Site icon Vistara News

Union Budget 2024: ತೆರಿಗೆ ವಿನಾಯಿತಿ, ಬಡವರಿಗೆ ಬಂಪರ್;‌ ಇಂದಿನ ಬಜೆಟ್‌ನ ನಿರೀಕ್ಷೆಗಳೇನು? ಇಲ್ಲಿದೆ ಮಾಹಿತಿ

Union Budget 2024

Union Budget 2024: Tax Exemption To Big Announcements For Poor, Here Are The Expectations

ನವದೆಹಲಿ: ದೇಶದ ಜನ ಕುತೂಹಲದಿಂದ, ನಿರೀಕ್ಷೆಯಿಂದ ಕಾಯುತ್ತಿರುವ ಕೇಂದ್ರ ಬಜೆಟ್‌ ಮಂಡನೆಗೆ (Union Budget 2024) ಕೆಲವೇ ಕ್ಷಣಗಳು ಬಾಕಿ ಇವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮೊದಲು, ಕೇಂದ್ರ ಬಜೆಟ್‌ನಿಂದ ಯಾವ ವರ್ಗದವರ ನಿರೀಕ್ಷೆಗಳು ಏನೇನು? ಕೇಂದ್ರ ಸರ್ಕಾರ ಯಾವುದಕ್ಕೆ ಒತ್ತು ಕೊಡುವ ಸಾಧ್ಯತೆ ಇದೆ ಎಂಬುದರ ಕಿರು ಮಾಹಿತಿ ಹೀಗಿದೆ.

ಸೆಕ್ಷನ್‌ 80 ಸಿ ಅಡಿಯಲ್ಲಿ ವಿನಾಯಿತಿ ಮೊತ್ತ ಹೆಚ್ಚಳ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ಸಂಬಳದಾರರು ಹೂಡಿಕೆ ಹಾಗೂ ವೆಚ್ಚಗಳ ಮೇಲೆ ವಾರ್ಷಿಕವಾಗಿ 1.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಗೃಹ ಸಾಲದ ಅಸಲು, ಬಡ್ಡಿ, ಆರೋಗ್ಯ ವಿಮೆಯ ಪ್ರೀಮಿಯಂ ಮೊತ್ತ, ಪಿಪಿಎಫ್‌ ಹೂಡಿಕೆ ಸೇರಿ ಹಲವು ರೀತಿಯ ಹೂಡಿಕೆಗಳು ಹಾಗೂ ವೆಚ್ಚಗಳ ಮೂಲಕ 1.5 ಲಕ್ಷರೂ.ಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಈ ಮೊತ್ತವನ್ನು ಕೇಂದ್ರ ಸರ್ಕಾರವು 1.5 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದರಿಂದ ಮಧ್ಯಮ ವರ್ಗದವರಿಗೆ ಭಾರಿ ಅನುಕೂಲವಾಗಲಿದೆ.

ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತದ ಏರಿಕೆ

ಸಂಬಳ ಪಡೆಯುವ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 70 ಸಾವಿರ ರೂ. ಅಥವಾ ಒಂದು ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸದ್ಯ, ಹೊಸ ಹಾಗೂ ಹಳೆಯ ತೆರಿಗೆ ಪದ್ಧತಿಯಲ್ಲೂ 50 ಸಾವಿರ ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಇದೆ. ಇದನ್ನು, 1 ಲಕ್ಷ ರೂ.ಗೆ ಏರಿಕೆ ಮಾಡಿದರೆ, ಸಂಬಳದಾರರು ಹೆಚ್ಚಿನ ತೆರಿಗೆ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಹಣದುಬ್ಬರ ಏರಿಕೆ ಸೇರಿ ಹಲವು ಕಾರಣಗಳಿಂದಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಅಥವಾ ತೆರಿಗೆ ವಿನಾಯಿತಿ ಮೊತ್ತವನ್ನು ಏರಿಕೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಹಾಗಾಗಿ, ಮೊತ್ತವನ್ನು ಏರಿಕೆ ಮಾಡಲು ನಿರ್ಮಲಾ ಸೀತಾರಾಮನ್‌ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸ್ಟಾಂಡರ್ಡ್‌ ಡಿಡಕ್ಷನ್‌ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು ಅರ್ಹವಿರುವವರು ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತದ ಅಡಿಯಲ್ಲಿ ವಿನಾಯಿತಿ ಪಡೆಯಲಿದ್ದಾರೆ.

ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಸಾಧ್ಯತೆ

“ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ” ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ 2.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಇದ್ದು, ಈ ಮೊತ್ತವನ್ನು 5 ಲಕ್ಷ ರೂ.ಗೆ ಏರಿಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಇವುಗಳ ಜತೆಗೆ ನೌಕರರ ಮನೆ ಬಾಡಿಗೆ ಭತ್ಯೆ (HRA) ಹಾಗೂ 80 ಟಿಟಿಎ ಅಡಿಯಲ್ಲಿ ಮೊತ್ತವನ್ನು 10 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಏರಿಕೆ ಮಾಡುವುದು ಸೇರಿ ಹಲವು ನಿರೀಕ್ಷೆಗಳಿವೆ.

ಆಯುಷ್ಮಾನ್‌ ಭಾರತ್‌ ವಿಮೆ ಮೊತ್ತ ಹೆಚ್ಚಳ?

ದೇಶದ ಸುಮಾರು 50 ಕೋಟಿ ಬಡವರಿಗೆ ಆಯುಷ್ಮಾನ್‌ ಭಾರತ್‌ ಯೋಜನೆ ಅಡಿಯಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು, 70 ವರ್ಷ ದಾಟಿದ ಎಲ್ಲರಿಗೂ ಆಯುಷ್ಮಾನ್‌ ಭಾರತ್‌ ಯೋಜನೆಯ ಸೌಲಭ್ಯವನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರ ಜತೆಗೆ, ವಿಮಾ ಮೊತ್ತವನ್ನು 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಏರಿಕೆ ಮಾಡುವ ಕುರಿತು ಕೂಡ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 12,076 ಕೋಟಿ ರೂ. ಹೆಚ್ಚುವರಿಯಾಗಿ ಖರ್ಚಾಗಲಿದೆ ಎಂದು ತಿಳಿದುಬಂದಿದೆ.

ಸಣ್ಣ ಉದ್ಯಮಿಗಳಿಗೂ ಇದೆ ನಿರೀಕ್ಷೆ

ಈ ಬಾರಿ ಬಜೆಟ್‌ನಲ್ಲಿ ವಾಣಿಜ್ಯ ವಿಮಾನ ತಯಾರಿಕೆಯ ಜತೆಗೆ ಆಟಿಕೆಗಳು, ಜವಳಿ ಮತ್ತು ಉಡುಪುಗಳ ತಯಾರಿಕೆಯಂತಹ ಕೈಗಾರಿಕಾ ವಲಯಗಳಿಗೆ ಹಣಕಾಸಿನ ಪ್ರೋತ್ಸಾಹ ನೀಡುವ ನಿರೀಕ್ಷೆ ಇದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಕಾರ್ಮಿಕ-ತೀವ್ರ ಉತ್ಪಾದನೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ, ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ವಿಸ್ತರಿಸುವ ಮೂಲಕ ಸೇವಾ ರಫ್ತಿನ ಮೇಲೆ ನಿರಂತರ ಗಮನ ಮತ್ತು ದೇಶೀಯ ಆಹಾರ ಪೂರೈಕೆ ಸರಪಳಿಯ ಮೇಲೆ ಒತ್ತು ನೀಡುವುದರ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ನಿರೀಕ್ಷೆ ಇದೆ.

ಇದನ್ನೂ ಓದಿ: Economic Survey 2023-24: ಉದ್ಯೋಗ ಸೃಷ್ಟಿ, ಕೃಷಿ ಏಳಿಗೆ; ಬಜೆಟ್‌ಗೂ ಮುನ್ನ ಕೇಂದ್ರದಿಂದ ಮಹತ್ವದ ಸುಳಿವು

Exit mobile version