Site icon Vistara News

Union Budget 2024: ಸಂಬಳದಾರರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಈ ಬಜೆಟ್ ನಲ್ಲಿರುವ 5 ಪ್ರಯೋಜನಗಳಿವು

union budget 2024

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪಷ್ಟ ಬಹುಮತ ಪಡೆದ ಎನ್‌ಡಿಎ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಜೆಟ್‌ಅನ್ನು ಜನರ ಮುಂದಿಟ್ಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಏಳನೇ ಬಾರಿಗೆ ಬಜೆಟ್‌ (Union Budget 2024) ಮಂಡಿಸಿದ್ದು, ಸಂಬಳದಾರರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಕೇಂದ್ರೀಕರಿಸಲಾಗಿದೆ, ಹಾಗಿದ್ದರೆ ಈ ಬಜೆಟ್ ನಲ್ಲಿರುವ 5 ಪ್ರಯೋಜನಗಳಿವು.

ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತ ಏರಿಕೆ

ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಗುಡ್‌ ನ್ಯೂಸ್‌ ನೀಡಿದೆ. ಹೊಸ ತೆರಿಗೆದಾರರಿಗೆ ಸ್ಟಾಂಡರ್ಡ್‌ ಡಿಡಕ್ಷನ್‌ 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಪಿಂಚಣಿದಾರರಿಗೆ 15 ಸಾವಿರ ರೂ.ನಿಂದ 25 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ 4 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾವಣೆ

ಹೊಸ ತೆರಿಗೆ ಪದ್ಧತಿಯಲ್ಲಿ ಕೂಡ ಬದಲಾವಣೆ ಮಾಡಲಾಗಿದ್ದು, 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ. ಇನ್ನು, ಎನ್‌ಜಿಒ ಸೇರಿ ಯಾವುದೇ ರೀತಿಯ ದಾನ ಮಾಡುವವರಿಗೆ ಎರಡು ಸ್ಲ್ಯಾಬ್‌ ಬದಲು, ಒಂದು ಸ್ಲ್ಯಾಬ್‌ ಮಾಡಲಾಗಿದೆ. ಟಿಡಿಎಸ್‌ ನಿಯಮಗಳನ್ನೂ ಸುಲಭಗೊಳಿಸಲು ತೀರ್ಮಾನಿಸಲಾಗಿದೆ. ಟಿಡಿಎಸ್‌ ಮರುಪಾವತಿ ವಿಳಂಬವಾಗುವುದನ್ನೂ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಇ-ಕಾಮರ್ಸ್‌ ಮೇಲಿನ ತೆರಿಗೆಯನ್ನೂ ಇಳಿಸಲು ತೀರ್ಮಾನಿಸಲಾಗಿದೆ. ಆದರೆ, ಮ್ಯೂಚುವಲ್‌ ಫಂಡ್‌ ಮೇಲಿನ ಹೂಡಿಕೆಗೆ ತೆರಿಗೆ ವಿನಾಯಿತಿ ಇರುವುದಿಲ್ಲ ಎಂಬುದಾಗಿ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್ಸ್‌

0-3 ಲಕ್ಷ ರೂ.: ತೆರಿಗೆ ಇರಲ್ಲ
3-7 ಲಕ್ಷ ರೂ.: 5%
7-10 ಲಕ್ಷ ರೂ. : 10%
10-12 ಲಕ್ಷ ರೂ.: 15%
12-15 ಲಕ್ಷ ರೂ.: 20%
15 ಲಕ್ಷ ರೂ.ಗಿಂತ ಹೆಚ್ಚು : 30%

ಮೊದಲ ಬಾರಿ ಉದ್ಯೋಗಿಗಳಿಗೆ ಒಂದು ತಿಂಗಳ ವೇತನ

ಬಜೆಟ್​ನಲ್ಲಿ (Union Budget 2024) ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ದಾಖಲಾಗುವ ಆಧಾರದ ಮೇಲೆ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಮೂರು ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸಿದ್ದಾರೆ. ಸ್ಕೀಮ್ ಎ (ಹೊಸಬರಿಗೆ ಒಂದು ತಿಂಗಳ ವೇತನ), ಸ್ಕೀಮ್ ಬಿ (ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ಸೃಷ್ಟಿ) ಮತ್ತು ಸ್ಕೀಮ್ ಸಿ (ಉದ್ಯೋಗದಾತರಿಗೆ ಬೆಂಬಲ) ಸೇರಿದಂತೆ ಈ ಮೂರು ಯೋಜನೆಗಳನ್ನು ಪ್ರಕಟಿಸಿದೆ.

