಅನ್ನು (Union Budget 2024) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಜುಲೈ 23ರಂದು ಮಂಡಿಸಲಿದ್ದಾರೆ. ಬಡವರು, ಮಧ್ಯಮ ವರ್ಗದವರಿಗೆ ಬಜೆಟ್‌ ಕುರಿತು ಭಾರಿ ನಿರೀಕ್ಷೆಗಳಿವೆ. ಇನ್ನು, ಬಜೆಟ್‌ಗೂ ಕೆಲ ದಿನಗಳ ಮೊದಲು ಹಾಗೂ ನಂತರ ಷೇರು ಮಾರುಕಟ್ಟೆಯಲ್ಲಿ (Stock Market) ಹೂಡಿಕೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಷೇರುಪೇಟೆ ತಜ್ಞರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಜ್ಞರು ಹೇಳುವುದಿಷ್ಟು…

ಷೇರುಪೇಟೆ ಬ್ರೋಕರೇಜ್‌ ಕಂಪನಿಯಾದ ಮಾರ್ಗನ್‌ ಸ್ಟ್ಯಾನ್ಲೆಯ ಹೂಡಿಕೆ ತಜ್ಞರು ಹಲವು ಸಲಹೆಗಳನ್ನು ನೀಡಿದ್ದಾರೆ. “ಕಳೆದ 30 ವರ್ಷಗಳ ಮಾಹಿತಿಯನ್ನು ಅವಲೋಕಿಸಿದರೆ, ಬಜೆಟ್‌ ಮಂಡನೆಯಾದ 30 ದಿನಗಳಲ್ಲಿ ಷೇರುಪೇಟೆಯಲ್ಲಿ ಶೇ.80ರಷ್ಟು ಬೆಳವಣಿಗೆ ಇರುತ್ತದೆ. ಈ ಅವಧಿಯಲ್ಲಿ ಎರಡು ಅಥವಾ ಮೂರು ಬಾರಿ ಮಾತ್ರ ಷೇರುಪೇಟೆಯಲ್ಲಿ ಕುಸಿತ ಉಂಟಾಗುತ್ತದೆ. 30 ವರ್ಷಗಳಲ್ಲಿ ಎರಡು ಬಾರಿ ಮಾತ್ರ ಬಜೆಟ್‌ಗೂ ಮುನ್ನ ಹಾಗೂ ನಂತರದಲ್ಲಿ ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಲಾಭವಾಗಿತ್ತು” ಎಂದಿದ್ದಾರೆ. ಅದರಂತೆ, ಬಜೆಟ್‌ಗೂ ಮುನ್ನ ಹೂಡಿಕೆ ಮಾಡುವುದಕ್ಕಿಂತ ಬಜೆಟ್‌ ನಂತರ ಹೂಡಿಕೆ ಮಾಡುವುದು ಲೇಸು ಎಂಬುದಾಗಿ ತಜ್ಞರು ಸೂಚಿಸಿದ್ದಾರೆ.

ವಿತ್ತೀಯ ಕೊರತೆಯು ಶೇ.5ಕ್ಕಿಂತ ಕಡಿಮೆ ಇದ್ದರೆ, ಷೇರು ಪೇಟೆ ಮಂದಿಗೆ ಸಂತಸ ತರುವುದಿಲ್ಲ. ಹಾಗೊಂದು ವೇಳೆ ಹೂಡಿಕೆ ಮಾಡುವುದಿದ್ದರೆ, ಉದ್ಯಮಗಳು ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡುವುದು ಒಳಿತು. ಒಟ್ಟಿನಲ್ಲಿ ಬಜೆಟ್‌ ನಂತರ ದಿಢೀರನೆ ಏರಿಕೆ ಕಾಣುವ ಷೇರುಪೇಟೆಯು ಆಗಾಗ ಕುಸಿತದ ಮೂಲಕ ಹೂಡಿಕೆದಾರರಿಗೆ ಆಘಾತ ನೀಡಲಿದೆ ಎಂದು ತಿಳಿಸಿದ್ದಾರೆ.

ಬಜೆಟ್‌ ಕುರಿತ ನಿರೀಕ್ಷೆಗಳು ಏನೇನು?

“ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ” ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್‌ ಮಂಡಿಸಿದ್ದರು. ಇದು ಮಧ್ಯಂತರ ಬಜೆಟ್‌ ಆದ ಕಾರಣ ಮಹತ್ವದ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ನೂತನ ಸರ್ಕಾರ ರಚನೆಯಾಗಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೊಡುಗೆ, ತೆರಿಗೆ ಹೊರೆ ಇಳಿಸುವುದು ಸೇರಿ ಹಲವು ಅಂಶಗಳು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದು ತಿಳಿದುಬಂದಿದೆ.

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಇದೇ ತಿಂಗಳು ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ಇದನ್ನೂ ಓದಿ: Share Market Crash: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟ

Exit mobile version