Site icon Vistara News

Union Budget 2024: ನೌಕರರಿಗೆ ಸಿಹಿ ಸುದ್ದಿ; ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತ 70 ಸಾವಿರ ರೂ.ಗೆ ಏರಿಕೆ?

Union Budget 2024

Union Budget 2024: Relief to salaried middle class on cards, Nirmala Sitharman may hike standard deduction to Rs 70,000

ನವದೆಹಲಿ: ದೇಶದ ಜನ, ಅದರಲ್ಲೂ ಬಡವರು ಹಾಗೂ ಕುತೂಹಲದಿಂದ ಕಾಯುತ್ತಿರುವ ಕೇಂದ್ರ ಬಜೆಟ್‌ಗೆ (Union Budget 2024) ದಿನಾಂಕ ನಿಗದಿಯಾಗಿದೆ. ಜುಲೈ 22ರಿಂದ ಆಗಸ್ಟ್‌ 12ರವರೆಗೆ ಬಜೆಟ್‌ ಅಧಿವೇಶನ (Union Budget Session) ನಡೆಯಲಿದ್ದು, ಜುಲೈ 23ರಂದು ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ದಾಖಲೆಯ ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಹಾಗಾಗಿ, ಬಜೆಟ್‌ನಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಏನೆಲ್ಲ ಘೋಷಣೆಗಳು ಇರಲಿವೆ ಎಂಬ ನಿರೀಕ್ಷೆ ಮೂಡಿದೆ. ಅಷ್ಟೇ ಅಲ್ಲ, ಸಂಬಳ ಪಡೆಯುವ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 70 ಸಾವಿರ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸದ್ಯ, ಹೊಸ ಹಾಗೂ ಹಳೆಯ ತೆರಿಗೆ ಪದ್ಧತಿಯಲ್ಲೂ 50 ಸಾವಿರ ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಇದೆ. ಇದನ್ನು, 70 ಸಾವಿರ ರೂ.ಗೆ ಏರಿಕೆ ಮಾಡಿದರೆ, ಸಂಬಳದಾರರು ಹೆಚ್ಚಿನ ತೆರಿಗೆ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಹಣದುಬ್ಬರ ಏರಿಕೆ ಸೇರಿ ಹಲವು ಕಾರಣಗಳಿಂದಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಅಥವಾ ತೆರಿಗೆ ವಿನಾಯಿತಿ ಮೊತ್ತವನ್ನು ಏರಿಕೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಹಾಗಾಗಿ, ಮೊತ್ತವನ್ನು 70 ಸಾವಿರ ರೂ.ಗೆ ಏರಿಕೆ ಮಾಡಲು ನಿರ್ಮಲಾ ಸೀತಾರಾಮನ್‌ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸ್ಟಾಂಡರ್ಡ್‌ ಡಿಡಕ್ಷನ್‌ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು ಅರ್ಹವಿರುವವರು ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತದ ಅಡಿಯಲ್ಲಿ ವಿನಾಯಿತಿ ಪಡೆಯಲಿದ್ದಾರೆ.

“ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ” ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್‌ ಮಂಡಿಸಿದ್ದರು. ಇದು ಮಧ್ಯಂತರ ಬಜೆಟ್‌ ಆದ ಕಾರಣ ಮಹತ್ವದ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ನೂತನ ಸರ್ಕಾರ ರಚನೆಯಾಗಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೊಡುಗೆ, ತೆರಿಗೆ ಹೊರೆ ಇಳಿಸುವುದು ಸೇರಿ ಹಲವು ಅಂಶಗಳು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದು ತಿಳಿದುಬಂದಿದೆ.

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಇದೇ ತಿಂಗಳು ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ಇದನ್ನೂ ಓದಿ: Union Budget 2024: ಕೇಂದ್ರ ಬಜೆಟ್;‌ 8ನೇ ವೇತನ ಆಯೋಗ ಸೇರಿ 7 ಬೇಡಿಕೆ ಇಟ್ಟ ಸರ್ಕಾರಿ ನೌಕರರು!

Exit mobile version