ಮೊದಲ ಬಾರಿಗೆ ಉದ್ಯೋಗಿಗಳು ಇಪಿಎಫ್ಒಗೆ ನೋಂದಾಯಿಸಿಕೊಳ್ಳುವಾಗ ಈ ಅನುಕೂಲ ನೀಡಲಾಗಿದೆ.ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟಿರುವ ಮೊದಲ ಬಾರಿಗೆ ಉದ್ಯೋಗಿಗಳಿಗೆ ಮೂರು ಕಂತುಗಳಲ್ಲಿ ಒಂದು ತಿಂಗಳ ವೇತನವನ್ನು ನೇರವಾಗಿ ವರ್ಗಾಯಿಸಲಾಗುವುದು. ಗರಿಷ್ಠ ಮಿತಿ 15,000 ರೂ.ಗಳವರೆಗೆ ಇರುತ್ತದೆ. ಗರಿಷ್ಠ ಸಂಬಳ ತಿಂಗಳಿಗೆ 1 ಲಕ್ಷ ರೂಪಾಯಿ. ಇದರಿಂದ 2.1 ಕೋಟಿ ಯುವಕರಿಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

500 ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್‌ ಯೋಜನೆ

ಈ ಬಾರಿ ಬಜೆಟ್‌ನಲ್ಲಿ 500 ಸಂಸ್ಥೆಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್‌ ಯೋಜನೆ ಘೋಷಿಸಲಾಗಿದೆ. ಇಂಟರ್ನ್‌ಶಿಪ್ ಮಾಡುವವರು ತಿಂಗಳಿಗೆ ₹ 5,000 ಇಂಟರ್ನ್‌ಶಿಪ್ ಭತ್ಯೆಯನ್ನು ಮತ್ತು ₹ 6,000 ಒಂದು ಬಾರಿ ಸಹಾಯವನ್ನು ಪಡೆಯುತ್ತಾರೆ. ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ 5 ನೇ ಯೋಜನೆಯಾಗಿ, ನಮ್ಮ ಸರ್ಕಾರವು 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ 500 ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಸಮಗ್ರ ಯೋಜನೆಯನ್ನು ಪ್ರಾರಂಭಿಸುತ್ತದೆ. ಅವರು 12 ತಿಂಗಳ ಕಾಲ ನಿಜ ಜೀವನದ ವ್ಯಾಪಾರ ಪರಿಸರ, ವಿವಿಧ ವೃತ್ತಿಗಳು ಮತ್ತು ಉದ್ಯೋಗಾವಕಾಶಗಳಿಗೆ ಒಡ್ಡಿಕೊಳ್ಳುತ್ತಾರೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಕುಟುಂಬ ಪಿಂಚಣಿ ಮೇಲೆ ತೆರಿಗೆ ಕಡಿತ

ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ಪಿಂಚಣಿದಾರರ ಉತ್ತಮ ಆರ್ಥಿಕ ಸ್ಥಿರತೆಗಾಗಿ ಕುಟುಂಬ ಪಿಂಚಣಿ ಕಡಿತದ ಮೊತ್ತವನ್ನು ಹೆಚ್ಚಿಸುವ ಯೋಜನೆಯನ್ನು ಸೀತಾರಾಮನ್ ಘೋಷಿಸಿದರು. ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಕಡಿತದ ಮೊತ್ತವನ್ನು ₹ 15,000 ರಿಂದ ₹ 25,000 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಪಿಂಚಣಿದಾರರಿಗೆ ಕುಟುಂಬ ಪಿಂಚಣಿ ಮೇಲಿನ ಕಡಿತವನ್ನು ₹ 15,000 ರಿಂದ ₹ 25,000 ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು, ಈ ಕ್ರಮವು ಸುಮಾರು ಬರೋಬ್ಬರಿ 4 ಕೋಟಿ ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ಪಿಂಚಣಿದಾರರಿಗೆ ಅನುಕೂಲಕರವಾಗಲಿದೆ.

ಇದನ್ನೂ ಓದಿ:R Ashok: ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ, ಸುಭದ್ರ ಬಜೆಟ್‌: ಆರ್‌. ಅಶೋಕ್‌ ಶ್ಲಾಘನೆ

Exit mobile version